ಹೊಡೆದಾಟದ ಹಾಡಿನೊಂದಿಗೆ ಟಕ್ಕರ್ ಮುಕ್ತಾಯ
Posted date: 13 Mon, May 2019 – 09:42:34 PM

ಎಸ್.ಎಲ್.ಎನ್ ಕ್ರಿಯೇಶನ್ಸ್ ಬ್ಯಾನರಿನ ಮೂಲಕ ಕೆ.ಎನ್. ನಾಗೇಶ್ ಕೋಗಿಲು ಅವರು ನಿರ್ಮಿಸುತ್ತಿರುವ ಟಕ್ಕರ್ ಚಿತ್ರಕ್ಕೆ ಕುಂಬಳಕಾಯಿ ಒಡೆಯುವುದರೊಂದಿಗೆ ಚಿತ್ರೀಕರಣ ಮುಗಿಸಲಾಗಿದೆ. ವಿ.ರಘು ಶಾಸ್ತ್ರಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಮನೋಜ್ ಮತ್ತು ರಂಜನಿ ರಾಘವನ್ ಜೋಡಿಯಾಗಿ ನಟಿಸಿದ್ದಾರೆ.

ಸಿನಿಮಾದಲ್ಲಿ ಬರುವ ಹೀರೋ ಇಂಟ್ರಡಕ್ಷನ್‌ಗೆ ರೋಚಕವಾದ ಫೈಟ್ಸ್ ಮತ್ತು ಅದಕ್ಕೆ ಹೊಂದುವಂತೆ ಹಾಡನ್ನು ಬೆಸೆಯಲಾಗಿದೆ. ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜನೆಯಲ್ಲಿ ಈಗಾಗಲೇ ಸಾಹಸ ದೃಶ್ಯಗಳು ಚಿತ್ರೀಕರಣಗೊಂಡಿದ್ದವರು. ಈಗ ಸದ್ಯ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ನೃತ್ಯ ನಿರ್ದೇಶಕ ಮೋಹನ್ ಟಕ್ಕರ್ ಎಂಟ್ರಿ ಸಾಂಗ್ ಅನ್ನು ವಿಭಿನ್ನವಾಗಿ ಕೊರಿಯೋಗ್ರಫಿ ಮಾಡಿದ್ದಾರೆ. ಗಾಳಿ, ನೀರು ಮತ್ತು ಬೆಂಕಿಯ ಹಿನ್ನೆಲೆಯ ಕಾನ್ಸೆಪ್ಟಿನಲ್ಲಿ ಟಕ್ಕರ್ ಟೈಟಲ್ ಸಾಂಗ್ ಅನ್ನು ಬೆಂಗಳೂರಿನ ಹೆಚ್.ಎಂ.ಟಿ.ಯಲ್ಲಿ ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರ ತಂಡ ಹಾಕಿದ್ದ ಸೆಟ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. “ಟಕ್ಕರ್ ಸಿನಿಮಾದ ಇಂಟ್ರಡಕ್ಷನ್‌ನಲ್ಲಿ ಫೈಟ್ ವಿತ್ ಸಾಂಗ್ ಇರೋದರಿಂದ ಸಾಕಷ್ಟು ಪೂರ್ವ ತಯ್ಯಾರಿ ಮಾಡಿಕೊಂಡು ಡ್ಯಾನ್ಸ್ ಕಂಪೋಸ್ ಮಾಡಿದ್ದೇನೆ. ಫೈಟ್ ಸೀಕ್ವೆನ್ಸ್‌ಗೆ ಹೊಂದುವಂತೆ, ಆ ರಿದಮ್ಮಿಗೆ ಡ್ಯಾನ್ಸ್ ಮಾಡಿಸೋದು ಸ್ವಲ್ಪ ಕಷ್ಟದ ಕೆಲಸ. ಆದರೆ ಚಿತ್ರತಂಡದ ಸಹಕಾರದಿಂದ ಎಲ್ಲವೂ ಸರಾಗವಾಗಿ ಮುಗಿದಿದೆ. ಎಂದು ನೃತ್ಯ ನಿರ್ದೇಶಕ ಮೋಹನ್ ತಿಳಿಸಿದ್ದಾರೆ.

ಮೆಲೋಡಿ ಹಾಡುಗಳ ಸರದಾರ ಎನಿಸಿಕೊಂಡಿರುವ ಮಣಿಕಾಂತ್ ಕದ್ರಿ ಟಕ್ಕರ್ ಸಿನಿಮಾಗೆ ಮಾಸ್ ಸಾಂಗ್ ನೀಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ರಚಿಸಿರುವ ‘ಆನೆ ನಡೆದಿದ್ದೆ ದಾರಿ ಅಲ್ವೇನ್ರಿ ಯಾರು ಕೊಡಬೇಡಿ ಟಕ್ಕರ್. ಪ್ಲಸ್ಸು ಮೈನಸ್ಸು ಮಿಕ್ಸು ಆದಾಗ್ಲೆ ಪವರು ಹುಟ್ಟೋದು ನೇಚರ್ ಎನ್ನುವ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ ಮತ್ತು ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣಕ್ಕೆ ಆಗಮಿಸಿದ್ದ ಮಣಿಕಾಂತ್ ಕದ್ರಿ “ನನ್ನಿಂದ ಮೆಲೋಡಿ ಮಾತ್ರವಲ್ಲ, ಯಾವ ಪ್ರಾಕಾರದ ಹಾಡುಗಳಿಗೆ ಬೇಕಾದರೂ ಸಂಗೀತ ನೀಡಲು ಸಾಧ್ಯ. ಈ ಸಲ ಟಕ್ಕರ್ ಇಂಟ್ರಡಕ್ಷನ್ ಹಾಡಿಗೆ ನೀಡಿರುವ ಮ್ಯೂಸಿಕ್ ಕೇಳುಗರನ್ನು ಕುಣಿಸುವಂತೆ ಮಾಡುತ್ತದೆ. ಈ ಚಿತ್ರ ನನಗೆ ಬೇರೆಯದ್ದೇ ಇಮೇಜ್ ನೀಡಲಿದೆ ಎಂದು  ಹೇಳಿದ್ದಾರೆ.

ಈ ಹಾಡಿನ ಚಿತ್ರೀಕರಣದೊಂದಿಗೆ ಟಕ್ಕರ್ ಮುಕ್ತಾಯಗೊಂಡಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭಗೊಳ್ಳಲಿದೆ. ಈ ಚಿತ್ರದಲ್ಲಿ ಭಜರಂಗಿ ಲೋಕಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸುಮಿತ್ರಾ, ಸಾಧುಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಶಂಕರ್ ಅಶ್ವಥ್ ಮುಂತಾದವರ ಬೃಹತ್ ತಾರಾಗಣವೂ ಈ ಚಿತ್ರಕ್ಕಿದೆ. ಡಿಫರೆಂಟ್ ಡ್ಯಾನಿ ಸಾಹಸ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed