ಜೀ ಕನ್ನಡದ ಮೊದಲ ಮಿನಿ ಧಾರಾವಾಹಿ
Posted date: 18 Tue, Jun 2013 – 11:26:04 PM
ಕನ್ನಡ ಕಿರುತೆರೆಯ ಮೆಗಾ ಧಾರಾವಾಹಿಗಳ ಮಧ್ಯೆ ಹೊಸ ಮಿಂಚೊಂದು ಮಿನುಗಲು ಶುರುವಾಗಿದೆ. ಅದೇ ಜೀ ಕನ್ನಡದ ಹೊಚ್ಚ ಹೊಸ ಪ್ರಯೋಗ ಮಿನಿ ಧಾರಾವಾಹಿ. ಇದರ ಮೊದಲ ಯತ್ನವಾಗಿ ಜೂನ್ ೨೪ ರಂದು ರಾತ್ರಿ ೮ ಗಂಟೆಗೆ ಆರಂಭವಾಗುತ್ತಿರುವ ಮಿನಿ ಧಾರಾವಾಹಿ ಭಲೆ ಬಸವ.
ಕನ್ನಡದ ನಾಲ್ಕು ಮುಖ್ಯ ಮನರಂಜನಾ ಚಾನೆಲ್‌ಗಳಲ್ಲಿ, ಈಗ ೪೦ ಕ್ಕೂ ಹೆಚ್ಚು ಮೆಗಾ ಸೀರಿಯಲ್‌ಗಳು ಪ್ರಸಾರವಾಗುತ್ತಿವೆ. ಕೆಲವು ಸೀರಿಯಲ್‌ಗಳು ಸಾವಿರ ಎಪಿಸೋಡ್‌ಗಳನ್ನು ಪೂರೈಸಿದರೂ, ವೀಕ್ಷಕರ ಪ್ರೀತಿ ಕಳೆದುಕೊಳ್ಳದೆ ಪ್ರಸಾರವಾಗುತ್ತಿದ್ದರೆ, ಇನ್ನು ಕೆಲವು ವೀಕ್ಷಕರ ತಾಳ್ಮೆ ಪರೀಕ್ಷಿಸುವಂತಿರುತ್ತವೆ. ಮುಗಿಯದ ಗೋಳಿನ ಕತೆ ಅಂತಲೂ ಅನ್ನಿಸಿಕೊಂಡಿರುವ ಮೆಗಾ ಧಾರಾವಾಹಿಗಳ ಏಕತಾನತೆ ಮುರಿಯುವುದು ಜೀ ಕನ್ನಡದ ಉದ್ದೇಶ. 
ಅದಕ್ಕಾಗಿ ೧೩ ವಾರಗಳ, ೬೫ ಎಪಿಸೋಡುಗಳ ಮಿನಿ ಧಾರಾವಾಹಿಗಳನ್ನು ಜೀ ಕನ್ನಡ ಪರಿಚಯಿಸುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಈ ಮಿನಿ ಸೀರಿಯಲ್ಲು, ಕೇವಲ ೬೫ ಎಪಿಸೋಡುಗಳಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮುಗಿಯುತ್ತದೆ. ಬಳಿಕ ಮತ್ತೊಂದು ಹೊಸ ಕತೆ, ಹೊಸ ಕಲಾವಿದರೊಂದಿಗೆ ಹೊಸ ಮಿನಿ ಧಾರಾವಾಹಿ ಆರಂಭವಾಗುತ್ತದೆ. ಹೀಗೆ ಕನಿಷ್ಠ ನಾಲ್ಕು ಮಿನಿ ಧಾರಾವಾಹಿಗಳನ್ನು ನಿರ್ಮಿಸುವ ಉದ್ದೇಶ ಜೀ ಕನ್ನಡದ್ದು. 
ಈಗಾಗಲೇ ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿರುವವರ ಜತೆಗೆ, ಸಿನಿಮಾದ ಕೆಲ ಖ್ಯಾತ ನಿರ್ದೇಶಕರು ಕೂಡಾ ಈ ಮಿನಿ ಧಾರಾವಾಹಿ ನಿರ್ದೇಶಿಸಲಿದ್ದಾರೆ. ಕ್ಲಾಸ್ ಮತ್ತು ಮಾಸ್ ಡೈರೆಕ್ಟರ್‌ಗಳು ಈ ಹೊಸ ಸಾಹಸದಲ್ಲಿ ಕೈಜೋಡಿಸುತ್ತಾರೆ. ಕನ್ನಡದ ಕತೆಗಾರರ ಕೆಲವು ಅತ್ಯುತ್ತಮ ಕತೆಗಳನ್ನು ಕಿರುತೆರೆಯಲ್ಲಿ ಪರಿಚಯಿಸುವ ಉದ್ದೇಶವೂ ಇದರ ಹಿಂದಿದೆ. ಹೊಸ ಮನರಂಜನೆ, ಹೊಸ ಭರವಸೆಯತ್ತ ತುಡಿಯುತ್ತಿರುವ ಜೀ ಕನ್ನಡ ಮಿನಿ ಧಾರಾವಾಹಿ ಮೂಲಕ ಮೂಲಕ ಕಿರುತೆರೆಯಲ್ಲಿ ಹೊಸದೊಂದು ಅಧ್ಯಾಯ ಶುರು ಮಾಡುತ್ತಿದೆ ಎನ್ನುತ್ತಾರೆ ಜೀ ಟಿವಿ ಸಮೂಹದ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ. ಎಂ. ಗೌತಮ್ ಮಾಚಯ್ಯ.
ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತರಾಗಿರುವ ಸಿಹಿ ಕಹಿ ಚಂದ್ರು. ಅವರ ನಿರ್ದೇಶನದ ಪಾರ್ವತಿ ಪರಮೇಶ್ವರ ಒಂದು ಸಾವಿರ ಸಂಚಿಕೆಗಳನ್ನು ದಾಟಿದ್ದರೆ, ಪಾಂಡುರಂಗ ವಿಠಲ ಒಂದು ಸಾವಿರದ ಗಡಿಯತ್ತ ಮುನ್ನುಗ್ಗುತ್ತಿದೆ. ಇದೇ ಜೂನ್ ೨೪ ರಂದು ರಾತ್ರಿ ೮ ಗಂಟೆಗೆ ಆರಂಭವಾಗುತ್ತಿರುವ ಹೊಸ ಧಾರಾವಾಹಿ ಭಲೆ ಬಸವದ ಮೂಲಕ ಮತ್ತೊಂದು ಹಾಸ್ಯ ಧಾರಾವಾಹಿಯನ್ನು ಸಿಹಿ ಕಹಿ ಚಂದ್ರು ಪರಿಚಯಿಸುತ್ತಿದ್ದಾರೆ.
ಇದರ ಮುಖ್ಯ ಕತೆ ನಡೆಯುವುದು ಎ.ಸಿ.ಲುಂಗಿ ಕಂಪನಿಯಲ್ಲಿ ! ಅದಕ್ಕಾಗಿ ಒಂದು ವಿಶೇಷ ಆಫೀಸ್ ಸೆಟ್ ನಿರ್ಮಿಸಲಾಗಿದೆ. ತುಳು ರಂಗಭೂಮಿಯಲ್ಲಿ ಹೆಸರುವಾಸಿಯಾಗಿರುವ ನಟ ಶೋಭರಾಜ್ ಇಲ್ಲಿ ಮುಖ್ಯ ಬಸವನ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಸ್ಯ ಧಾರಾವಾಹಿಗಳ ಮೂಲಕ ಪರಿಚಿತರಾಗಿರುವ ಪವನ್, ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಎಂ.ಎಸ್.ನರಸಿಂಹ ಮೂರ್ತಿ ಚಿತ್ರಕತೆ-ಸಂಭಾಷಣೆ ಹೆಣೆಯುತ್ತಿದ್ದಾರೆ.
ಲೇಡೀಸು, ಜಂಟ್ಸು, ಬೆಂಗ್ಳೂರ್ ಗರ್ಲ್ಸು, ಮುದುಕ್ರು, ಮಕ್ಳು. ಹಳ್ಳಿ ಹೈಕ್ಳು ಎಲ್ಲಾರೂ ನೋಡಿ ಆನಂದಿಸಬಹುದಾದ ಹಾಸ್ಯ ಧಾರಾವಾಹಿ ಭಲೆ ಬಸವ ಇದೇ ೨೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೮ ಗಂಟೆಗೆ ಜೀ ಕನ್ನಡದಲ್ಲಿ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed