``ಲಂಗೋಟಿ ಮ್ಯಾನ್``ಸಂಪ್ರದಾಯ ಆಧುನಿಕತೆಯ ಸಂಘರ್ಷದ ಕಥೆ..ರೇಟಿಂಗ್ : 3/5 ***
Posted date: 22 Sun, Sep 2024 08:54:20 AM
ಚಿತ್ರ: ಲಂಗೋಟಿ ಮ್ಯಾನ್‍
ನಿರ್ಮಾಣ: ತನು ಟಾಕೀಸ್,
ನಿರ್ದೇಶನ: ಸಂಜೋತಾ ಭಂಡಾರಿ, 
ತಾರಾಗಣ: ಸಂಹಿತಾ ವಿನ್ಯಾ, ಹುಲಿ ಕಾರ್ತಿಕ್‍,
ಆಕಾಶ್‍ ರಾಂಬೋ, ಸ್ನೇಹ ಖುಷಿ, ಧೀರೇಂದ್ರ ಎಸ್‍, ಗಿಲ್ಲಿ ನಟ ಮುಂತಾದವರು.
 
ತನ್ನ ಶೀರ್ಷಿಕೆಯ ಮೂಲಕವೆ ಕುತೂಹಲ ಕೆರಳಿಸಿದ್ದ ಚಿತ್ರ ಲಂಗೋಟಿ ಮ್ಯಾನ್.  ತಾತ, ಮೊಮ್ಮಗನ ಸುತ್ತ ನಡೆಯುವ  ಸಂಘರ್ಷದ ಕಥೆಯಿದು. ಇಲ್ಲಿ ತಾತ ಸಂಪ್ರದಾಯವಾದಿ. ಕೌಪೀನವಂತನೇ ಭಾಗ್ಯವಂತನು ಎಂದು ನಂಬಿದವರು. ಆದರೆ ಮೊಮ್ಮಗ ಮಾಡ್ರನ್ ಹುಡುಗ. ಆತನಿಗೆ  ಕೌಪೀನ ಬಿಸಾಕಿ, ಅಂಡರ್ ವೇರ್‍ ತೊಡುವ ಆಸೆ.
 
ಇಲ್ಲಿ ನಾಯಕನ ಹೆಸರೇ ಲಂಗೋಟಿ. ಲಂಕಾಪುರದ ಗೋವಿಂದಯ್ಯ ತೀರ್ಥಕುಮಾರ, ಇದು  ಆತನ ಪೂರ್ತಿ ಹೆಸರು. ತಾತ ಸಂಪ್ರದಾಯಕ್ಕೆ ಕಟ್ಟುಬಿದ್ದು ತನಗಿಷ್ಟವಿಲ್ಲದಿದ್ದರೂ, ಮೊಮ್ಮಗ  ಲಂಗೋಟಿ ತೊಡಬೇಕಾಗುತ್ತದೆ. ಅದರಿಂದ ಆತ ಸಾಕಷ್ಟು ಮುಜುಗರ ಮತ್ತು ಅವಮಾನ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಒಂದು ಹಂತದಲ್ಲಿ ಅತ್ಯಾಚಾರಿ ಎಂಬ ಪಟ್ಟವನ್ನೂ  ಹೊರಬೇಕಾಗುತ್ತದೆ. ಅಪಹರಣಕಾರ, ಮೋಸಗಾರ, ವಂಚಕ ಎಂಬ ಪಟ್ಟವೂ  ಸಿಗುತ್ತೆ,  ಇದೆಲ್ಲದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ‘ಲಂಗೋಟಿ ಮ್ಯಾನ್’ನ ಕಥೆ.
 
ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ. ತಾತ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ಇವನು ಅಂಡರ್ ವೇರ್ ಹಾಕಲು ಆಗುತ್ತಿಲ್ಲ‌. ಈ ನಡುವೆ ಅವನ ಜೀವನದಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆದು ಹೋಗುತ್ತದೆ.
 
ತಮಾಷೆಯಾಗಿ ಪ್ರಾರಂಭವಾಗುವ ಚಿತ್ರ, ನಂತರ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ಮೇಲ್ನೋಟಕ್ಕೆ ಇದೊಂದು ಕಾಮಿಡಿ ಚಿತ್ರ ಎನಿಸಿದರೂ, ಇಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಂಪ್ರದಾಯ, ಆಧುನಿಕತೆ, ಪ್ರೇಮಕಥೆ, ತಾಯಿ ಸೆಂಟಿಮೆಂಟ್, ಕೊಲೆಗಳು, ಬ್ರಾಂಡೆಡ್‍ ಕ್ಲಾತ್ ಮಾಫಿಯಾ,  ಸೈಕೋ ಕಿಲ್ಲರ್ ಇವರೆಲ್ಲ ಬಂದು ಹೋಗುತ್ತಾರೆ.
 
ನಿರ್ದೇಶಕಿ ಸಂಜೋತಾ ಭಂಡಾರಿ ಅವರು ಈ  ಚಿತ್ರದ ಮೂಲಕ ಹಲವು ವಿಷಯಗಳನ್ನು ಹೇಳಲು  ಹೊರಟಿದ್ದಾರೆ ಹಲವು ವಿಷಯಗಳು ಅವರ ತಲೆಯಲ್ಲಿವೆ.  ಅವರು ಹೇಳಿರುವ ಕೆಲವು ವಿಷಯಗಳು ಮಡಿವಂತರಿಗೆ ಇಷ್ಟವಾಗದಿರಬಹುದು. ಚಿತ್ರದ ಮುಖ್ಯ ಕಥೆ ಇರುವುದು ಸೊಂಟದ ಕೆಳಗೆ, ವಿಷಯಗಳು ಪಡ್ಡೆ ಹುಡುಗರಿಗೆ ಖುಷಿ ಕೊಡುತ್ತದೆ. ಆದರೂ ಕಥೆ ಎಲ್ಲಾ ವರ್ಗಗಳಿಗೂ ರೀಚ್ ಆಗುವಂತೆ ಬ್ಯಾಲೆನ್ಸ್ ಮಾಡಿದ್ದಾರೆ. 
 
ಇದು ತಾತ-ಮೊಮ್ಮಗನ ಕಥೆಯಾದ್ದರಿಂದ, ತಾತ-ಮೊಮ್ಮಗನ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಧೀರೇಂದ್ರ ಮತ್ತು ಆಕಾಶ್‍ ಇಬ್ಬರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನಾಯಕಿ ಮುದ್ದಾಗಿ ಕಾಣುತ್ತಾರೆ. ಮಿಕ್ಕಂತೆ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ  ನಿಭಾಯಿಸಿದ್ದಾರೆ.

 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed