ಒಂದು ಸಿನಿಮಾ ಗೆಲ್ಲಬೇಕಾದರೆ, ನಟರ ನಟನೆ ಮಾತ್ರವಷ್ಟೇ ಅಲ್ಲದೆ, ತೆರೆಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಪ್ರಮಾಣದಲ್ಲಿರಬೇಕು. ತೆರೆಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗಿಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ಇದೀಗ ಕನ್ನಡದ ಯುವ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಚೇತನ್ ರಾವ್ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.
ಹೌದು, ಕನ್ನಡಿಗ ಅದರಲ್ಲೂ ಬೆಂಗಳೂರಿಗರಾದ ಚೇತನ್ ರಾವ್, ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ ಮುಗಿಸಿ, ಆಯ್ದುಕೊಂಡಿದ್ದು ಸಂಗೀತ ಕ್ಷೇತ್ರವನ್ನು. ಚೆನ್ನೈನಲ್ಲಿರುವ ಲಂಡನ್ ಮೂಲದ Middlesex Universityಯಲ್ಲಿ ಸಂಗೀತ ಕೋರ್ಸ್ ಮುಗಿಸಿದ್ದಾರೆ. ಕೇವಲ ಸಂಗೀತಗಾರರಷ್ಟೇ ಅಲ್ಲ ಒಳ್ಳೆಯ ಹಾಡುಗಾರರೂ ಹೌದು. ಅವರು ತಮ್ಮ ಗುರು ಸಂಗೀತಾ ಕಟ್ಟಿ ಅವರಿಂದ ಹಿಂದೂಸ್ತಾನಿ ಸಂಗೀತ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಸಂಗೀತದಲ್ಲಿ ಇಲ್ಲಿಯವರೆಗೆ ಸಾಧಿಸಿದ ಎಲ್ಲಾ ಪ್ರಗತಿಯನ್ನು ಅವರಿಗೆ ಅರ್ಪಿಸುತ್ತಾರೆ.
ಆಸ್ಕರ್ ಪ್ರಶಸ್ತಿ ಪಡೆದಿರುವ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಅವರ ಜತೆಗೆ ಈ ಹಿಂದೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಚೇತನ್ ಅವರಿಗಿದೆ. ಇದೀಗ ರೆಹಮಾನ್ ಅವರ ಒಪೆರಾ ಬ್ಯಾಂಡ್ ಆದ ಸೆಂಪ್ರೆ ಲಿಬೆರಾದಲ್ಲಿ ಲೀಡ್ ಗಾಯಕರಾಗಿ ಇಂದಿಗೂ ಸಕ್ರಿಯರಾಗಿದ್ದಾರೆ. ಕನ್ನಡ ಮತ್ತು ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಜತೆಗೆ ಗಾಯಕರಾಗಿಯೂ ಚೇತನ್ ಇನ್ನೂ ಚಾಲ್ತಿಯಲ್ಲಿದ್ದಾರೆ.
ಅನುರಾಗ್ ಕಶ್ಯಪ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ ಗುನೀತ್ ಮೊಂಗಾ ಅವರ ನವಾಜುದ್ದೀನ್ ಸಿದ್ದೀಕಿ ನಾಯಕನಾಗಿ ನಟಿಸಿರುವ `ಮಾನ್ಸೂನ್ ಶೂಟೌಟ್`ಬಾಲಿವುಡ್ ಸಿನಿಮಾದ 2 ಹಾಡುಗಳನ್ನು ಚೇತನ್ ರಾವ್ ಕಂಪೋಸ್ ಮಾಡಿದ್ದಾರೆ. 2017ರ ಡಿಸೆಂಬರ್ 15ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಕಾನ್ ಚಲನಚಿತ್ರೋತ್ಸವದಲ್ಲಿಯೂ ಪ್ರಸಾರ ಕಂಡು ಮೆಚ್ಚುಗೆ ಪಡೆದಿತ್ತು.
ಕನ್ನಡಿಗರಾಗಿ ಕನ್ನಡದಲ್ಲಿ ಏನೂ ಮಾಡೇ ಇಲ್ವಾ? ಅನ್ನೋ ಹಾಗಿಲ್ಲ. ಏಕೆಂದರೆ ಇದೇ ವರ್ಷದ ಫೆಬ್ರವರಿ 16ರಂದು ಬಿಡುಗಡೆ ಆಗಿದ್ದ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ KTM ಚಿತ್ರದ ಹಾಡುಗಳಿಗೆ ಮತ್ತು ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದರು. ಬಿಡುಗಡೆಯಾದ 5 ವಾರಗಳ ಕಾಲ ಈ ಸಿನಿಮಾ ಚಿತ್ರಮಂದಿರದಲ್ಲಿ ಓಡಿತ್ತು. ಹಾಡುಗಳಿಂದಲೇ ಮೋಡಿ ಮಾಡಿತ್ತು.
ಇದೀಗ ಇದೇ ಚೇತನ್ ರಾವ್ ಅವರ `ಸರ್ವಸ್ವ` ಹಾಡು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸೆಪ್ಟೆಂಬರ್ 20ರಂದು ಎಲ್ಲರ ಕಿವಿಗೆ ಅಪ್ಪಳಿಸಲಿದೆ. ಈ ಹಾಡಿನ ಸಾಹಿತ್ಯವನ್ನು ಬರೆಯುವುದರ ಜತೆಗೆ ಇದರ ನಿರ್ದೇಶನವನೂ ಮಾಡಿದ್ದಾರೆ ಅರ್ಜುನ್ ಕಿಶೋರ್ ಚಂದ್ರ. ಈಗಾಗಲೇ ಹಿಟ್ ಪಟ್ಟಿ ಸೇರಿರುವ `ನಿನ್ನ ಗುಂಗಲ್ಲಿ` ಹಾಡಿಗೂ ಅರ್ಜುನ್ ಕಿಶೋರ್ ಸಾಹಿತ್ಯ ಒದಗಿಸಿದ್ದರು.
ಇನ್ನು ಸದ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಹೇಳುವುದಾದರೆ, ಪ್ರಸ್ತುತ ನಿರೂಪ್ ಭಂಡಾರಿ ಅಭಿನಯದ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾಕ್ಕೂ ಸಂಗೀತ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದಾರೆ. ಇದರ ಜತೆಗೆ `ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ` ಸೇರಿದಂತೆ ಇನ್ನೂ 2 ಕನ್ನಡ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಆ ಪೈಕಿ `ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ` ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ.
ಸಿನಿಮಾ ಜತೆ ಜತೆಗೆ ಅಮೆರಿಕಾ, ದುಬೈ, ಯೂಕೆ ಸೇರಿ ವಿಶ್ವದ ಹಲವೆಡೆ ಹಾಡುಗಳ ಪ್ರದರ್ಶಕರಾಗಿ ಫರ್ಫಾಮನ್ಸ್ ನೀಡಿದ್ದಾರೆ. `ಆರಿಜಿನ್ ಈಸ್ಟ್ ಮ್ಯೂಸಿಕ್` ಶೀರ್ಷಿಕೆಯ ಆಡಿಯೊ ಕಂಪನಿಯ ಸಂಸ್ಥಾಪಕರೂ ಹೌದು ಅದರ ನಿರ್ದೇಶಕರಲ್ಲಿಯೂ ಒಬ್ಬರು. ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಸಂಗೀತ ನೀಡಿದ್ದಾರೆ. ಟ್ವಿಟರ್, ಹಿಮಾಲಯ, ಪಾಂಡ್ಸ್ ಸೇರಿ ಹಲವು ಬ್ರಾಂಡ್‌ಗಳಿಗೂ ಜಿಂಗಲ್ಸ್ ಮಾಡಿದ್ದಾರೆ ಚೇತನ್ ರಾವ್.