ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ ಸದ್ಯ ಝೀಬ್ರ ಸಿನಿಮಾದ ರಿಲೀಸ್ ಸಂಭ್ರಮದಲ್ಲಿದ್ದಾರೆ. ಡಾಲಿ ನಟನೆಯ ಝೀಬ್ರ ಚಿತ್ರ ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್ ಆಗಿದೆ. ಡಾನ್ ಆಗಿ ಮಿಂಚಿರುವ ಡಾಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ತೆಲುಗು ಪ್ರೇಕ್ಷಕರು ಧನಂಜಯ ಅವರ ನಟನೆಗೆ ಫಿದಾ ಆಗಿದ್ದು ದೊಡ್ಡ ಪರದೆಮೇಲೆ ನೋಡಿ ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದು ಝೀಬ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಝೀಬ್ರ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಾಣುತ್ತಿದ್ದಂತೆ ತೆಲುಗಿನಲ್ಲಿ ಡಾಲಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಈ ಮೊದಲು ವಿಲನ್ ಪಾತ್ರಗಳಿಗೆ ಹೆಚ್ಚು ಬೇಡಿಕೆ ಇತ್ತು. ಆದರೀಗ ಝೀಬ್ರ ರಿಲೀಸ್ ಆಗುತ್ತಿದ್ದಂತೆ ಹೀರೋ ಪಾತ್ರಗಳಿಗೆ ಆಫರ್ ಹೆಚ್ಚಾಗಿದೆ. ಝೀಬ್ರ ಸಿನಿಮಾದಲ್ಲಿ ಡಾಲಿ ನಟನೆ, ಸ್ಟೈಲ್‌ಗೆ ಪ್ರೇಕ್ಷಕರು ಮಾತ್ರವಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿ ಕೂಡ ಫಿದಾ ಆಗಿದೆ. ಹಾಗಾಗಿಯೇ ಡಾಲಿ ತೆಲುಗು ಇಂಡಸ್ಟ್ರಿಯಲ್ಲಿ ಇರಲಿ, ತೆಲುಗು ಪ್ರೇಕ್ಷಕರನ್ನು ರಂಜಿಸಲಿ ಎನ್ನುವ ಕಾರಣಕ್ಕೆ ತೆಲುಗಿನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಡಾಲಿ ಹಿಂದೆ ಬಿದ್ದಿವೆ.
ಈಗಾಗಲೇ ಪೀಪಲ್ ಮೀಡಿಯಾ ಫ್ಯಾಕ್ಟರಿ, ಹಯಾಗ್ರೀವ ಕ್ರಿಯೇಷನ್, ಪ್ರೈಮ್ ಶೋ ಎಂಟಟೈನ್‌ಮೆಂಟ್, ಸತ್ಯ ಜ್ಯೋತಿ ಫಿಲ್ಮ್ ಸೇರಿದಂತೆ ತೆಲುಗಿನ ಅನೇಕ ದೊಡ್ಡ ಬ್ಯಾನರ್‌ಗಳು ಡಾಲಿ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಈಗಾಗಲೇ ಧನಂಜಯ ಅವರ ಕಾಲ್‌ಶೀಟ್‌ಗಾಗಿ ಈ ಬ್ಯಾನರ್‌ಗಳು ಎದುರು ನೋಡುತ್ತಿವೆ. ಒಂದು ವೇಳೆ ಡಾಲಿ ಕಡೆಯಿಂದ ಎಲ್ಲಾ ಬ್ಯಾನರ್‌ಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕರೇ ತೆಲುಗಿನಲ್ಲೇ ಫಿಕ್ಸ್ ಆಗುವುದು ಬಹುತೇಕ ಖಚಿತ.
ಝೀಬ್ರ ಪ್ರೀ ರಿಲೀಸ್ ಈವೆಂಟ್ ನಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ಡಾಲಿ ಅವರನ್ನು ಹಾಡಿಹೊಗಳಿದ್ದರು. ಧನಂಜಯ ತೆಲುಗಿನಲ್ಲಿ ಸ್ಟಾರ್ ಆಗಿ ಸೆಟಲ್ ಆಗಲಿದ್ದಾರೆ, ಮುಂದಿನ ಸ್ಟಾರ್ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಇದೀಗ ಡಾಲಿಗೆ ಆಫರ್‌ಗಳು ಹೆಚ್ಚಾಗಿದೆ. ಆದರೆ ಡಾಲಿಯ ಮುಂದಿನ ನಡೆ ಏನು ಎನ್ನವುದು ಈಗ ಕುತೂಹಲ ಮೂಡಿಸಿದೆ. ಉತ್ತಮ ಪಾತ್ರಗಳು ಬಂದರೆ ಖಂಡತವಾಗಿಯೂ ಡಾಲಿ ನೋ ಎನ್ನಲು ಸಾಧ್ಯವಿಲ್ಲ. ಏನೆ ಆದರೂ ಕನ್ನಡದ ಕಲಾವಿದರು ಪರಭಾಷೆಯಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವುದನ್ನ ನೋಡುವುದೇ ಖುಷಿ. ಕನ್ನಡಿಗರ ಪ್ರೀತಿಯ ಡಾಲಿ ಕನ್ನಡ ಸಿನಿಮಾಗಳ ಜೊತೆಗೆ ಬೇರೆ ಭಾಷೆಯಲ್ಲೂ ಮಿಂಚುತ್ತಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎನ್ನುವುದೇ ಅಭಿಮಾನಿಗಳ ಆಸೆ.