ನಾಗೇಶ್ ಕುಮಾರ್ ನಿರ್ಮಾಣದ ಹಾಗೂ ಜೆ‌.ಜೆ.ಶ್ರೀನಿವಾಸ್ ನಿರ್ದೇಶನದ``ಕಸ್ಟಡಿ``ಚಿತ್ರದಲ್ಲಿ ``ಭೀಮ``ಖ್ಯಾತಿಯ ನಟಿ ಪ್ರಿಯ
Posted date: 22 Tue, Oct 2024 � 12:17:07 PM
ಬೃಂದಾವನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಾಗೇಶ್ ಕುಮಾರ್ ಯು ಎಸ್ ನಿರ್ಮಾಣದ ಹಾಗೂ ಜೆ.ಜೆ.ಶ್ರೀನಿವಾಸ್ ನಿರ್ದೇಶನದ "ಕಸ್ಟಡಿ" ಚಿತ್ರದ ಪ್ರಮುಖಪಾತ್ರದಲ್ಲಿ  "ಭೀಮ" ಚಿತ್ರದ ಗಿರಿಜಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರಿಯ ನಟಿಸುತ್ತಿದ್ದಾರೆ. ನಗರದ ಟೊರಿನೊ ಫ್ಯಾಕ್ಟರಿ ಆವರಣದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.   
 
ನಮ್ಮ ಸಂಸ್ಥೆಯ ಮೂಲಕ "ಗಜಾನನ ಗ್ಯಾಂಗ್" ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ. "ಕಸ್ಟಡಿ" ಐದನೇ ಚಿತ್ರ. ಸ್ನೇಹಿತ ಜೆ.ಜೆ.ಶ್ರೀನಿವಾಸ್, ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಈ ಚಿತ್ರದ ಪ್ರಮುಖಪಾತ್ರವನ್ನು "ಭೀಮ" ಖ್ಯಾತಿಯ ಪ್ರಿಯ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಪ್ರಿಯ ಅವರ ಪತಿ ಅವಿನಾಶ್ ನನ್ನ ಮಿತ್ರ. ಅವರ ಮೂಲಕ ಪ್ರಿಯ ಅವರನ್ನು ಸಂಪರ್ಕ ಮಾಡಿ ಈ ಚಿತ್ರದ ಕಥೆ ಹೇಳಲಾಯಿತು. ಕೆಲವೇ ದಿನಗಳಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಸದ್ಯ ಚಿತ್ರೀಕರಣ ಬಿರುಸಿನಿಂದ ಸಾಗಿದೆ ಎಂದು ನಿರ್ಮಾಪಕ ನಾಗೇಶ್ ಕುಮಾರ್ ಯು ಎಸ್ ತಿಳಿಸಿದರು.         
 
"ಕಸ್ಟಡಿ" ಸೈಬರ್ ಕ್ರೈಮ್ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ಜೆ ಜೆ.ಶ್ರೀನಿವಾಸ್, ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಬಳಸುವ ಮೊಬೈಲ್ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ‌. ಸೈಬರ್ ಕ್ರೈಮ್ ನ ಕುರಿತಾದ ಕಥೆಗಳು ಸಾಕಷ್ಟು ಬಂದಿದೆಯಾದರೂ ಈ ಕಥೆ ಸ್ವಲ್ಪ ವಿಭಿನ್ನ. ಒಂದು ವರ್ಷದ ಹಿಂದೆ ಈ ಚಿತ್ರದ ಕಥೆ ಸಿದ್ದವಾಗಿತ್ತು. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಅನ್ವೇಷಣೆಯಲ್ಲಿದ್ದಾಗ "ಭೀಮ" ಖ್ಯಾತಿಯ ಪ್ರಿಯ ಅವರು ಈ ಪಾತ್ರ ಮಾಡಬಹುದು ಅನಿಸಿತು‌. ಪ್ರಿಯ ಅವರು ಕಥೆ ಕೇಳಿ ಒಪ್ಪಿಕೊಂಡರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಾಯಿತು. ಈಗ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ‌. ಕಾಕ್ರೋಜ್ ಸುಧೀ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ‌. ನಾನು ಸಹ ನಿರ್ದೇಶನದ ಜತೆಗೆ ನಟನಾಗೂ ಅಭಿನಯಿಸುತ್ತಿದ್ದೇನೆ ಎಂದರು.
 
"ಭೀಮ" ಚಿತ್ರದ ನನ್ನ ಗಿರಿಜಾ ಪಾತ್ರಕ್ಕೆ ತಾವು ತೋರಿದ ಪ್ರೀತಿಗೆ ಧನ್ಯವಾದ. ಈ ಚಿತ್ರದಲ್ಲೂ ನಾನು ಖಡಕ್ ಪೊಲೀಸ್ ಅಧಿಕಾರಿ. ದುರ್ಗಾಪರಮೇಶ್ವರಿ ನನ್ನ ಪಾತ್ರದ ಹೆಸರು. ನಿರ್ದೇಶಕರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರ ಒಪ್ಪಿಕೊಳ್ಳಲು ಪ್ರಮುಖ ಕಾರಣ ಕಥೆ ಹಾಗೂ ನಿರ್ಮಪಕ ನಾಗೇಶ್ ಕುಮಾರ್ ಅವರು ನನ್ನ ರಂಗಭೂಮಿ ದಿನಗಳಲ್ಲಿ ರಂಗ ಕಲಾವಿದರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಅನ್ನದ ಋಣ ನನ್ನ ಮೇಲುದೆ. "ಭೀಮ" ನಂತರ ನಾನು ನಟಿಸುತ್ತಿರುವ ಚಿತ್ರವಿದು ಎಂದರು ನಟಿ ಪ್ರಿಯ. 
 
ಚಿತ್ರದಲ್ಲಿ ನಟಿಸುತ್ತಿರುವ ನಾಗೇಂದ್ರ ಅರಸ್, ಚಿಂಗಾರಿ ಮಹಾದೇವ್, ಮ್ಯಾಜಿಕ್ ರಮೇಶ್, ಮಧು ಕೆ.ಆರ್ ಪೇಟೆ, ಪವನ್ ಕುಮಾರ್, ಆರಾಧ್ಯ, ಕುಮಾರ್ ಶ್ರೀನಿವಾಸಮೂರ್ತಿ, ವಿನ್ಯಾ, ಅಶ್ವಿತಾ, ಆರಾಧ್ಯ, ತೇಜಸ್ವಿನಿ ಹಾಗೂ ಛಾಯಾಗ್ರಾಹಕ ಶಂಕರ್, ಸಾಹಸ ನಿರ್ದೇಶಕ ನರಸಿಂಹ "ಕಸ್ಟಡಿ" ಕುರಿತು ಮಾತನಾಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed