ಬಿ.ಎಂ.ಗಿರಿರಾಜ್ ನಿರ್ದೇಶನದ ಹೊಸ ಚಿತ್ರಕ್ಕೆ ರಾಗಿಣಿ ದ್ವಿವೇದಿ ನಾಯಕಿ ಗಿರೀಶ್ ವಿ ಗೌಡ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ಮಾಪಕರು ರಾಮಕೃಷ್ಣ ನಿಗಾಡಿ ..
Posted date: 06 Mon, May 2024 06:31:14 PM
"ಚಿತ್ರಸಂತೆ" ಮಾಸಪತ್ರಿಕೆಯ ಸಂಪಾದಕ ಗಿರೀಶ್ ವಿ ಗೌಡ ಸಾರಥ್ಯದಲ್ಲಿ, ರಾಮಕೃಷ್ಣ ನಿಗಾಡಿ ಅವರ ನಿರ್ಮಾಣದಲ್ಲಿ ಹಾಗೂ "ಜಟ್ಟ", " ಮೈತ್ರಿ" ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ನೂತನ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. ರಾಗಿಣಿ ದ್ವಿವೇದಿ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಇತ್ತೀಚಿಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಯಿತು. ಇದೇ ಸಂದರ್ಭದಲ್ಲಿ ಮೇ 24 ರಂದು ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬ ಇರುವುದರಿಂದ "ಚಿತ್ರಸಂತೆ" ಮಾಸಪತ್ರಿಕೆ  ಹೊರತಂದಿರುವ ವಿಶೇಷ ಕವರ್ ಪೇಜ್ ಸಹ ಬಿಡುಗಡೆಯಾಯಿತು. 

ರಾಷ್ಟ್ರಪ್ರಶಸ್ತಿ ವಿಜೇತ "ಹರಿವು" ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಯಿತು ಎಂದು ಮಾತನಾಡಿದ ಗಿರೀಶ್ ವಿ ಗೌಡ, ಹತ್ತು ವರ್ಷಗಳಿಂದ ರಾಗಿಣಿ ಅವರ ಜೊತೆಗೆ ಚಿತ್ರ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸುತ್ತಿದೆ. ಈಗ ಕಾಲ ಕೂಡಿ ಬಂದಿದೆ. ನಿರ್ದೇಶಕ ಬಿ.ಎಂ.ಗಿರಿರಾಜ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ.  ಹಿಂದೆ "ಹೊಂಬಣ್ಣ" ಚಿತ್ರ ನಿರ್ಮಿಸಿದ್ದ ರಾಮಕೃಷ್ಣ ನಿಗಾಡಿ ಅವರು ಸಂಚಲನ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇಂದು ಫಸ್ಟ್ ಲುಕ್ ಬಿಡುಗಡೆಯಾಗಿದೆ‌. ಇದೇ ಸಂದರ್ಭದಲ್ಲಿ ಜಿ.ಜಿ.ಸ್ಟುಡಿಯೋಸ್ ಎಂಬ ಸಂಸ್ಥೆ ಕೂಡ ಆರಂಭಿಸಿದ್ದೇವೆ‌. ಇತ್ತೀಚೆಗೆ ಅನೇಕ ಚಿತ್ರ ನಿರ್ಮಾಣವಾಗುತ್ತಿದೆ. ಆದರೆ ಬಿಡುಗಡೆ ಸಮಯದಲ್ಲಿ ಪ್ರಮೋಶನ್ ಹೇಗೆ ಮಾಡಬೇಕೆಂಬುದು ತಿಳಿಯದೆ ಕೆಲವು ಸಿನಿಮಾಗಳು ಸೋತಿದೆ.‌ ನಮ್ಮ‌ ಸಂಸ್ಥೆ ಮುಂಬೈನ ಸಂಸ್ಥೆಯೊಂದರ ಜೊತೆ ಸೇರಿ ಆಸಕ್ತಿಯುಳ್ಳ ಸಿನಿಮಾ ನಿರ್ಮಾಪಕರಿಗೆ ಸಿನಿಮಾ ಪ್ರಮೋಷನ್ ಕುರಿತು ತಿಳಿಸುವ ಕೆಲಸ ಮಾಡಲಾಗುವುದು. ಇನ್ನು, ಮೇ 24 ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬ. ಹಾಗಾಗಿ ನಮ್ಮ "ಚಿತ್ರಸಂತೆ" ಪತ್ರಿಕೆಯಿಂದ ವಿಶೇಷ ಕವರ್ ಪೇಜ್ ಬಿಡುಗಡೆ ಮಾಡಿದ್ದೇವೆ. ಕಿರಣ್, ಪೂಜಾ ಮುಂತಾದ ತಂತ್ರಜ್ಞರು ಇದಕ್ಕಾಗಿ ಶ್ರಮವಹಿಸಿದ್ದಾರೆ‌ ಎಂದರು.

"ಕೌಂಡಿನ್ಯ" ಅವರು ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ರಾಗಿಣಿ ಅವರ ಜೊತೆ ಇದು ನನ್ನ ಮೊದಲ ಸಿನಿಮಾ ಎಂದರು ನಿರ್ದೇಶಕ ಬಿ.ಎಂ.ಗಿರಿರಾಜ್.

ಫಸ್ಟ್ ಲುಕ್ ಸಖತಾಗಿದೆ‌. ಅದಕ್ಕಿಂತ ಚಿತ್ರದ ಶೀರ್ಷಿಕೆ ಹಾಗೂ ಕಥೆ ಇನ್ನೂ ಚೆನ್ನಾಗಿದೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. "ಚಿತ್ರಸಂತೆ" ಪತ್ರಿಕೆ ನನ್ನ ಹುಟ್ಟುಹಬ್ಬಕ್ಕೆ ಹೊರತಂದಿರುವ ಮುಖ ಪುಟ ಸಹ ಮುದ್ದಾಗಿದೆ. ಗಿರೀಶ್ ವಿ ಗೌಡ ಅವರಿಗೆ ಧನ್ಯವಾದಗಳು ಎಂದರು ನಾಯಕಿ ರಾಗಿಣಿ ದ್ವಿವೇದಿ.

ಅರುಣ್ ಗುರೂಜಿ, ಭಾಸ್ಕರ್ ಗುರೂಜಿ , ಮೋಕ್ಷಗುಂಡಂ ಗುರೂಜಿ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಅವರು ನೂತನ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed