ಚಿತ್ರ; ಸಂಜು,
ಕಥೆ, ಚಿತ್ರಕಥೆ, ನಿರ್ದೇಶನ: ಯತಿರಾಜ್
ನಿರ್ಮಾಣ : ಸಂತೋಷ್ ಡಿ.ಎಂ.ಮೈಸೂರು,
ಸಂಗೀತ; ವಿಜಯ್ ಹರಿತ್ಸ
ಛಾಯಾಗ್ರಹಣ: ವಿದ್ಯಾನಾಗೇಶ್
ತಾರಾಗಣ: ಮನ್ವಿತ್, ಸಾತ್ವಿಕ (ಶ್ರಾವ್ಯ), ಬಲ ರಾಜುವಾಡಿ, ಸುಂದರಶ್ರೀ, ಅಪೂರ್ವ, ಸಂಗೀತಾ ಹಾಗೂ ಮತ್ತಿತರರು.
ಮಲೆನಾಡಿನ ಬಸ್ ನಿಲ್ದಾಣದಲ್ಲಿ ಸುಂದರ ಪರಿಸರದೊಳಗೆ ಅರಳೋ ಸಂಜು(ಮನ್ವಿತ್)ಮತ್ತು ಸರಸ್ವತಿ(ಶ್ರಾವ್ಯ) ಎಂಬ ಎರಡು ಹೃದಯಗಳ ನಡುವಿನ ಪ್ರೇಮ ಕಥೆಯೊಂದನ್ನು ನಿರ್ದೇಶಕ ಯತಿರಾಜ್, ಸಂಜು ಚಿತ್ರದ ಮೂಲಕ ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ.
ಈ ಕಥೆಯಲ್ಲಿ ಸಂಜು ಮತ್ತು ಸರಸ್ವತಿ ಅವರದು ಒಂದು ಕಥೆಯಾದರೆ, ಅಲ್ಲೇ ಟೀ ಮಾರುವ ದಂಪತಿಗಳದು ಇನ್ನೊಂದು ಕಥೆ. ವೀಕ್ಷಕರನ್ನು ಹೆಚ್ಚು ಕಾಡುವುದು ಸರಸ್ಪತಿ ಎಂಬ ಅಮಾಯಕ ಹೆಣ್ಣಿನ ಕಥೆ. ತಂದೆಯ ಕ್ರೌರ್ಯದ ನಡುವೆ ನಲುಗಿ ಹೋಗುವ ಸರಸ್ವತಿ ಥೇಟರಿನಿಂದ ಹೊರಬಂದ ಮೇಲೂ ಸಹ ವೀಕ್ಷಕರನ್ನು ಕಾಡುತ್ತಾಳೆ.
ಅರ್ಧ ಕಥೆ ಬಸ್ ನಿಲ್ದಾಣದಲ್ಲೇ ನಡೆಯೋದು ಈ ಚಿತ್ರದ ವಿಶೇಷ, ಪ್ರೀತಿ ಅನ್ನೋದು ಎಲ್ಲಿ, ಹೇಗೆ ಬೇಕಾದರೂ ಹುಟ್ಟಬಹುದು ಅನ್ನೋದನ್ನು ಈಗಾಗಲೇ ಹಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ತೋರಿಸಿದ್ದಾರೆ, ಇಲ್ಲೂ ಕೂಡ ಪ್ರೀತಿ ಅರಳೋಕೆ ಇಂಥದ್ದೇ ಸ್ಥಳ ಬೇಕಾಗಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಬಸ್‌ಸ್ಟಾಪ್‌ನಲ್ಲಿ ಪರಿಚಯವಾದ ನಾಯಕ, ನಾಯಕಿ ನಡುವೆ ಪ್ರೀತಿ ಹುಟ್ಟುತ್ತೆ. ಒಂದೇ ಲೊಕೇಶನ್‌ನಲ್ಲಿ ಕುತುಹೂಲ ಮೂಡಿಸುವ ಅಂಶಗಳನ್ನಿಟ್ಟುಕೊಂಡು ಕಥೆ ಹೇಳಿರುವ ನಿರ್ದೇಶಕರ ಶೈಲಿ ನೋಡುಗರಿಗೆ ಇಷ್ಟವಾಗುತ್ತೆ. ಮೊದಲಭಾಗದ ಕಥೆ ಒಂದೇ ಲೊಕೇಶನ್‌ನಲ್ಲಿ ನಡೆಯುವುದು, ಅದರಲ್ಲಿ ಬರುವ ಸುಂದರ ಹಾಡೊಂದು ವೀಕ್ಷಕರನ್ನು ಕಥೆಯೊಳಗೆ ಕೂರಿಸುತ್ತದೆ,
ಸಂಜು ಚಿತ್ರದ ನಿರೂಪಣಾ ಶೈಲಿಯೇ ವಿಭಿನ್ನ. ಅನಗತ್ಯ ದೃಶ್ಯಗಳನ್ನಿಡದೆ, ಏನು, ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ತೆರೆಮೇಲೆ ತರೋ ಮೂಲಕ ಪರಿಶುದ್ಧ ಪ್ರೇಮ ಕಥೆಯೊಂದನ್ನು ನಿರೂಪಿಸಿದ್ದಾರೆ. ಚಿತ್ರದಲ್ಲಿ ಬರುವ ಒಂದಷ್ಟು ಪಾತ್ರಗಳು ನಾಯಕ, ನಾಯಕಿಯ ಪ್ರೀತಿ ಕಥೆಗೆ ಸಾಕ್ಷಿಯಾಗುತ್ತವೆ. ಇಂತಹ ಕಥೆಗಳನ್ನು ನಿರ್ದೇಶಕ ಹೇಳುವ ಶೈಲಿ ಮುಖ್ಯವಾಗಿರುತ್ತದೆ, ಅದರಲ್ಲಿ ಯತಿರಾಜ್ ಗೆದಿದ್ದಾರೆ, ಅವರಲ್ಲಿ ಪ್ರಬುದ್ದ ನಿರ್ದೇಶಕನೊಬ್ಬನಿದ್ದಾನೆ ಎಂದು ಸಂಜು ತೋರಿಸಿದೆ. ಒಂದೇ ಲೊಕೇಶನ್ ನಲ್ಲಿ ಒಂದಷ್ಟು ಪಾತ್ರಗಳನ್ನು ಸೃಷ್ಟಿಸಿಕೊಂಡು ಎಲ್ಲವನ್ನೂ ತೂಗಿಸಿಕೊಂಡು ಹೋಗಿರುವ ಅವರ ಪರಿ ಇಷ್ಟವಾಗುತ್ತೆ. ಇದರ ಜೊತೆಗೆ ಒಂದಷ್ಟು ಹೊಸತನವನ್ನೂ ಸಹ ಈ ಚಿತ್ರದಲ್ಲಿ ಕಾಣಬಹುದಾಗಿದದೆ,
ನಾಯಕಿ ತನ್ನ ಜೀವನದಲ್ಲಿ ನಡೆದ ಘಟನೆಗಳಿಂದ ಬೇಸತ್ತು ತಾನಿನ್ನು ಬದುಕಿರಬಾರದು ಎಂದು ನಿರ್ಧರಿಸಿಯೇ ಆಕೆ ಬಸ್‌ಸ್ಟಾಪ್ ಬಳಿ ಬರೋ ಬಸ್‌ಗಾಗಿ ಕಾಯುತ್ತಿರುತ್ತಾಳೆ. ಆದರೆ, ಬಸ್ ಬರಲ್ಲ ಅಂತ ತಿಳಿದಾಗ ಅಲ್ಲೇ ಕೂರುತ್ತಾಳೆ. ಅದೇ ಸಮಯಕ್ಕೆ ಆ ಬಸ್‌ಸ್ಟಾಪ್ ಬಳಿ ನಾಯಕನ ಎಂಟ್ರಿ. ಅಪರಿಚಿತರಾದ ಇಬ್ಬರ ನಡುವೆ ನಡೆಯೋ ಮಾತುಕತೆಯಲ್ಲಿ ಪ್ರೀತಿ ಶುರುವಾಗುತ್ತೆ. ಅವರಿಬ್ಬರ ಜೀವನದಲ್ಲೂ ನಡೆದ ಕಹಿ ಘಟನೆಗಳೇ ಚಿತ್ರಕಥೆಯ ಮೂಲ.
ನಾಯಕಿ ಶ್ರಾವ್ಯ(ಸಾತ್ವಿಕ) ಸರಸ್ವತಿಯ ಪಾತ್ರವೇ ತಾನಾಗಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಈ ಕಥೆಯಲ್ಲಿ ಅವರ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆಯಿದೆ. ಅಷ್ಟೇ ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ.
ನಾಯಕ ಮನ್ವಿತ್ ಸಂಜು ಪಾತ್ರವನ್ನು ಒಬ್ಬ ಅನುಭವಿ ನಟರಂತೆಯೇ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ರೊಮ್ಯಾಂಟಿಕ್ ಹೀರೋನ ಆಗಮನವಾಗಿದೆ. ಬಲ ರಾಜವಾಡಿ, ಸುಂದರಶ್ರೀ, ಸಂಗೀತಾ ಎಲ್ಲರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿದ್ಯಾನಾಗೇಶ್ ಅವರ ಕ್ಯಾಮೆರಾದಲ್ಲಿ ಮಲೆನಾಡ ಸೊಬಗು ಸೆರೆಯಾಗಿದೆ. ವಿಜಯ್ ಹರಿತ್ಸ ಅವರ ಸಂಗೀತದ ಒಂದು ಹಾಡಂತೂ ಸದಾ ಗುನುಗುವಂತಿದೆ.