ದಾರಿ ಯಾವುದಯ್ಯಾ ವೈಕುಂಠಕೆ ಅಂತರರಾಷ್ಟ್ರೀಯ ಚಿತ್ರೋತ್ಸಗಳಲ್ಲಿ ಮನ್ನಣೆ
Posted date: 06 Tue, Jul 2021 10:38:36 AM
ಅವನೊಬ್ಬ ಮನುಷ್ಯತ್ವ ಇಲ್ಲದ ಮೃಗೀಯ ಸ್ವರೂಪದ ವ್ಯಕ್ತಿ. ದರೋಡೆ, ವಂಚನೆ, ಕಳ್ಳತನವೇ ಅವನ ಉದ್ಯೋಗ! ಅವನ ಈ ಕೃತ್ಯಗಳಿಗೆ ಪ್ರೇರಣೆಯಾದವಳು ನೇಪಥ್ಯದಲ್ಲಿರುವ ಅವನ ಪ್ರೇಯಸಿ. ಆದರೆ `ಬೇರೆಯವರ ನ್ಯಾಯುತ ಬದುಕನ್ನು ಕಸಿದುಕೊಂಡು ತಾನು ನೆಮ್ಮದಿಯಿಂದಿರಲು ಸಾಧ್ಯವಾದೀತೆ? ಎಂಬ ನೈತಿಕ ಪ್ರಜ್ಞೆ ಅವನಲ್ಲಾದರೂ ಇರಲು ಹೇಗೆ ಸಾಧ್ಯ! ಇಂತಹ ನೈತಿಕ ಪ್ರಜ್ಞೆಯೇ ಇಲ್ಲದ ವಂಚಕ ವ್ಯಕ್ತಿಯೊಬ್ಬನಿಗೆ-ಸ್ಮಶಾನದಲ್ಲಿ ಹೆಣ ಸುಡುವ ಕಾಯಕ ಮಾಡಿಕೊಂಡು ಇರುವ ಕಟುಂಬವೊಂದು ನೀಡುವ ಅಂತಃಕರಣ, ನಿರ್ವ್ಯಾಜ್ಯ ಪ್ರೀತಿ, ಮಾನವೀಯ ಕಾಳಜಿಯ ಗುಣಗಳು ಪ್ರಭಾವ ಬೀರಿ ಭಾವವಿರೇಚನಗೊಂಡಾಗ ಅವನಲ್ಲಿ ಮನುಷ್ಯತ್ವ ಜಾಗೃತಗೊಳ್ಳುವ ಪರಿ `ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರದಲ್ಲಿ ಮೂರ್ತಿಭವಿಸಿರುವ ರೀತಿ ಅನನ್ಯವಾದದ್ದು!
ಪ್ರೇಕ್ಷಕನ ಎದೆಯಲ್ಲಿ ವಿಷಾದದ ಅಲೆ ಮೂಡಿಸಿ ಮನುಷ್ಯತ್ವದ ವಿಭಿನ್ನ ಆಯಾಮಗಳನ್ನು ದರ್ಶಿಸುವ ಇಂತಹ ಅಪೂರ್ವ ಕಥಾವಸ್ತುವನ್ನು ದೃಶ್ಯಕಾವ್ಯದ ಸ್ವರೂಪದಲ್ಲಿ ಸೃಜಿಸಿದವರು ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು. 
ಗಾಢಾಂಧಕಾರ ತುಂಬಿರುವ ಸ್ಮಶಾನದಲ್ಲಿ ಹೆಜ್ಜೆ ಹೆಜ್ಜೆಗೂ ನಿತಾಂತ ಮೌನದಲ್ಲಿ ಮಲಗಿರುವ ಸಮಾಧಿಗಳು. ಆ ಸಮಾಧಿಗಳಿಗೆ ನೆರಳು ನೀಡುವ ಕೊಡೆಗಳಂತೆ ಬೆಳೆದುನಿಂತ ಹಸಿರು ಮರ-ಪೊದೆಗಳು. ಅವೆಲ್ಲವೂಗಳ ನಡುವೆ ಹೆಣ ಸುಡುವುದಕ್ಕಾಗಿಯೇ ಇರುವ ವಿಶಾಲವಾದ ಕಟ್ಟೆ, ಆ ಕಟ್ಟೆಗೊಂಡು ಛತ್ತು... ಇಂತಹ ಸ್ಮಶಾನ ಪರಿಸರದ ಗುಡಿಸಲಲ್ಲೇ ವಾಸವಿದ್ದು ಅದಕ್ಕೆಲ್ಲ ತಾನೇ ಸೇವಕನಂತಿರುವ ಅರವತ್ತು ವರ್ಷದ ಭೀಮ ಅಲ್ಲಿಗೆ ಬರುವ ಹೆಣಗಳನ್ನು ಹೂಳುವ, ಸುಡುವ ಕಾಯಕದಲ್ಲೇ ನೆಮ್ಮದಿ ಕಂಡು ಜೀವಿಸಿದವನು. ಇಂಥ ಜೀವಕ್ಕೆ ಜೀವವಾಗಿ ಸದಾ ಜೊತೆಗಿದ್ದು ಮಿಡಿಯುವ ಮತ್ತೊಂದು ಮುಗ್ಧ ಜೀವ ಅವನ ಹೆಂಡತಿ ಜುಂಜಿ. ಇವರಿಬ್ಬರ ಬದುಕಿಗೆ ಮೂಕ ಸಾಕ್ಷಿಯಂತೆ ಇದ್ದವಳು ಹರೆಯಕ್ಕೆ ಬಂದ ಮಗಳು ಪಲ್ಲೂ.
ಹೀಗೆ ಸ್ಮಶಾನದಲ್ಲೇ ನೆಮ್ಮದಿ ಕಂಡುಕೊಂಡ ಭೀಮನ ಕುಟುಂಬ ಇರುವಲ್ಲಿಗೆ ಒಂದು ರಾತ್ರಿ ದಾರಿ ತಪ್ಪಿ ಓಡಿ ಬರುವ ದರೋಡೆಕೋರ ಸುಧಾಕರ ಮುಂದೆ ಹೇಗೆ ಮನುಷ್ಯನಾಗಿ ರೂಪುಗೊಳ್ಳುತ್ತಾನೆ ಎಂಬುದೇ ಸೂಚ್ಯವಾಗಿ ಹೇಳಬಹುದಾದ ಕಥಾವಸ್ತು. ಭೀಮನ ಮಗಳು ಪಲ್ಲೂನ ವ್ಯಕ್ತಿತ್ವವೇ ವಿಲಕ್ಷಣ ಸ್ವರೂಪದ್ದು. ಪಾತ್ರೆ ವ್ಯಾಪಾರ ಮಾಡಿಕೊಂಡು ಊರೂರು ಸುತ್ತುವ ಬಡ ಮುಸ್ಲಿಂ ತರುಣನೊಬ್ಬನ ಪ್ರೇಮಕ್ಕೆ ಶರಣಾಗಿ, ಅವನಿಗೆ ತನ್ನ ದೇಹವನ್ನೂ ಕೊಟ್ಟು ಸದಾ ಅವನ ಬರುವಿಕೆಗಾಗಿ ಕಾಯುತ್ತ ದಿನ ಕಳೆಯುವ ಮುಗ್ಧತೆ ಅವಳದು.
ಚಿತ್ರದ ಆರಂಭದಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿದ ಹಣ-ಚಿನ್ನದೊಂದಿಗೆ ಓಡಿ ಬರುವ ಸುಧಾಕರ ದಾರಿ ತಪ್ಪಿ ಸ್ಮಶಾನದ ಹಾದಿಯಲ್ಲಿ ಓಡುವಾಗ ಪಾಳು ಬಾವಿಯೊಂದರಲ್ಲಿ ಬೀಳುವುದು; ಬಾವಿಗೆ ಬಿದ್ದು ನೋವಿನಿಂದ ಕಿರುಚುವುದನ್ನು ಕೇಳಿಸಿಕೊಂಡು ಅಲ್ಲಿಗೆ ಬರವ ಭೀಮ ಅವನನ್ನು ಮೇಲಕ್ಕೆತ್ತಿ ತನ್ನ ಗುಡಿಸಲಿಗೆ ಕರೆದುಕೊಂಡು ಬಂದು ಅವನ ಕಾಲು ನೋವಿಗೆ ಮದ್ದು ಹಚ್ಚುವ ದೃಶ್ಯ ಚಿತ್ರ ಇಡೀ ಕಥೆಯ ಆಶಯವನ್ನು ಪ್ರತಿಮಾತ್ಮಕವಾಗಿ ಕಟ್ಟಿಕೊಡುತ್ತದೆ. ಇಲ್ಲಿ ವ್ಯಕ್ತವಾದ ಒಟ್ಟು ತಾತ್ಪರ್ಯವು ಒಂದು ಆಯಾಮದಲ್ಲಿ ಸುಧಾಕರನ ವ್ಯಕ್ತಿತ್ವ, ಅಧಃಪತನಗೊಂಡ ಅವನ ನೈತಿಕ ಪ್ರಜ್ಞೆಯನ್ನು-ಅವನು ಬಾವಿಯಲ್ಲಿ ಬಿದ್ದು ಅರಚುವ ದೃಶ್ಯವೇ ಧ್ವನಿಸುತ್ತದೆ. ಅದೇ ರೀತಿ ನಿಸ್ವಾರ್ಥದಿಂದ ಬೇರೆಯವರ ನೋವಿಗೆ ಸ್ಪಂದಿಸಿ ಮಾನವೀಯ ಕಳಕಳಿ ತೋರುವ ಭೀಮ, ಸುಧಾಕರನನ್ನು ಬಾವಿಯಿಂದ ಮೇಲೆಕ್ಕೆತ್ತುವ ದೃಶ್ಯ; ಸುಧಾಕರನಲ್ಲಿ ಮನುಷ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿ, ಮಾನವೀಯ ಚಿಂತನೆಗಳನ್ನು ಮೂಡಿಸುವ ಆದರ್ಶವಾಗಿ ಪ್ರತಿಮೆಗೊಳ್ಳುತ್ತದೆ. ಹೀಗೆ ಒಟ್ಟಾರೆಯಾಗಿ ಭೀಮನ ಸರಳ ನಿಷ್ಕಲ್ಮಶ ಬದುಕು, ಅವನ ಮಾನವೀಯ ತುಡಿತಗಳು, ಅವನು ಜೀವಿಸುವ ಪರಿಸರ; ಮನುಷ್ಯ ಯಾವುದನ್ನು ಬದುಕು ಎಂದು ಭ್ರಮಿಸಿ ಜೀವಿತ ಕಾಲವನ್ನು ಕಳೆದು ಕೊನೆಕಾಣಲು ಬರುವ ಸಾವಿನ ಸತ್ಯಕ್ಕೆ ಮೂರ್ತ ರೂಪವಾದ ಸ್ಮಶಾನ, ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡು ಆ ಕಳ್ಳ ಸುಧಾಕರನಲ್ಲಿ ತನ್ನ ಮಗ ಬಿಕ್ರನನ್ನು ಕಾಣುವ ಜುಂಜಿಯ ಅಂತಃಕರಣ-ಮನೋವೈಶಾಲ್ಯ, ತನ್ನ ಪ್ರೇಮಕ್ಕಾಗಿ ದೇಹವನ್ನೇ ಕೊಟ್ಟು ಬಸುರಿಯಾಗಿ ಹಳಹಳಿಸುವ ಪಲ್ಲೂ ಇವರೆಲ್ಲರಲ್ಲಿ ಇರುವ ಮನುಷ್ಯ ಪ್ರಜ್ಞೆ-ಸುಧಾಕರನ ಮನೋ ಪರಿವರ್ತನೆಗೆ ಕಾರಣವಾಗುವ ದೃಶ್ಯಗಳು ಪ್ರೇಕ್ಷನ ಮನದಲ್ಲಿ ಶಾಶ್ವತವಾಗಿ ಉಳಿಯುವಂಥವು.
ಕಳ್ಳ ಸುಧಾಕರನ ಪ್ರೇಯಸಿ ಅವನಿಂದ ಬಯಸಿದ್ದೇನು? ಅವಳ ಉದ್ದೇಶ ಇವನ ಪ್ರೀತಿ-ಸಾಂಗತ್ಯ ಬಯಸಿತ್ತೆ ಅಥವಾ ಅವಳದು ಸಂಪತ್ತಿನ ದಾಹವಾಗಿತ್ತೆ? ಪಲ್ಲೂನನ್ನು ಪ್ರೀತಿಸಿ ಅವಳ ದೇಹಸುಖವನ್ನೂ ಅನುಭವಿಸಿ ನೇಪಥ್ಯಕ್ಕೆ ಸರಿದ ಆ ಮುಸ್ಲಿಂ ತರುಣ ಮತ್ತೆ ವಾಪಸ್ ಬಂದನೆ? ಸುಧಾಕರ ಸ್ಮಶಾನಕ್ಕೆ ಬಂದು ಮನುಷ್ಯನಾಗುವ ಮೊದಲು ಯಾರನ್ನು ಕೊಲೆ ಮಾಡಿದ್ದ? ಯಾರ ಮನೆಯಲ್ಲಿ ಕಳ್ಳತನ ಮಾಡಿ ಆ ಮನೆಯಲ್ಲಿ ಯಾರ ಆತ್ಮಹತ್ಯೆಗೆ ಕಾರಣನಾದ? ಕೊನೆಗೆ ತಾನಿದ್ದ ಸ್ಮಶಾನಕ್ಕೇ ಬರುವ ತನ್ನ ಬೇಜವಾಬ್ದಾರಿ ಅಪ್ಪನ ಹೆಣ ಕಂಡಾಗ ಅವಲ್ಲಿ ಉಂಟಾದ ಸಂಚಲನ ಎಂಥದ್ದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ `ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರವನ್ನು ನೀವು ಒಮ್ಮೆ ನೋಡಲೇ ಬೇಕು.
`ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್ನಡಿ ಶರಣಪ್ಪ ಎಂ. ಕೋಟಗಿ ಅವರು ನಿರ್ಮಿಸಿರುವ, ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ `ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಸೇರಿದಂತೆ ಸುಮಾರು ತೊಂಬತ್ತು ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿ ಪ್ರದರ್ಶನಗೊಳ್ಳುವ ಮೂಲಕ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಗಳ ಸುರಿಮಳೆಯನ್ನೇ ಬಾಚಿಕೊಂಡಿದೆ! ಇದು ಕನ್ನಡ ಮತ್ತು ಕನ್ನಡ ಸದಭಿರುಚಿಯ ಚಿತ್ರಗಳ ಸಾಧನೆಗೆ ಸೇರಿರುವ ಮತ್ತೊಂದು ದಾಖಲೆ. ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತಹ ಮೈಲಿಗಲ್ಲು. ಪ್ರಮುಖ ಪಾತ್ರದಲ್ಲಿ ಹಫ್ತಾ ಖ್ಯಾತಿಯ ವರ್ಧನ್, ಬಲ ರಾಜ್ವಾಡಿ, ತಿಥಿ ಖ್ಯಾತಿಯ ಪೂಜಾ, ಸ್ಪಂದನ ಪ್ರಸಾದ, ಅನುಷಾ ರೋಡ್ರಿಗಾಸ್, ಶೀಬಾ ಅರುಣ್ಮೂರ್ತಿ ಅಭಿನಯಿಸಿದ್ದಾರೆ. ನಿತಿನ್ ಅಪ್ಪಿ ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಲೋಕಿ ಸಂಗೀತ, ಶೇಖರ್ ಎಫೆಕ್ಟ್ಸ್, ರಾಜ್ ಭಾಸ್ಕರ್ ಶಬ್ದವಿನ್ಯಾಸ, ನಿತಿನ್ ಕಾರ್ಯಪ್ಪ ಕಲರಿಂಗ್ ನಿರ್ವಹಿಸಿದ್ದಾರೆ.
ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು ಪ್ರಚಾರ, ಪ್ರಶಸ್ತಿಗಳ ಹಂಗಿನಿಂದ ದೂರ ಉಳಿದು ಕನ್ನಡ ಚಿತ್ರ-ಚಿತ್ರರಂಗದ ಉನ್ನತಿಯ ಮಹತ್ವಾಕಾಂಕ್ಷೆ ಹೊತ್ತು ಇಂತಹ ಶ್ರೇಷ್ಠ, ಸದಭಿರುಚಿಯ ಚಿತ್ರಗಳ ನಿರ್ದೇಶನದಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ಕೆ ಕನ್ನಡದ ಪ್ರೇಕ್ಷಕ ಪ್ರಭುಗಳ ಸಹಕಾರ ಕೂಡ ಅಗತ್ಯ.
*
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed