ಗೌಳಿ ಉಗ್ರಾವತಾರಿ ಕಿಟ್ಟಿಯ ದುಷ್ಟಸಂಹಾರ 3.5/5 ****
Posted date: 25 Sat, Feb 2023 02:27:09 PM
ಸಮಯ ಎನ್ನುವುದು ಎಂಥವರನ್ನಾದರೂ ಬದಲಾಯಿಸಿಬಿಡುತ್ತದೆ ಎನ್ನುವುದಕ್ಕೆ  ಈವಾರ ತೆರೆಕಂಡಿರುವ ಚಿತ್ರದ ನಾಯಕ ಗೌಳಿಯ ಜೀವನವೇ ಉದಾಹರಣೆ.  ಹಸುಗಳನ್ನು ಸಾಕುವುದು, ಅವುಗಳ ಹಾಲು ಮಾರಿಕೊಂಡು  ಜೀವನ ಸಾಗಿಸುವುದು ಗೌಳಿಗ ಜನಾಂಗದವರು ಹಿಂದಿನಿಂದ  ನಡೆಸಿಕೊಂಡು ಬಂದಿರುವ ಕಾಯಕ. ಸಿರ್ಸಿಯ ಸುತ್ತಮುತ್ತಲಿನ  ಭಾಗಗಳಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ಜನಾಂಗದ ಯುವಕ ಗೌಳಿ(ಶ್ರೀನಗರ ಕಿಟ್ಟಿ)ಯದು  ಪುಟ್ಟ ಸಂಸಾರ.  ಪತ್ನಿ ಗಿರಿಜಾ (ಪಾವನಾಗೌಡ) ಮತ್ತು ಮಗಳು(ಬೇಬಿ ನಮನ) ಇಷ್ಟೇ  ಆತನ ಜಗತ್ತು. ಹೀಗಿರುವಾಗ ಈ  ಸುಂದರ ಕುಟುಂಬದ ಮೇಲೆ  ದುರುಳ ಪೊಲೀಸ್ ಅಧಿಕಾರಿಯ ವಕ್ರದೃಷ್ಟಿ ಬೀಳುತ್ತದೆ. ಗಿರಿಜಾಳನ್ನು ಬಲಾತ್ಕರಿಸಲು ಹೋಗಿ ಆಕೆಯಿಂದ  ಕಪಾಳಮೋಕ್ಷ ಮಾಡಿಸಿಕೊಳ್ಳುತ್ತಾನೆ. ನಂತರ ಆತ ನೀಡುವ ಹಿಂಸೆಗೆ ಇಡೀ ಕುಟುಂಬವೇ ನಲುಗಿಹೋಗುತ್ತದೆ, ಆತನ ಜೊತೆಗೆ ನರರಾಕ್ಷಸರ ಗುಂಪೊಂದು ಇಡೀ ಕುಟುಂಬದ ಹಿಂದೆ ಬೀಳುತ್ತದೆ.  ಇವರನ್ನೆಲ್ಲ  ನಿಗ್ರಹಿಸಲು ಗೌಳಿ ಉಗ್ರಾವತಾರಿಯಾಗುತ್ತಾನೆ. ದುಷ್ಟ ಕೂಟವನ್ನು ಅಟ್ಟಾಡಿಸಿಕೊಂಡು ಹೋಗಿ ಅವರನ್ನು ಸಿಗಿದು ಹಾಕುತ್ತಾನೆ.  ಆ ದುಷ್ಟರು ಯಾರು, ಅವರೇಕೆ ಗೌಳಿ ಕುಟುಂಬಕ್ಕೆ ಮುಳ್ಳಾಗಿ ಬರುತ್ತಾರೆ, ಅವರ ವಿರುದ್ಧ ಗೌಳಿ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಅನ್ನೊದೇ ಕುತೂಹಲ.
 
ಬಹಳ ದಿನಗಳ ನಂತರ ತೆರೆಮೇಲೆ ಬಂದಿರುವ, ಶ್ರೀನಗರ ಕಿಟ್ಟಿ ಅವರು ಸಾಫ್ಟ್ ಅಂಡ್ ರಗಡ್ ಎರಡೂ ಲುಕ್ ಗಳಲ್ಲಿ ಅದ್ಭುತ ಅಭಿನಯ ನೀಡುವ ಮೂಲಕ   ಎರಡಕ್ಕೂ  ನ್ಯಾಯ ಒದಗಿಸಿದ್ದಾರೆ, ಮೊದಲ ಭಾಗದಲ್ಲಿ  ಎಮೋಷನಲ್ ಹೀರೋ ಆಗಿ  ಇಷ್ಟವಾಗುವ ಕಿಟ್ಟಿ, ನಂತರ ರಣಭೀಕರ ರುದ್ರನ ಅವತಾರದಲ್ಲಿ ಘರ್ಜಿಸುತ್ತಾರೆ.  ಚಿತ್ರದಲ್ಲಿ  ರಂಗಾಯಣ ರಘು  ಅವರ ಪಾತ್ರವೇ  ಇಡೀ ಚಿತ್ರದ ಹೈಲೈಟ್. ಹಾಗೆಯೇ, ಗೌಳಿಗರ ಕುಟುಂಬದ  ಹೆಣ್ಞಾಗಿ ಪಾವನಾಗೌಡ ಮತ್ತು ಮಗಳ ಪಾತ್ರದಲ್ಲಿ ನಮನಾ ಇಬ್ಬರೂ ಇಷ್ಟವಾಗುತ್ತಾರೆ.ನೆಗೆಟಿವ್ ಶೇಡ್ ಇನ್ಸ್ ಪೆಕ್ಟರ್  ಪಾತ್ರದಲ್ಲಿ  ಶರತ್ ಲೋಹಿತಾಶ್ವ  ನೋಡುಗರ ಗಮನ ಸೆಳೆಯುತ್ತಾರೆ.  ಉಳಿದಂತೆ ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ರುದ್ರೇಶ್ ಎಲ್ಲರೂ ಇಲ್ಲಿ ಬೇರೆ ಬೇರೆ ರೀತಿಯ  ಪಾತ್ರಗಳಲ್ಲೇ  ಅಬ್ಬರಿಸಿದ್ದಾರೆ. ನಿರ್ದೇಶಕ ಸೂರ  ಅವರು  ಗೌಳಿ ಸಿನಿಮಾವನ್ನು ಬಹುತೇಕ  ಉತ್ತರ ಕನ್ನಡದ ಸೊಗಡಿನಲ್ಲಿ  ನಿರೂಪಿಸಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತ ಚಿತ್ರ ಇದಾಗಿರುವುದರಿಂದ  ಕೆಲ ದೃಶ್ಯಗಳಲ್ಲಿ ರಕ್ತ ಹರಿಸುವುದನ್ನು ಸಹಿಸಿಕೊಳ್ಳಲೇಬೇಕಿದೆ.  ನಿರ್ದೇಶಕ ಸೂರ,  ಚಿತ್ರದ ಪ್ರಥಮ ಭಾಗದಲ್ಲಿ ಫ್ಯಾಮಿಲಿ ಎಮೋಷನ್ ಗೆ ಪ್ರಾಮುಖ್ಯತೆ ನೀಡಿದರೆ, ಎರಡನೇ ಭಾಗದಲ್ಲಿ   ಆ್ಯಕ್ಷನ್ ಗೆ ಒತ್ತು ಕೊಟ್ಟಿದ್ದಾರೆ. ಇತ್ತೀಚಿನ  ದಿನಗಳಲ್ಲೇ ಲಾಂಗ್ ಕ್ಲೈಮ್ಯಾಕ್ಸ್  ಇರುವ  ಚಿತ್ರವಿದು.   ಆಕ್ಷನ್ ಪ್ರಿಯರಿಗಂತೂ ಗೌಳಿ  ಸಖತ್ ಇಷ್ಟವಾಗುತ್ತದೆ,   ಹಾಡುಗಳು, ಅದರ ಮೇಕಿಂಗ್ ಕಣ್, ಕಿವಿಗಳೆರಡನ್ನೂ  ತಂಪಾಗಿಸುತ್ತದೆ. 
 
ನಿರ್ದೇಶಕ ಸೂರ ಅವರು ಕ್ಯಾರೆಕ್ಟರ್‌ಗೆ  ತಕ್ಕಂತೆ  ಪಾತ್ರಪೋಷಣೆ ಮಾಡಿದ್ದಾರೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣದಲ್ಲಿ   ದಾಂಡೇಲಿ  ಕಾಡು ಅದ್ಭುತವಾಗಿ  ಸೆರೆಯಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed