ಧ್ರುವ ಸರ್ಜಾ ಮತ್ತು `ಜೋಗಿ` ಪ್ರೇಮ್‌ ಕಾಂಬಿನೇಷನ್‌ನಲ್ಲಿ `ಕೆಡಿ` ಶೀರ್ಷಿಕೆ ಘೋಷಣೆ
Posted date: 21 Fri, Oct 2022 02:14:30 PM
ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ `ಜೋಗಿ` ಪ್ರೇಮ್‌ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಕ್ಕೆ `ಕೆ ಡಿ` ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟೈಟಲ್ ಟೀಸರ್ ರಿಲೀಸ್ ಮಾಡಿ, ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಬಾಲಿವುಡ್‌ ನಟ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಟೈಟಲ್ ಟೀಸರ್ ರಿಲೀಸ್ ಆಗಮಿಸಿದ್ದ ಅವರು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. `ಕೆಜಿಎಫ್‌ 2` ಚಿತ್ರದಲ್ಲಿ ಅಧೀರ ಪಾತ್ರ ಮಾಡಿದ್ದ ಸಂಜಯ್ ದತ್, ಇಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 

ಈ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಸದ್ಯ `ಕೆಡಿ` ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.

ಮಚ್ಚು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ನಟ ಧ್ರುವ ಸರ್ಜಾ, ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಅವರು 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಧ್ರುವ ರೆಟ್ರೋ ಶೈಲಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಕಾಳಿದಾಸ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪರಭಾಷೆಯ ಪತ್ರಕರ್ತರ ಎದುರು ತಮ್ಮ ಪರಿಚಯ ಮಾಡಿಕೊಂಡ ಧ್ರುವ, ಇದು ನಾನಿನ್ನೂ ಕೇವಲ 5 ಸಿನಿಮಾ ಮಾಡಿರುವ ನಟ. ಇದು ನನ್ನ 6ನೇ ಸಿನಿಮಾ. ನಾನು ಹುಟ್ಟಿದ್ದು, ಆರನೇ ತಾರೀಖು. ನನ್ನ ಲಕ್ಕಿ ನಂಬರ್ ಆರು. ಹಾಗೆಯೇ  ಇದು ನನ್ನ 6ನೇ ಚಿತ್ರ. ಇದಿನ್ನೂ ಆರಂಭ ಅಷ್ಟೇ. ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ ಎಂದು ಧ್ರುವ ಸರ್ಜಾ ಹೇಳಿದರು. 

ಕೆ ಡಿ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್‌ ಸೇತುಪತಿ ಧ್ವನಿ ನೀಡಿದ್ದಾರೆ. ಮಲಯಾಳಂ ಟೈಟಲ್ ಟೀಸರ್‌ಗೆ  ಮೋಹನ್‌ಲಾಲ್‌ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್‌ ದತ್‌ ಅವರು ಧ್ವನಿ ನೀಡಿದ್ದಾರೆ. ಕೆವಿನ್‌ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed