ಕನ್ನಡ ಚಿತ್ರರಂಗಕ್ಕೆ ಹೊಸ ಚೇತನ ``ಕಾಮಧೇನು`` ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ
Posted date: 28 Sun, May 2023 07:27:24 PM
 ರಾಜೇಂದ್ರ ಸಿಂಗ್ ಬಾಬು.... ನಾವು ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ ಮತ್ತು ಡಾ. ಅಂಬರೀಶ್ ಇವರ ಚಿತ್ರಗಳಿಗೆ ಬಡವರ ಬಂಧು, ಜನನಾಯಕ, ಜಗಮೆಚ್ಚಿದ ಮಗ, ಕ್ರಾಂತ್ರಿಕಾರ, ಕನ್ನಡ ತಾಯಿಯ ಮಗ, ಬಹುದ್ದೂರು ಗಂಡು, ಕಲಿಯುಗ ಕರ್ಣ, ಅನೇಕ ಶಿರ್ಷಿಕೆಗಳ ಚಿತ್ರಗಳನ್ನು ನೋಡಿದ್ದೇವೆ. ಅದು ಬೆಳ್ಳಿತೆರೆಯ ಮೇಲೆ ಕಾಲ್ಪನಿಕ ಪಾತ್ರಗಳು, ಅದು ಕೇವಲ ಕ್ಷಣಕಾಲ ತೆರೆಯ ಮೇಲೆ ವಿಜ್ರಂಭಿಸಿ ಮಾಯವಾಗುವ ಪಾತ್ರಗಳು, ಹಾಗೂ ಪ್ರೇಕ್ಷಕರನ್ನು ರಂಜಿಸುವ ಪಾತ್ರಗಳು. ಆದರೆ ಇಂದಿನ ನಮ್ಮ ನೆಚ್ಚಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು, ಈ ಮೇಲೆ ಹೇಳಿದ ಎಲ್ಲ ಶೀರ್ಷಿಕೆಗಳ ನಾಯಕ, ನಿಜಜೀವನದಲ್ಲಿ ಈ ಪಾತ್ರಗಳನ್ನು ಜೀವಂತವಾಗಿ  ಅನುಭವಿಸಿ, ಹೋರಾಟ, ಎದೆಗುಂದದೆ ಮತ್ತು ಶತ್ರುಗಳನ್ನು ಹಿಮ್ಮೆಟ್ಟಿಸಿ, ವಿಜಯ ಪತಾಕೆ ಹಾರಿಸಿರುವ ಧೀರ, ಶೂರ, ಸಾಹಸಿ. ಹಾಗೂ ನುಡಿದಂತೆ ನಡೆಯುವ  ಮುಖ್ಯಮಂತ್ರಿ, ಈ ಎಲ್ಲ ಬಿರುದುಗಳಿಗೆ ಸೂಕ್ತ ಮತ್ತು ಏಕೈಕ ವ್ಯಕ್ತಿ. ಇವರಿಗೆ ಕನ್ನಡ ಚಿತ್ರರಂಗದ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ, ನಾವು ಚಿತ್ರರಂಗದವರು ಅವರನ್ನು ಭೇಟಿ ಆದಾಗಲೆಲ್ಲಾ ಪಾಪ ಕಣ್ರಪ್ಪ ನೀವು, ನಿಮ್ಮನ್ನ ಕಂಡರೆ ನನಗೆ ಬಹಳ ಅನುಕಂಪ, ನಿಮಗೆ , ಲಾಭನೇ ಇಲ್ಲದೆ, ಕನ್ನಡ ಚಿತ್ರಗಳನ್ನು ಮಾಡಿ ಕೈ ಸುಟ್ಟಿಕೊಂಡು ಜೀವನವೆಲ್ಲಾ ಹೋರಾಟ ಮಾಡುತ್ತಾ ಇದೀರ ಅಂತ ಹೇಳುತ್ತಾ ಇದ್ದು ನನಗೆ ಅವರು ಮೈಸೂರಿನಿಂದ ಪರಿಚಯ. ನಾನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಓದುತ್ತಾ ಇದ್ದಾಗ, ಪಿ.ಯು.ಸಿ. ಯಲ್ಲಿ ನಮ್ಮ ಪರಿಚಯ, ಅಂದಿನಿಂದ ಇಂದಿನವರೆಗೆ ನಾನು ಅವರ ಅಭಿಮಾನಿ. ನಮ್ಮ ಚಿತ್ರರಂಗದ ಹಲವಾರು ಹೋರಾಟದಲ್ಲಿ ನಾನು ಡಾ. ರಾಜ್ ಅವರ ಜೊತೆ ಸೇರಿ, ಸರ್ಕಾರದ ಜೊತೆ ಚರ್ಚೆಗೆ ಹೋದಾಗ ಅಂದಿನ ಹಣಕಾಸು ಸಚಿವರು ಆಗಿದ್ದ ಶ್ರೀ ಸಿದ್ದರಾಮಯ್ಯನವರು ನಮಗೆ 100% ತೆರಿಗೆ ವಿನಾಯಿತಿ, ನಂತರ ಕೆಲವೊಮ್ಮೆ ನಮ್ಮ ಚಿತ್ರರಂಗದ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಸತತವಾಗಿ 3  ದಿನ ನಮ್ಮ ಜೊತೆಗೆ ಚರ್ಚೆ ಮಾಡಿ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ನಮಗೆ ಪರಿಹಾರ ನೀಡಿದರು.
 
ಈ ರೀತಿ ಒಬ್ಬರು ಹಣಕಾಸಿನ ಸಚಿವರು ಚಿತ್ರರಂಗದವರ ಸಮಸ್ಯೆಗಳಿಗೆ ಸತತವಾಗಿ ಬೆಳಿಗ್ಗೆ, ಸಾಯಂಕಾಲ 3 ದಿನಗಳ ಕಾಲ ಚರ್ಚಿಸಿ, ಪರಿಹಾರ ನೀಡಿದವರು ಭಾರತದಲ್ಲೆ ಮೊದಲನೆಯ ಹಣಕಾಸು ಸಚಿವರು. ಯಾಕೆಂದರೆ ಎಲ್ಲಾ ಸರ್ಕಾರಗಳಿಗೆ ಚಿತ್ರರಂಗದ ಸಮಸ್ಯೆ ಏನೇ ಇದ್ದರು, ಅದು ಅವರಿಗೆ ಕೊನೆಯ ವಿಷಯ. ಪಾರ್ವತಮ್ಮ ರಾಜ್‌ಕುಮಾರ್ ಅವರು ನಮ್ಮ ಜೊತೆಯಲ್ಲಿ ಇದ್ದು, ಈ ವಿಷಯವನ್ನು ಡಾ. ರಾಜ್ ಅವರಿಗೆ ತಿಳಿಸಿ ಮನಸಾರೆ ಹೊಗಳಿದರು. ಇದನ್ನು ಕಂಡು ಡಾ. ರಾಜ್ ಅವರು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿ, ಹಲವಾರು ವಿಷಯಗಳನ್ನು ಬಗೆಹರಿಸಿದ್ದರು. ಇದನ್ನು ತಿಳಿದು ಡಾ. ರಾಜ್‌ಕುಮಾರ್ ಅವರನ್ನು ಅಭಿನಂದಿಸಿ, ಡಾ. ರಾಜ್ ಮನೆಯಲ್ಲಿ ಇವರ ಕೊಡುಗೆಯನ್ನು ಡಾ. ರಾಜ್ ಅವರು ಅಪಾರವಾದ ಗೌರವವನ್ನು ಕೊಟ್ಟು, ಡಾ. ರಾಜ್ ಅವರು ಶ್ರೀ ಸಿದ್ದರಾಮಯ್ಯನವರು ನಮ್ಮ ಕಾಡಿನ ಕಡೆಯವರು ಎಂದು ಹೇಳಿ ಅವರಿಗೆ ಮನೆಗೆ ಕರೆದು ಮನೆಗೆ ಕರೆದು ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆಯನ್ನು ಅವರ ಕೈಯಿಂದ ಬಡಿಸಿ, ಶ್ರೀ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ತಿಳಿಸಿದರು. 
 
ನನಗೆ ಈ ಸವಿನೆನಪು ಮರೆಯಲು ಆಗುವುದಿಲ್ಲ. ಅವರು ಮುಖ್ಯಮಂತ್ರಿ ಆದ ನಂತರ ನನ್ನನ್ನು ಕರ್ನಾಟಕ “ಚಲನಚಿತ್ರ ಅಕಾಡೆಮಿ”ಗೆ “ಚೇರ್ಮನ್” ಮಾಡುವ ಸಂದರ್ಭದಲ್ಲಿ ಕೆಲವರು ಬಾಬುಗೆ ತುಂಬಾ  ಸಾಲ ಇದೆ, ಬ್ಯಾಂಕ್ ಅವನ ಹಿಂದೆ ಬಿದ್ದಿದೆ ಎಂದು ಚಾಡಿ ಹೇಳಿದರು. ಆದರೆ ಅವರು ಸಾಲ ಮಾಡಿದ್ರೆ ಏನಂತೆ, ಕೊಲೆ ಮಾಡಿಲ್ಲವಲ್ಲ ಅಂದು, ನನಗೆ ಅಕಾಡೆಮಿಗೆ ಅಧ್ಯಕ್ಷನನ್ನಾಗಿ ನೇಮಿಸಿದರು.
 
ಎಲ್ಲರಿಗೆ 18 ತಿಂಗಳು ಅಧಿಕಾರ ಕೊಟ್ಟರೆ ನನಗೆ 40 ತಿಂಗಳು ಅಧಿಕಾರ ಕೊಟ್ಟರು. ಈ ಸಮಯದಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಯಾವುದೇ ಮುಖ್ಯಮಂತ್ರಿಗಳು ಈ ರೀತಿ ಕೊಡುಗೆಯನ್ನು  ಕೊಟ್ಟಿರಲಿಲ್ಲ. ಬೆಂಗಳೂರು ಅಂತರರರಾಷ್ಟ್ರೀಯ ಚಲನಚಿತ್ರೋತ್ಸವ, ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನ ಮೇಲೆ ಮೊಟ್ಟ ಮೊದಲ ಬಾರಿಗೆ ವಿಜ್ರಂಭಣೆಯಿಂದ ದೇಶದಲ್ಲಿ ಅತ್ಯುತ್ತಮವಾದ ಚಲನಚಿತ್ರೋತ್ಸವ, ಇಡೀ ಭಾರತೀಯ ಚಿತ್ರರಂಗ ಮತ್ತು ಹಾಲಿವುಡ್‌ನಿಂದ ನಿರ್ಮಾಪಕರನ್ನು ಕರೆಸಿ, ಕನ್ನಡ ನಾಡನ್ನು ಪರಿಚಯಿಸಿದರು.
 
ಇಂದಿಗೂ ಆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ವಿಜ್ರಂಭಣೆ, ಮತ್ತು ಪ್ರೇಕ್ಷಕರಿಗೆ ಅನುಕೂಲವಾಗುವಂತೆ, ಓರಿಯನ್ ಮಾರ್ಚನ ೧೩ ಸ್ಕ್ರೀನ್ ಗಳಲ್ಲಿ ಚಲನಚಿತ್ರೋತ್ಸವ ದಾಖಲೆ ಆಯಿತು. ಇದರ ಹಿಂದೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಕಾಟಚಾರಕ್ಕೆ ಹಳೇ ಥಿಯೇಟರ್‌ಗಳಲ್ಲಿ ಬೆಂಗಳೂರಿನ ದೂರ ದೂರದ ಬಡಾವಣೆಗಳಲ್ಲಿ ನಡೆಸಿ, ಪ್ರೇಕ್ಷಕರು ಸೋತು ಹೋಗಿದ್ದರು. ಮತ್ತೆ ಮೊದಲ ಬಾರಿಗೆ ಮೈಸೂರಿನಲ್ಲಿ ಕೂಡ ಚಿತ್ರೋತ್ಸವ ಆರಂಭಿಸಿ, ರಾಜ್ಯದ ಎಲ್ಲಾ ಜಿಲ್ಲೆ ಗಳಲ್ಲಿ ಮಾಡಬೇಕೆಂದು ಆದೇಶ ಮಾಡಿದ್ದರು. ಕೇಂದ್ರ ಸರ್ಕಾರದ ಗೋವ ಚಿತ್ರೋತ್ಸವ ಇದರ ಮುಂದೆ ಮಂಕಾಗಿತ್ತು. 150 ಚಿತ್ರಗಳಿಗೆ ಸಬ್ಸಿಡಿ, ಡಾ. ರಾಜ್ ಅವರ ಹುಟುಹಬ್ಬ ರಾಜ್ಯದ ಎಲ್ಲಾ ಕೇಂದರಗಳಲ್ಲಿ  ಏಪ್ರಿಲ್ 24 ಕ್ಕೆ ಆಚರಣೆ ಮಾಡಬೇಕೆಂದು ಆದೇಶಿಸಿದ್ದರು. ಹಲವಾರು ಕಲಾವಿದರಿಗೆ ಮಾಶಾಸನ, ಮತ್ತು ಅಶಕ್ತ ಕಲಾವಿದರಿಗೆ ತುಂಬಾ ಸಹಾಯ ಮಾಡಿದರು ಹಾಗೂ ಅನೇಕ ಕಲಾವಿದರಿಗೆ ಮೈಸೂರು ಬೆಂಗಳೂರಿನಲ್ಲಿ ನಿವೇಶನಗಳನ್ನು ಕೊಟ್ಟರು. ಜಿಎಸ್‌ಟಿ ಬಂದ ನಂತರ, ಕನ್ನಡ ಚಿತ್ರಗಳಿಗೆ 100% ತೆರಿಗೆ ವಿನಾಯಿತಿ ವಜಾ ಮಾಡಿದರು. ಆಗ ಸಿದ್ದರಾಮಯ್ಯನವರು ನಾನು ಜಿ.ಎಸ್.ಟಿ.ಯ ರಾಜ್ಯದ ಭಾಗವನ್ನು ನಿರ್ಮಾಪಕರಿಗೆ ವಾಪಸ್ಸು ಕೊಡುತ್ತೇನೆ ಎಂದು ಹೇಳಿ ವಿಧಾನಸಭೆಯಲ್ಲಿ ಘೋಷಿಸಿದರು. ನಾನು ಅಧ್ಯಕ್ಷನಾಗಿದ್ದಾಗ ಕನ್ನಡ ಕಾದಂಬರಿಗಳಿಗೆ ‘ಜೇನು ಗೂಡು’ ಎಂಬ ಕಾರ್ಯಕ್ರಮಕ್ಕೆ, ಅಕಾಡೆಮಿಯಿಂದ ಪ್ರತ್ಯೇಕ ಸಹಾಯಧನ 25 ಲಕ್ಷ ಘೋಷಿಸಿದರು.
 
ಆಗ ಅವರು ನನಗೆ ಹೇಳಿದ್ದು ಕಥಾಲೇಖಕರಿಗೆ ೫ ಲಕ್ಷ ಕೊಡಿ ಎಂದು ಆದೇಶ ಮಾಡಿದರು. ಆದರೆ ಮುಂದೆ ಬಂದ ಸರ್ಕಾರಗಳು ಈ ಆದೇಶಗಳನ್ನು ಪಾಲಿಸದೆ, ಇಂದಿಗೂ ನೆನೆಗುದ್ದಿಗೆ ಬಿದ್ದಿದೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ತುಂಬಾ ಹಿನ್ನೆಡೆ ಆಯಿತು. ಇನ್ನು ಚಿತ್ರನಗರಿಯ ವಿಷಯ, 1975 ರಿಂದ ದೇವರಾಜು ಅರಸು ಅವರ ಕಾಲದಿಂದ, ಇಂದಿನವರೆಗೂ ಯಾವ ಮುಖ್ಯಮಂತ್ರಿಗಳು ಈ ಕಡೆ ಗಮನ ಕೊಡಲಿಲ್ಲ. ಕೊನೆಗೆ ಹೆಸರುಘಟ್ಟದಲ್ಲಿ ಇದ್ದ ಚಿತ್ರನಗರಿಯ ಸ್ಥಳ ಮತ್ತು ಪರಿಸರದ ಹೋರಾಟದಿಂದ 
ಮತ್ತೆ ಸರ್ಕಾರ ಹಿಂಪಡೆಯಿತು. ರಾಜ್ಯದಲ್ಲಿ ಚಿತ್ರನಗರಿಯ ಕನಸು ಮತ್ತೆ ಕಲ್ಪನೆ ಕರ್ನಾಟಕದ್ದೆ ಮೊದಲು. ನಂತರದ ದಿನಗಳಲ್ಲಿ ಭಾರತದ ಎಲ್ಲಾ ರಾಜ್ಯಗಳು ಅವರವರ ರಾಜ್ಯಗಳಲ್ಲಿ ಚಿತ್ರನಗರಿ ಸ್ಥಾಪಿಸಿ, ಕರ್ನಾಟಕಕ್ಕೆ ಚಿತ್ರನಗರಿ ಇಲ್ಲದೆ ನಾವು ಬೇರೆ 
ರಾಜ್ಯಗಳಿಗೆ ವಲಸೆ ಹೋಗುವ ಸಂದರ್ಭ ನಿರ್ಮಾಣವಾಯಿತು. ಈ ಚಿತ್ರನಗರಿಯ ಕನಸು ಕನಸ್ಸಾಗೆ ಉಳಿಯಿತು. ಒಮ್ಮೆ ನಾನು ಅವರಿಗೆ ಈ ಚಿತ್ರನಗರಿಯ ಕನಸ್ಸನ್ನು ಪ್ರಸ್ತಾಪಿಸಿ, ಮೈಸೂರು ಚಿತ್ರನಗರಿಗೆ ಸೂಕ್ತವಾದ ಸ್ಥಳ, ಚಲನಚಿತ್ರದ ಚಿತ್ರೀಕರಣ ಮೊದಲು ಪ್ರಾರಂಭವಾಗಿದ್ದು ಒಡೆಯರ್ ಅವರ ಕಾಲದಲ್ಲಿ. ಮೈಸೂರಿನ ಅರಮನೆಯಲ್ಲಿ ಚಿತ್ರೀಕರಣ ನಡೆದು, ಕನ್ನಡ ಚಿತ್ರರಂಗದ ಮೊದಲ ಹೆಜ್ಜೆ ಮೈಸೂರು ಅರಮನೆಯಲ್ಲಿ ನಾಂದಿ ಆಯಿತು. ನಾನು ಅವರಿಗೆ ಮೈಸೂರು ಸುತ್ತಮುತ್ತ 250 ಚಿತ್ರೀಕರಣದ ತಾಣಗಳ ಬಗ್ಗೆ ವಿವರವಾಗಿ ತಿಳಿಸಿ ಮತ್ತೆ ಪ್ರವಾಸೋದ್ಯಮಕ್ಕೆ ಈ ಮೈಸೂರು ಚಿತ್ರನಗರಿ ತುಂಬಾ ಅನುಕೂಲವಾಗಿದೆ. ಅಂದಿನಿಂದ ಭಾರತೀಯ ಚಿತ್ರರಂಗವೇ ಮೈಸೂರಿಗೆ ಬಂದು, ಹಾಲಿವುಡ್, ಮುಂಬೈನ ರಾಜ್‌ಕಪೂರ್, ಶಾಂತರಾಮ್ ಮತ್ತು ಕನ್ನಡದ ನಿರ್ದೇಶಕರು ಮೈಸೂರಿನ ರಮಣೀಯ ಸ್ಥಳಗಳನ್ನು ಚಿತ್ರಿಸಿ ಭಾರತ ಚಿತ್ರರಂಗಕ್ಕೆ ತೋರಿಸಿದ್ದಾರೆ ಎಂದು ಮನದಟ್ಟು ಮಾಡಿದೆ. ಚಿತ್ರನಗರಿ ಸ್ಥಾಪಿಸಿದರೆ ಸುಮಾರು 25000 ಜನರಿಗೆ ಉದ್ಯೋಗ ಸೃಷ್ಟಿಯಾಗಿ ಪ್ರವಾಸೋದ್ಯಮ ಕೂಡ ಬೆಳೆಯುತ್ತದೆ. 
 
ಇದೆಲ್ಲ ಹೊರತುಪಡಿಸಿ ಸುಮಾರು 55  ವರ್ಷದಿಂದ ಕರ್ನಾಟಕದಲ್ಲಿ ಚಿತ್ರನಗರಿ ಆಗಲೇ ಇಲ್ಲ. ನಾನು ಇದರ ಪ್ರಸ್ತಾವನೆಯನ್ನು ಮೈಸೂರಿನಲ್ಲಿ ಚಿತ್ರನಗರಿ ಆಗಬೇಕೆಂದು ಕೋರಿದಾಗ ಕೂಡಲೇ ಸಭೆ ಕರೆದು, ಮೈಸೂರಿನಲ್ಲಿ 125 ಎಕರೆ ಜಮೀನನ್ನು ಅವರು ವರುಣ ಕ್ಷೇತ್ರದಲ್ಲಿ ನೀಡಿದರು. ಆದರೆ ಈಗಲೂ ಮೈಸೂರಿನಲ್ಲಿ ಚಿತ್ರನಗರಿ ಆಗಲಿಲ್ಲ ಕಾರಣ ಹಿಂದಿನ ಮುಖ್ಯಮಂತ್ರಿಗಳು, ಸಿದ್ದರಾಮಯನವರ ಕೊಡುಗೆಯನ್ನು ನಿರಾಕರಿಸಿ ನೆನೆಗುದ್ದಿಗೆ ಇಟ್ಟು, ರಾಮನಗರ, ಬೆಂಗಳೂರು ಹಾಗೂ ಹಲವಾರು ಸ್ಥಳಗಳನ್ನು ಆರಿಸಿ ಯಾವುದೇ ಕಾರ್ಯಗತವಾಗಲಿಲ್ಲ. 
 
ಹಿಂದಿನ ಕೊನೆಯ ಮುಖ್ಯಮಂತ್ರಿ ಅವರಿಗೆ ನಾವು 16 ಜನ ನಿರ್ಮಾಪಕ, ನಿರ್ದೇಶಕರು, ಹಾಗೂ ಸುತ್ತೂರು ಶ್ರೀಗಳು, ಮೈಸೂರಿನ ಎಲ್ಲ ಶಾಸಕರು ಎಷ್ಟೇ  ಮನವಿ ಮಾಡಿದರೂ ಮೈಸೂರನ್ನು ಕೈ ಬಿಟ್ಟು ಕೊನೆಗೆ ಚುನಾವಣೆ ಸಂದರ್ಭದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಘೋಷಿಸಿದರು ಅದರೆ ಅವರ ಅಧಿಕಾರವೇ ಹೋಗಿದೆ. 
 
ಅಂದು  ಚಲನಚಿತ್ರಮಂದಿರಗಳ ರಿನೋವೇಶನ್ 25 ಲಕ್ಷ ಜನತಾ ಚಿತ್ರಮಂದಿರಕ್ಕೆ 50 ಲಕ್ಷ ಸಬ್ಸಿಡಿ ಮತ್ತು ಕನ್ನಡ ಪ್ರೇಕ್ಷಕರಿಗೆ ಟಿಕೆಟ್ ಬೆಲೆ ದುಬಾರಿ ಆಗಬಾರದು ಎಂದು ರೂ.200 ರಿಂದ ರೂ.250 ರ ಒಳಗೆ ಇರಬೇಕು, ಇತರ ರಾಜ್ಯಗಳಂತೆ ಇರಬೇಕು ಎಂದು ಆದೇಶ ಮಾಡಿದ ಮುಖ್ಯಮಂತ್ರಿ. ಆದರೆ ಸದರಿ ಆದೇಶವನ್ನು ಜಾರಿಗೊಳಿಸಲಿಲ್ಲ. ಇಂದು ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ  ಶ್ರೀ ಡಿ.ಕೆ.ಶಿವಕುಮಾರ್ ಅವರು, ಚಿತ್ರರಂಗದವರು, ಅವರು ಸಂಚಾರಿ ಚಿತ್ರಮಂದಿರದ ಮಾಲೀಕರು ಮತ್ತು ಚಿತ್ರರಂಗದವರ ಮೇಲೆ ಇಟ್ಟಿರುವ ಅಪಾರವಾದ ಅಭಿಮಾನದಿಂದ ಕನ್ನಡ ಚಿತ್ರರಂಗದ ಗ್ರಹಣ ಬಿಟ್ಟು ಅವರ ಕಾಲದಲ್ಲಿ ಸುವರ್ಣಯುಗ ಪ್ರಾರಂಭವಾಗುವುದು ಅನ್ನೋದರಲ್ಲಿ ಸಂದೇಹವಿಲ್ಲ.
 
ನಮ್ಮ ಕನ್ನಡ ಚಿತ್ರರಂಗಕ್ಕೆ ಅವರು ಕಾಮಧೇನು. ಕೇಳಿದ ತಕ್ಷಣ ಸ್ಪಂದಿಸುವ ಮುಖ್ಯಮಂತ್ರಿಗಳಾಗಿ ಹೊಸ ಕನಸು, ಹೊಸ ವಿಶ್ವಾಸ, ಇವರ ಮೇಲಿದೆ. ಇಂದಿನಿಂದ ಕನ್ನಡ ಚಿತ್ರರಂಗಕ್ಕೆ ಗ್ರಹಣ ಬಿಟ್ಟ ಸುವರ್ಣಯುಗ ಪ್ರಾರಂಭವಾಗಿದೆ. ಈ ರೀತಿ “ಜೋಡೆತ್ತು” ನಮಗೆ ಕಾಮಧೇನು ಆಗುವುದರಲ್ಲಿ ಸಂಶಯವಿಲ್ಲ. ಈ ಶುಭಸಂದರ್ಭದಲ್ಲಿ ಚಿತ್ರರಂಗದ ನಾವುಗಳು ಎಲ್ಲ 
ಕನಸುಗಳನ್ನು ನನಸು ಮಾಡುವ “ಕಾಮಧೇನು”ಗಳಾಗುತ್ತೇವೆ ಎಂದು ನಂಬಿರುತ್ತೇವೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed