ಸಾವಿರಾರು ಮೈಲಿ ದೂರವಿದ್ದುಕೊಂಡೇ ಒಬ್ಬ ವ್ಯಕ್ತಿಯನ್ನು ನಿಯಂತ್ರಿಸುವುದು ಎಂದರೆ ಸಾಮಾನ್ಯದ ಮಾತಲ್ಲ, ಇದೆಲ್ಲ ವಾಮಾಚಾರದಿಂದ ಮಾತ್ರ ಸಾಧ್ಯ. ಈ ವಿದ್ಯೆಯನ್ನು ಸದುದ್ದೇಶಕ್ಕೆ ಬಳಸೋದಕ್ಕಿಂತ ದುರುದ್ದೇಶಗಳಿಗೆ ಬಳಸುವುದೇ ಹೆಚ್ಚಾಗಿದೆ. ಈಗ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇದನ್ನು ನಂಬಲೇಬೇಕಾಗಿದೆ, ವಾಮಾಚಾರ, ಮಾಟ ಮಂತ್ರ ಮಾಡುವುದು ನಿಜ ಎಂದು ಈಗಿನ ಕಾಲದ ಬಹಳಷ್ಟು ಜನ ನಂಬುವುದಿಲ್ಲ, ಆದರೆ ಇದೆಲ್ಲ ನಡೆಯುವುದು ನಿಜ, ಈಗಲೂ ನಡೆಯುತ್ತಿದೆ ಎಂದು ಸಾಕ್ಷಿಸಮೇತ ತೋರಿಸುವವರೂ ಇದ್ದಾರೆ, ಅಂಥದೇ ಕಥಾಹಂದರ ಇಟ್ಟುಕೊಂಡು ನಿರ್ಮಿಸಿರುವ ಚಿತ್ರ ಗಧಾಯುದ್ದ. ಇತ್ತೀಚಿನ ಕೆಲವು ಆತ್ಮಹತ್ಯೆ ಪ್ರಕರಣಗಳಲ್ಲಿ ಯಾವುದೋ ಒಂದು ಶಕ್ತಿಯಿಂದ ಪ್ರೇರಿತರಾಗಿ ಹಾಗೆ ಮಾಡಿಕೊಂಡಿರುವುದು ಕಂಡುಬಂದಿದೆ.
ಬಹುತೇಕ ಪ್ರಕರಣಗಳಲ್ಲಿ ಇದು ಕೊಲೆ ಎನ್ನುವುದು ಗೊತ್ತಾಗಿದೆ. ಆದರೆ ಅದನ್ನು ಪ್ರೂವ್ ಮಾಡಲು ಯಾವುದೇ ಸಾಕ್ಷಿ ಸಿಗದೆ, ಇಂಥ ಪ್ರಕರಣಗಳು ಮುಚ್ಚಿಹೋಗುತ್ತಿವೆ. ಆ ಕೊಲೆಗಳ ಹಿಂದೆ ವಾಮಾಚಾರದ ಪ್ರೇರಣೆಯಿರುತ್ತದೆ. ಕೊಳ್ಳೇಗಾಲ, ಕೇರಳ ಭಾಗದಲ್ಲಿ ವಾಮಾಚಾರ ಮಾಡುವವರು ಹೆಚ್ಚಾಗಿ ಕಂಡುಬರುತ್ತಾರೆ. ಕೇವಲ ವೈಯಕ್ತಿಕ ದ್ವೇಷ, ಆಸ್ತಿ, ಒಡವೆ, ಧನದಾಹದಿಂದ ಮನುಷ್ಯನ ಜೀವಗಳನ್ನು ತೆಗೆಯಲು ಸಂಚು ರೂಪಿಸುವವರು ಇಂಥವರ ಮೊರೆಹೋಗುತ್ತಾರೆ. ನೂರಾರು ಕಿಲೋಮೀಟರ್ ದೂರವಿದ್ದುಕೊಂಡೇ ಈ ವಾಮಾಚಾರಿಗಳು ಮನುಷ್ಯರ ಜೀವವನ್ನು ಹಿಂಸಿಸಿ ಹಂತ ಹಂತವಾಗಿ ತೆಗೆಯುತ್ತಾರೆ, ಕೆಲವರು ದುಡ್ಡಿಗೋಸ್ಕರ ಇಂಥ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು ದುಷ್ಟಶಕ್ತಿಗಳನ್ನು ವಶಪಡಿಸಿಕೊಳ್ಳಲು ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಾರೆ.
ಈವಾರ ತೆರೆಕಂಡಿರುವ ಗಧಾಯುದ್ದ ಕೂಡ ಅಂಥದೇ ಕಥೆ ಹೇಳುವ ಚಿತ್ರ. ಚಿತ್ರದ ನಾಯಕ ಭೀಮ(ಸುಮಿತ್) ಒಬ್ಬ ಮೆಡಿಕಲ್ ಸ್ಟೂಡೆಂಟ್. ಆತ ಇಂಥ ವಾಮಾಚಾರಿಗಳ ಅಟ್ಟಹಾಸವನ್ನು ಮಟ್ಟಹಾಕುವ ಶಕ್ತಿವಂತ, ಡ್ಯಾನಿ ಕುಟ್ಟಪ್ಪ ಒಬ್ಬ ದುಷ್ಟ ವಾಮಾಚಾರಿಯಾಗಿ ಬಣ್ಣ ಹಚ್ಚಿದ್ದಾರೆ. ಈತನ ಮಗಳೇ ಚಿತ್ರದ ನಾಯಕಿ ಪ್ರತ್ಯಕ್ಷ(ಧನ್ಯ ಪಾಟೀಲ್). ಈಕೆಗೆ ತಂದೆ ಮಾಡುತ್ತಿರುವ ಕೆಲಸಗಳು ಇಷ್ಟವಿರಲ್ಲ, ಆದರೆ ಈ ವಾಮಾಚಾರಿಯ ಮಗ ಮಾತ್ರ ತಂದೆಯ ಹಾದಿಯನ್ನೇ ಹಿಡಿದಿರುತ್ತಾನೆ. ಇವರು ತಮ್ಮ ಕೆಲಸಗಳಿಗಾಗಿ ಬೆಟ್ಟ ಗುಡ್ಡದಲ್ಲಿರುವ ಗುಹೆ, ಕಾಡು ಮೇಡುಗಳ ಮಧ್ಯೆ ಸುರಕ್ಷಿತ ಜಾಗವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಹೀಗೇ ಈ ವಾಮಾಚಾರಿ ತನ್ನ ಕಾರ್ಯಸಿದ್ದಿಗಾಗಿ ಕೆಲವರನ್ನು ಸಾಯಿಸಲು ಹೋದಾಗ ಭೀಮನೇ ಅದನ್ನು ತಡೆಯುತ್ತಾನೆ.
ಅದುವರೆಗೆ ತನ್ನನ್ನು ಎದುರಿಸುವವರು ಯಾರೂ ಇಲ್ಲವೆಂದು ಮೆರೆಯುತ್ತಿದ್ದವನಿಗೆ ಅದು ಸಹಿಸದಾಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಹಂತದಲ್ಲಿ ಈತನಿದ್ದ ಜಾಗಕ್ಕೇ ಹುಡುಕಿಕೊಂಡು ಬರುವ ಭೀಮ, ಆ ವಾಮಾಚಾರಿಯನ್ನು ಹೊಡೆದಾಟದ ಮೂಲಕ ಸೋಲಿಸುತ್ತಾನಾ, ಇಲ್ಲವೇ ಎನ್ನುವುದೇ ಚಿತ್ರದ ಕಥೆ. ನಾಯಕ ಸುಮಿತ್, ನಾಯಕಿ ಧನ್ಯ ಪಾಟೀಲ್ ತಮ್ಮ ಮುದ್ದಾದ ಅಭಿನಯದ ಮೂಲಕವೇ ನೋಡುಗರಿಗೆ ಇಷ್ಟವಾಗುತ್ತಾರೆ, ವಾಮಾಚಾರಿಯಾಗಿ ಡ್ಯಾನಿಯಲ್ ಕುಟ್ಟಪ್ಪ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಖಗೋಳ ವಿಜ್ಞಾನಿಯಾಗಿ ರಮೇಶ್ ಭಟ್, ಜೋತಿಷಿಯಾಗಿ ಶಿವರಾಮಣ್ಣ, ಪೊಲೀಸ್ ಪಾತ್ರದಲ್ಲಿ ಸತ್ಯಜಿತ್ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಕ್ಯಾಮೆರಾವರ್ಕ್, ಮ್ಯೂಸಿಕ್ ಚಿತ್ರಕಥೆಗೆ ತಕ್ಕಂತೆ ಮೂಡಿಬಂದಿದೆ, ಅಕ್ಕಿಬೇಳೆ ಡಬ್ಬ ಹುಡುಕುತ್ತೆ ಕೈಯಿಂದ ಹಾಡು ನೆನಪಲ್ಲುಳಿಯುತ್ತದೆ,ಗದಾಯುದ್ಧ ದೈವಶಕ್ತಿಯ ಮುಂದೆ ಸೋತ ದುಷ್ಟಶಕ್ತಿ.