ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಸದಭಿರುಚಿಯ ಚಿತ್ರಗಳ ನಿರ್ದೇಶಕರಾಗಿದ್ದ ದೊರೆ - ಭಗವಾನ್ ಜೋಡಿಯ ಭಗವಾನ್ ಅವರು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬಾಂಡ್ ಶೈಲಿಯ ಚಿತ್ರಗಳು, ಕಾದಂಬರಿ ಆಧರಿಸಿದ ಚಿತ್ರಗಳು ಸೇರಿದಂತೆ ಜೋಡಿಯಾಗಿ ನಿರ್ದೇಶಿಸಿದ 27 ಚಿತ್ರಗಳು, ಎ.ಸಿ.ನರಸಿಂಹ ಮೂರ್ತಿ ಅವರೊಂದಿಗೆ ಸೇರಿ ನಿರ್ದೇಶಿಸಿದ ಎರಡು ಚಿತ್ರಗಳು, ತಾವು ಏಕಾಂಗಿಯಾಗಿ ನಿರ್ದೇಶಿಸಿದ ಎರಡು ಚಿತ್ರಗಳಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತಲಾ ಎರಡು ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಇವಲ್ಲದೆ, ಅವರು ಸಹನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳೂ ಸೇರಿದಂತೆ ಅವರು ಪಾಲ್ಗೊಂಡ ಚಿತ್ರಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು. ಓದಿನ ದಿನಗಳಿಂದಲೇ ಬಣ್ಣದ ಬದುಕಿಗೆ ಆಕರ್ಷಿತರಾಗಿದ್ದ ಭಗವಾನ್ ಅವರು ವೃತ್ತಿ ರಂಗಭೂಮಿಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದರು. ಚಿತ್ರಗಳಲ್ಲಿ ನಟಿಸುವ ಹಂಬಲದಿಂದ ಬಂದು ನಿರ್ದೇಶಕರಾಗಿ ಯಶಸ್ವಿಯಾದ ಭಗವಾನ್ ಅವರು ಕೆಲವು ಚಿತ್ರಗಳ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡದ್ದುಂಟು. ದೊರೆ ಅವರ ನಿಧನದ ನಂತರವೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಭಗವಾನ್ ಅವರು ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕೂಡಾ ಕೆಲಸ ಮಾಡಿದ್ದಾರೆ. ತಮ್ಮ 87ನೇ ವಯಸ್ಸಿನಲ್ಲಿ ಚಿತ್ರ ನಿರ್ದೇಶಿಸಿದ್ದ ಭಗವಾನ್ ಅವರ ಉತ್ಸಾಹ ಅದಮ್ಯ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಭಗವಾನ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಶೋಕವ್ಯಕ್ತಪಡಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬವರ್ಗಕ್ಕೆ ಸಂತಾಪ ಸೂಚಿಸುತ್ತದೆ.