ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಸೈಂಟಿಫಿಕ್ ಮಿಸ್ಟರಿ ಕಥಾಹಂದರ ಹೊಂದಿರುವ ಬೀಗ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಅಗ್ರಜ ಹಾಗೂ ಲೀ ಚಿತ್ರಗಳನ್ನು ನಿರ್ದೇಶಿಸಿದ್ದ ಎಚ್.ಎಂ.ಶ್ರೀನಂದನ್ ಅವರ ಮೂರನೇ ಚಿತ್ರವಿದು. ಇದೇ ಮೊದಲಬಾರಿಗೆ ಶ್ರೀನಂದನ್ ಸೈಂಟಿಫಿಕ್ ಮಿಸ್ಟರಿ ಕಥಾಹಂದರ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ವಿಎಂಆರ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ಮುನಿಹನುಮಪ್ಪ, ಹೆಚ್.ಎಂ. ಶ್ರೀನಂದನ್, ಹಾಗೂ ಕೃಷ್ಣ ಎಲ್ ನಿರ್ಮಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಲಹರಿ ವೇಲು ಮಾತನಾಡುತ್ತ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದೆ. ಇದೇ ಚಿತ್ರವು ತೆಲುಗಿನಲ್ಲಿ ಕರಾಳ ಹೆಸರಲ್ಲಿ ರಿಲೀಸಾಗುತ್ತಿದೆ. ಇವರೆಲ್ಲ ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.
ಚಿತ್ರರಂಗದಲ್ಲಿ ತನ್ನದೇ ಆದ ಮ್ಯಾನರಿಸಂ ಬೆಳೆಸಿಕೊಂಡಿರುವ ನಟ ರವಿಶಂಕರ್ ಅವರು ಬೀಗ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿವಾರ್ಯ ಕಾರಣದಿಂದ ಬರಲಾಗದಿದ್ದಕ್ಕೆ ವೀಡಿಯೋ ಮೂಲಕ ಕ್ಷಮೆಕೇಳಿದ ಅವರು ಚಿತ್ರದ ಕುರಿತಂತೆ ಮಾತನಾಡಿದರು. ಇವರ ಜೊತೆಗೆ ಯುವನಟ ಮೊಗ್ಗಿನ ಮನಸು ಖ್ಯಾತಿಯ ಜೆ.ಡಿ.ಆಕಾಶ್, ಸೈಯದ್ ಇರ್ಫಾನ್ ಜೊತೆಗೆ ನಿರ್ದೇಶಕ ಹೆಚ್.ಎಂ.ಶ್ರೀನಂದನ್ ಸಹ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ, ಉತ್ತರಭಾರತ ಮೂಲದ ಸಹಾರ ಚಿತ್ರದ ನಾಯಕಿಯಾಗಿದ್ದು, ಸುಮಿತಾ ಬಜಾಜ್ ಅಲ್ಲದೆ ಹಿರಿಯನಟ ಸುಚೇಂದ್ರಪ್ರಸಾದ್ ಸಹ ನಟಿಸಿದ್ದಾರೆ.
ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಶ್ರೀನಂದನ್ ಎಲ್ಲಾ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ವಿಎಂಆರ್ ಪ್ರೊಡಕ್ಷನ್‌ನವರೂ ನನಗೆ ಪೂರ್ತಿ ಫ್ರೀಡಮ್ ಕೊಟ್ಟಿದ್ದರು. ವೈಜ್ಞಾನಿಕ ಹಿನ್ನೆಲೆ ಇಟ್ಟುಕೊಂಡು ಮಾಡಿರುವ ಈ ಕಥೆಯಲ್ಲಿ ಬೀಗದ ಜೊತೆ ಅದರ ಕೀ ಕೂಡ ಬರುತ್ತದೆ. ರವಿಶಂಕರ್ ಅವರು ಸಸ್ಪೆಂಡ್ ಆದ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಮನೆಯಲಾಕ್ ಓಪನ್ ಮಾಡಿದ ಮೇಲೆ ಅಲ್ಲಿ ಏನೇನು ನಡೆಯುತ್ತದೆ ಎಂದು ಚಿತ್ರದಲ್ಲಿ ಹೇಳಿದ್ದೇವೆ. ಇನ್ನು ಆತ್ಮ ಎನ್ನುವುದು ಒಂದು ಪಾತ್ರವಾಗಿದೆ. ನಿರ್ಮಾಪಕ ರಮೇಶ್ ಅವರು ಚಿತ್ರದ ಎಲ್ಲಾ ಜವಾಬ್ದಾರಿಯನ್ನು ನನ್ನಮೇಲೆ ಹಾಕಿದ್ದಾರೆ. ಅಲ್ಲದೆ ಚಿತ್ರದಲ್ಲಿ ಮೇಜರ್ ಶೇರ್ ಕೂಡ ಕೊಟ್ಟಿದ್ದಾರೆ. ಹೆಣ್ಣುಮಗುವೊಂದು ರಸ್ತೆಯಲ್ಲಿ ಬಂದಾಗ ಅದು ಮಗು ಎನ್ನುವುದನ್ನೂ ನೋಡದೆ ಹೇಗೆ ನಡೆದುಕೊಳ್ಳುತ್ತಾರೆ, ಆ ಥರದ ಮೈಂಡ್‌ಸೆಟ್ ಇದ್ದವರು ಈ ಚಿತ್ರ ನೋಡಿದಮೇಲೆ ಬದಲಾಗಬೇಕು ಎನ್ನುವುದು ನಮ್ಮ ಆಶಯ. ಚಿತ್ರದಲ್ಲಿ ನಾಲ್ಕು ಸಾಹಸ ದೃಶ್ಯಗಳು ಹಾಗೂ ಕಥೆಗೆ ಪೂರಕವಾಗಿ ಐದು ಹಾಡುಗಳಿವೆ. ಬೆಂಗಳೂರು ಸುತ್ತಮುತ್ತ ಹಾಗೂ ಆರ್.ಎಸ್.ಸ್ಟುಡಿಯೋದಲ್ಲಿ ಸೆಟ್‌ಹಾಕಿ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು, ನಿರ್ಮಾಪಕ ರಮೇಶ್ ಮುನಿಹನುಮಪ್ಪ ಮಾತನಾಡಿ ನಂದನ್ ಬಂದು ಈ ಕಥೆ ಹೇಳಿದಾಗ ವಿಭಿನ್ನವಾಗಿದೆ ಎನಿಸಿತು. ಇದರ ಎಲ್ಲಾ ಕ್ರೆಡಿಟ್ ಅವರಿಗೇ ಸಲ್ಲುತ್ತದೆ ಎಂದು ಹೇಳಿದರು.
ಕುಮಾರ್ ಅರಸೇಗೌಡ, ಮೈಸೂರು ರಮಾನಂದ ಉಳಿದ ಪಾತ್ರಗಳಲ್ಲಿದ್ದು, ಶರಣ್ಯ ಎಂಬ ಮಗು ಚಿತ್ರದ ಪ್ರಮುಖ ಪಾತ್ರದಲ್ಲಿದೆ. ಎಂ.ಬಿ.ಹಳ್ಳಿಕಟ್ಟೆ, ವೀನಸ್ ನಾಗರಾಜ್‌ಮೂರ್ತಿ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ೩ ಹಾಡುಗಳಿಗೆ ಶ್ರೀಗುರು ಅವರ ಸಂಗೀತ ಸಂಯೋಜನೆ ಹಾಗೂ ವೆಂಕಿ ಯುಡಿಯು ಅವರ ಸಂಕಲನವಿದೆ.