`ರಾಮಾ ರಾಮಾ ರೇ`, `ಮ್ಯಾನ್ ಆಫ್ ದಿ ಮ್ಯಾಚ್` ಹಾಗೂ `ಕಳ್ಬೆಟ್ಟದ ದರೋಡೆಕೋರರು` ಚಿತ್ರಗಳ ಅಮೋಘ ಅಭಿನಯದ ಮೂಲಕ ಅಪಾರ ಮೆಚ್ಚುಗೆ ಗಳಿಸಿಕೊಂಡಿರುವ ಕಲಾವಿದ ನಟರಾಜ್. ಸ್ಯಾಂಡಲ್ ವುಡ್ ಭರವಸೆಯ ಕಲಾವಿದರೆಸಿಕೊಂಡಿರುವ ನಟರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ನಟರಾಜ್ ಗಮನ ಸೆಳೆದಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ಗೋಕರ್ಣದ ಅಂಕೋಲಕ್ಕೆ ಪ್ರವಾಸ ಕೈಗೊಂಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಹೋರಾಟಗಾರರಾದ "ಸುಕ್ರಿ ಬೊಮ್ಮಗೌಡ" ಅವರೊಂದಿಗೆ ಕೆಲಕಾಲ ಸಮಯ ಕಳೆದಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವ, ವೃಕ್ಷಮಾತೆ, ಪರಿಸರ ಪ್ರೇಮಿ, ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದಂತಹ "ತುಳಸಿ ಅಜ್ಜಿ" ಅವರನ್ನು ಭೇಟಿ ಮಾಡಿ ಅವರೊಂದಿಗೆ ಗಿಡ ನೆಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಂತರ ಅಲ್ಲಿಯೇ ಇದ್ದ ಹೊನ್ನಳ್ಳಿ ಶಾಲೆಯ ಮಕ್ಕಳ ಜೊತೆಯಲ್ಲಿ ಕಾಲ ಕಳೆದು ಮೂರು ದಿನಗಳ ಕಾಲ ಉತ್ತಮ ಕೆಲಸಗಳನ್ನು ಮಾಡುತ್ತಾ, ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ನಟರಾಜ್ ಎಲ್ಲರಿಗೂ ಮಾದರಿಯಾಗಿದ್ದಾರೆ.