`ವಚನ ವೈಭವಕ್ಕೆ ೧೦೦ರ ಸಂಭ್ರಮ`
Posted date: 19/February/2009

ಕಸ್ತೂರಿ ವಚನ ವೈಭವ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ೧೦೦ ಸಂಚಿಕೆಗಳನ್ನು ಪೂರೈಸಿ ೨೦೦ರರತ್ತ ದಾಪುಗಾಲಿಡುತ್ತಿದೆ.

ಕನ್ನಡದ ಅನರ್ಘ್ಯ ಗಣಿ ವಚನ ಸಾಹಿತ್ಯವನ್ನಧರಿಸಿದ ಈ ಕಾರ್ಯಕ್ರಮ ಕನ್ನಡದ ಹೆಮ್ಮೆಯ ಪ್ರತೀಕವಾದ ಕಸ್ತೂರಿವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿದಿನ ಬೆಳಗ್ಗೆ ೭ ರಿಂದ ೭:೩೦ರವರೆಗೂ ಪ್ರಸಾರವಾಗುತ್ತಲಿದೆ. ಈ ಕಾರ್ಯಕ್ರಮದ ವೈಶಿಷ್ಟ್ಯವೆಂದರೆ, ವಚನ ನಿರ್ವಚನ ಮತ್ತುನ್ ಗಾಯನ. ಇನ್ನೊಂದು ವಿಶೇಷವೆಂದರೆ, ಬಳಕೆಯಾದ ಯಾವುದೇ ವಚನ ಮುಂದಿನ ಸಂಚಿಕೆಗಳಲ್ಲಿ ಪುನರ್ಬಳಕೆಯಾಗದೇ ಹೊಸ ವಚನವನ್ನು ಆಯ್ದುಕೊಳ್ಳುವುದು. ಮಠ ಪರಂಪರೆಯ ಜಗದ್ಗುರುಗಳು ಹಾಗೂ ಸ್ವಾಮೀಜಿಗಳು ವಚನಗಳನ್ನು ಉದಾಹರಿಸುವ ಮೂಲಕ ಪ್ರಸ್ತುತ ಸಮಾಜಕ್ಕನುಗುಣವಾಗಿ ವ್ಯಾಖ್ಯಾನಿಸಿದರೆ, ಆ ವಚನಗಳನ್ನೆ ಸುಶ್ರಾವ್ಯವಾಗಿ ಹಾಡುವ ಮೂಲಕ ಗಾಯಕರು ನಾದಸುಧೆ ಹರಿಸುತ್ತಿದ್ದಾರೆ.

ಒಂದು ಧರ್ಮ-ಜಾತಿಗೆ ಸೀಮಿತವಾಗದಂತೆ ಬದುಕಿ ಬಾಳಿದ ಶರನರು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಗಲನ್ನು ತಮ್ಮ ರಚನೆಗಳಲ್ಲಿ ಕಂಡರಸಿದ್ದಾರೆ. ಆಧುನಿಕ ಮಾನವನ ಗೊಂದಲದ ಹಾಗೂ ಧಾವಂತದ ಬದುಕಿಗೆ ವಚನಗಳು ಹೇಗೆ ನೆಮ್ಮದಿಯ ತಾಣಗಳಾಗಿವೆ ಎಂಬುದನ್ನೂ, ವ್ಯಕ್ತಿತ್ವ ವಿಕಸನ, ಜ್ಞಾನಾಭಿವೃದ್ದಿಯ ಜೊತೆಜೊತೆಗೇ ಮಾನವೀಯ ಮೌಲ್ಯಗಳನ್ನು ಹೇಗೆ ಸಾಕಾರಗೊಳಿಸಬಹುದೆಂಬುದನ್ನೂ ತಿಳಿಸುತ್ತ ಈ ಕಾರ್ಯಕ್ರಮ ಸಮಾಜಮುಖಿ ಚಿಂತನೆ ನಡೆಸುತ್ತ ಮುನ್ನಡೆಯುತ್ತಿದೆ.

ನಡೆ-ನುಡಿ-ಸಿದ್ದಾಂತ, ಕಾಯ- ಕಾಯಕನಿಷ್ಟೆ, ತನು-ಮನ-ಭಾವಶುದ್ದಿ, ಸಾಮಾಜಿಕ ಹಾಗೂ ಪ್ರಸಾದ ಪ್ರಜ್ಞೆ, ಶುದ್ಧಾಂತಕ್ಕರಣ, ಸರ್ವರಲ್ಲೂ ಪ್ರೇಮ ಇಂಥ ಗುಣಾತ್ಮಕ ಅಂಶಗಳನ್ನು ಬಿತ್ತರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಶಿವಶರಣರು ಸಾರಿದ ವಿಶ್ವ ಸಂದೇಶಗಳು ಇಂದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿವೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂದು ಇವು ಅನಿವಾರ್ಯವಾಗಿವೆ. ಇಂದಿನ ಅಸಂಘಟಿತ ಹಾಗೂ ವಿಘಟಿತ ಜೀವನ ಶೈಲಿಗೆ ಒಟ್ಟಂದದ ಬೆಸುಗೆ ಹಾಕಲು ಅತ್ಯಗತ್ಯವಾಗಿವೆ.

ಕರ್ನಾಟಕವಷ್ಟೇ ಅಲ್ಲ ದೂರದ ಅಬುದಾಬಿ,ಸೌದಿ ಅರೇಬಿಯಾ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರಪ್ರದೇಶಗಳಿಂದ ಈ ಕಾರ್ಯಕ್ರಮವನ್ನು ಮೆಚ್ಚಿ ನೂರಾರು ಮಂದಿ ದೂರವಾಣಿ ಹಾಗೂ ಪತ್ರ ಮುಖೇನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಈ ಕಾರ್ಯಕ್ರಮದ ಜನಪ್ರಿಯತೆಯನ್ನು ತೋರಿಸುತ್ತದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed