``ಪಿನಾಕ``ಧರನಾದ ಗೋಲ್ಡನ್ ಸ್ಟಾರ್ ಗಣೇಶ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ನಿರ್ಮಾಣದ ಹಾಗೂ ಧನಂಜಯ ನಿರ್ದೇಶನದ ಈ ಸಿನಿಮಾ
Posted date: 03 Fri, Jan 2025 09:56:06 AM
ಕಳೆದವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದಾದ " ಕೃಷ್ಣಂ ಪ್ರಣಯ ಸಖಿ" ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ "ಪಿನಾಕ" ಎಂದು ಹೆಸರಿಡಲಾಗಿದೆ. "ಪಿನಾಕ" ಎಂದರೆ ತ್ರಿಶೂಲ ಎಂದು ಅರ್ಥ. ಈಗಾಗಲೇ ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ 48 ಚಿತ್ರಗಳನ್ನು ನಿರ್ಮಿಸಿರುವ ಟಿ.ಜಿ.ವಿಶ್ವಪ್ರಸಾದ್ ಸಾರಥ್ಯದ ಪೀಪಲ್ ಮೀಡಿಯಾ ಫ್ಯಾಕ್ಟರಿ  ನಿರ್ಮಾಣ‌ ಮಾಡುತ್ತಿರುವ 49 ನೇ ಚಿತ್ರವಿದು. ನೃತ್ಯ ನಿರ್ದೇಶಕನಾಗಿ ಜನಪ್ರಿಯರಾಗಿರುವ ಧನಂಜಯ ಮೊದಲ ಬಾರಿಗೆ "ಪಿನಾಕ" ಚಿತ್ರವನ್ನು ನಿರ್ದೇಶನ‌ ಮಾಡುತ್ತಿದ್ದಾರೆ. 
 
ಕ್ಷುದ್ರ ಮತ್ತು ರುದ್ರನ ಅವತಾರದಲ್ಲಿ ಗಣೇಶ್ ಇವರೆಗೂ ಯಾವ ಚಿತ್ರದಲ್ಲೂ ಕಾಣಿಸದ ಪಾತ್ರದಲ್ಲಿ  ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೈಟಲ್ ಟೀಸರ್ ನಲ್ಲಿ ಮೈನವಿರೇಳಿಸುವ ದೃಶ್ಯಗಳಿದ್ದು,  ಹಿನ್ನೆಲೆ ಸಂಗೀತ‌ ಕೂಡ ಮೋಡಿ ಮಾಡಿದೆ. ಗಣೇಶ್ ವೃತ್ತಿ ಜೀವನಕ್ಕೆ ಹೊಸ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಇದೆ. ಟೈಟಲ್ ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 
 
ಸಾಮಾನ್ಯವಾಗಿ ಎಲ್ಲರೂ ತಮ್ಮ ಚಿತ್ರದ ಬಗ್ಗೆ ಹೇಳುವಾಗ ಡಿಫರೆಂಟಾಗಿ ಮಾಡಿದ್ದೇವೆ ಅಂತ ಹೇಳುತ್ತಾರೆ. ಆದರೆ ನಾವು ನಿಜವಾಗಲೂ ಡಿಫರೆಂಟ್ ಆಗಿ ಮಾಡಿದ್ದೇವೆ‌ ಎಂದು ಮಾತನಾಡಿದ ನಾಯಕ ಗಣೇಶ್, ಇಂತಹ ಉತ್ತಮ ಸಿನಿಮಾ‌ ನಿರ್ಮಾಣ ಮಾಡುತ್ತಿರುವ  ನಿರ್ಮಾಪಕರಾದ ವಿಶ್ವಪ್ರಸಾದ್ ಹಾಗೂ ವಂದನ ಅವರಿಗೆ ಧನ್ಯವಾದ. "ಹುಡುಗಾಟ" ಚಿತ್ರದಿಂದ ನಾನು ಧನಂಜಯ ಅವರನ್ನು ಬಲ್ಲೆ. ಇಂದು ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಧನಂಜಯ, ನಿರ್ಮಾಪಕರ ಸಹೋದರಿ ವಿಜಯ ಹಾಗೂ ಅವರ ತಂಡದವರು ಕಳೆದ ಒಂದು ವರ್ಷದಿಂದ ಅಡ್ವೆಂಚರ್‌, ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಒಂದೊಳ್ಳೆ ಕಥೆಯನ್ನು ಮಾಡಿದ್ದಾರೆ. ಈಗ ಕಥೆಯಷ್ಟೇ ಚಂದದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ. ನಾನು ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶ ನೀಡಿದ್ದು.  "ಮುಂಗಾರು ಮಳೆ" ಚಿತ್ರದ ನಂತರ ನನ್ನನ್ನು ರೊಮ್ಯಾಂಟಿಕ್ ಹೀರೋ ಆಗಿಯೇ ನೋಡಲು ಅಭಿಮಾನಿಗಳು ಬಯಸಿದರು.ಈ ಚಿತ್ರದಿಂದ ನನ್ನ ಹಿಂದಿನ ಜಾನರನ್ನು ಬದಲಿಸಿಕೊಂಡಿದ್ದೇನೆ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ "ಪಿನಾಕ" ಮೂಡಿ ಬರಲಿದೆ ಎಂದರು.
 
ಇದು ನಮ್ಮ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಮೂಡಿಬರುತ್ತಿರುವ 49 ನೇ ಸಿನಿಮಾ. ಈ ಹಿಂದೆ ಕನ್ನಡದಲ್ಲಿ "ಅಧ್ಯಕ್ಷ ಇನ್ ಅಮೇರಿಕಾ" ಹಾಗೂ "ಆದ್ಯ" ಚಿತ್ರಗಳನ್ನು ನಿರ್ಮಾಣ ಮಾಡಿದ್ದೆವು.  ಧನಂಜಯ ಹಾಗೂ ತಂಡದವರು ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಗಣೇಶ್ ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಖುಷಿಯಾಗಿದೆ. ಈ ವರ್ಷ ಶ್ರೀಮುರಳಿ, ಶಿವರಾಜಕುಮಾರ್, ಧ್ರುವಸರ್ಜಾ ಅವರ ಸಿನಿಮಾಗಳನ್ನು ನಮ್ಮ ಪೀಪಲ್ ಮೀಡಿಯಾ ಫ್ಯಾಕ್ಟರಿ ಮೂಲಕ ನಿರ್ಮಾಣ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಟಿ.ಜಿ.ವಿಶ್ವ ತಿಳಿಸಿದರು.
 
ನಿರ್ದೇಶಕ ಬಿ ಧನಂಜಯ್ ಮಾತನಾಡಿ, ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ನಾನು, ಅಸಿಸ್ಟೆಂಟ್ ಡ್ಯಾನ್ಸ್ ಮಾಸ್ಟರ್ ಆಗಿ ಹತ್ತುಸಾವಿರಕ್ಕೂ ಅಧಿಕ ಹಾಡುಗಳಿಗೆ ಹಾಗೂ ಸ್ವತಂತ್ರ ನೃತ್ಯ ನಿರ್ದೇಶಕನಾಗಿ 500 ಕ್ಕೂ ಅಧಿಕ ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ.    ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದೆ. ಈ ಸಂಸ್ಥೆಯ 49ನೇ ಪ್ರಾಜೆಕ್ಟ್ ಇದಾಗಿದೆ. ಪಿರಿಯಾಡಿಕ್ ಡ್ರಾಮಾ ಹಿನ್ನೆಲೆಯಲ್ಲಿ ಮಾಟ ಮಂತ್ರದ ಎಳೆಯ ಮೂಲಕ ಪ್ರೇಕ್ಷಕನ ಮುಂದೆ ಹೊಸ ಥರದ ಕಥೆಯನ್ನು ತಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.  ಟೈಟಲ್ ಟೀಸರ್ ಮೇಕಿಂಗ್ ಮೂಲಕವೇ ಸದ್ದು ಮಾಡುತ್ತಿದೆ. "ಪಿನಾಕ" ಸಿನಿಮಾ, ಅದ್ಭುತ ವಿಎಫ್ ಎಕ್ಸ್ ಮತ್ತು ದೃಶ್ಯಗಳ ಮೂಲಕ ಕನ್ನಡ ಚಿತ್ರರಂಗಕ್ಕೂ ಹೊಸತನವನ್ನು ಪರಿಚಯಿಸುತ್ತದೆ ಎಂದರು. 
 
ನಿರ್ಮಾಪಕಿ ವಂದನ, ನಿರ್ದೇಶಕರೊಂದಿಗೆ ಕಥೆ ಬರೆದಿರುವ ವಿಜಯ ಅವರು ಸಹ "ಪಿನಾಕ" ಚಿತ್ರದ ಬಗ್ಗೆ ಮಾತನಾಡಿದರು. ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಮುಂತಾದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು. ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭವಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed