"ಪ್ರಾಣ ಅನಿಮಲ್ ಫೌಂಡೇಶನ್" ಮೂಲಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆಂಬುಲೆನ್ಸ್ ಸೇವೆ ನೀಡಿದ್ದಾರೆ ಹಾಗೂ ಈ ಕುರಿತು ಮಾಹಿತಿ ನೀಡಲು ಸಹಾಯವಾಣಿ ಕೂಡ ತೆರೆದಿದ್ದಾರೆ.
ಇತ್ತೀಚೆಗೆ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ "ಪ್ರಾಣ ಅನಿಮಲ್ ಫೌಂಡೇಶನ್" ಸಂಸ್ಥೆಯಿಂದ ಪ್ರಾಣಿಗಳ ಆ್ಯಂಬುಲೆನ್ಸ್ 24×7 ಮತ್ತು ಪ್ರಾಣಿಗಳ ರಕ್ಷಣೆಯ ಸಹಾಯವಾಣಿ ಸೇವೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಚಾಲನೆ ನೀಡಿದರು. ಪ್ರಕಾಶ್ ಬೆಳವಾಡಿ, ಸುಧಾ ನಾರಾಯಣ್, ಅನಿರುದ್ಧ, ಸುಧಾ ಬೆಳವಾಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾಣಿಗಳ ಮೇಲೆ ನಾವು ಹೆಚ್ಚು ಪ್ರೀತಿಯಿಂದ ಮಾತನಾಡಿದಾಗ ಕೆಲವರು ಹುಚ್ಚರು ಎಂದುಕೊಳ್ಳಬಹುದು. ಆದರೆ ನನಗೆ ಮೊದಲಿನಿಂದಲೂ ಪ್ರಾಣಿ ಪ್ರೀತಿ ಹೆಚ್ಚು. ಈಗಿನ ಪೀಳಿಗೆಯ ಯುವಕ- ಯುವತಿಯರಿಗೂ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ. ಇದು ಸಂತೋಷ ಪಡುವ ವಿಚಾರ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ನಮ್ಮ ಅಜ್ಜಿ ಭಾರ್ಗವಿ ನಾರಾಯಣ್ ಅವರು ನಿಧನರಾಗಿದ್ದು ಫೆ.14ರಂದು. ಅಜ್ಜಿಯ ನೆನಪಿನಲ್ಲಿ ಈ ಕಾರ್ಯಕ್ರಮ ನಡೆಸಲು ನನಗೆ ಅವರೆ ಅವಕಾಶ ನೀಡಿದ್ದಾರೆ. ಪ್ರಾಣಿಗಳು ತುಂಬಾ ಪ್ರೀತಿ ಕೊಡುತ್ತದೆ. ಅವುಗಳ ನೋವನ್ನು ಕಡಿಮೆ ಮಾಡುವುದೆ "ಪ್ರಾಣ ಅನಿಮಲ್ ಫೌಂಡೇಶನ್" ನ ಉದ್ದೇಶ. ಸದ್ಯಕ್ಕೆ ಬೆಂಗಳೂರಿನಲ್ಲಿ "ಪ್ರಾಣ" ಅಂಬುಲೆನ್ಸ್ 24×7 ಕೆಲಸ ಮಾಡುತ್ತದೆ. ಅದರೊಂದಿಗೆ ಪ್ರಾಣಿಗಳ ನೆರವಿಗೆ ಸಹಾಯವಾಣಿ ಸಹ ಸ್ಥಾಪಿಸಿದ್ದೇವೆ. ಮುಂದೆ ಇದನ್ನು ವಿಸ್ತರಿಸುವ ಉದ್ದೇಶವೂ ಇದೆ. ಪ್ರಾಣ ಫೌಂಡೇಶನ್ ಆರಂಭಿಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ಪ್ರಾಣ ಅನಿಮಲ್ ಫೌಂಡೇಶನ್ ಸ್ಥಾಪಕಿ ಸಂಯುಕ್ತ ಹೊರನಾಡು.