"ವೈದ್ಯೋ ನಾರಾಯಣೋ ಹರಿ" ಅಂದರೆ ಡಾಕ್ಟರುಗಳನ್ನು ಜೀವ ಉಳಿಸುವ ದೇವರೆನ್ನುತ್ತಾರೆ. ಅಂಥಾ ವೈದ್ಯರೇ ಹಣದಾಸೆಗೆ ಬಿದ್ದು ಅನ್ಯಾಯ, ಅತ್ಯಾಚಾರ ಮಾಡಿದಾಗ ಏನಾಗಬಹುದು ಎಂಬ ಕಾನ್ಸೆಪ್ಟ್ ಮೇಲೆ `4 n 6`ಚಿತ್ರ ಸಾಗುತ್ತದೆ.
ಬಡ ಕುಟುಂಬದಿಂದ ಬಂದ ಫೋರೆನ್ಸಿಕ್ ಡಿಟೆಕ್ಟಿವ್ ನೈಶಾ (ರಚನಾ ಇಂದರ್) ಇಲ್ಲಿ ಕಥಾನಾಯಕಿ. ಒಂದರ ಹಿಂದೊಂದರಂತೆ ನಡೆಯುತ್ತಿರುವ ಡಾಕ್ಟರುಗಳ ಹತ್ಯೆಯ ರಹಸ್ಯ, ಆ ಎಲ್ಲಾ ಸಾವುಗಳ ಹಿಂದಿರೋ ಕಾಣದ ಕೈ ವಾಡ ಇದನ್ನೆಲ್ಲ ಇಟ್ಟುಕೊಂಡು ನಿರ್ದೇಶಕ ದರ್ಶನ್ ಶ್ರೀನಿವಾಸ್ ರಿವೆಂಜ್ ಕಥೆಯನ್ನು ತೆರೆಯಮೇಲೆ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ, ಇಂಥದ್ದೊದು ಮರ್ಡರ್ ಮಿಸ್ಟ್ರಿಯಲ್ಲಿ ಕೊನೆವರೆಗೂ ಕೊಲೆಗಾರ ಯಾರೆಂದು ಊಹಿಸಲಾಗದಂತೆ ನಿರೂಪಿಸಿರುವ ಶೈಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ಪ್ರತಿ ಸೀನ್ ನಲ್ಲೂ ಕ್ಯೂರಿಯಾಸಿಟಿ ಹೆಚ್ಚಿಸುತ್ತ ಸಾಗಿರುವುದು ಚಿತ್ರದ ಮೇಲೆ ನಿರ್ದೇಶಕರಿಗಿರುವ ಹಿಡಿತವನ್ನು ನಿರೂಪಿಸುತ್ತದೆ, ಚಿತ್ರದ ಮೊದಲಾರ್ಧ ಸ್ವಲ್ಪ ನಿಧಾನ ಎನಿಸಿದರೂ, ಸೆಕೆಂಡ್ ಹಾಫ್ ನಲ್ಲಿ ವೇಗ ಪಡೆದುಕೊಳ್ಳುತ್ತದೆ,
ಡಾಕ್ಟರುಗಳ ಕೊಲೆಯ ಕೇಸ್ ಕೈಗೆತ್ತಿಕೊಂಡ ಪೊಲೀಸ್ ಅಧಿಕಾರಿ ಶಿಕಾರಿದೇವಿಗೆ ಸಾತ್ ನೀಡುವ ಫೋರೆನ್ಸಿಕ್ ಡಿಟೆಕ್ಟಿವ್ ನೈಶಾ, ಇದರ ಜೊತೆಗೆ ಬಡತನದ ಬೇಗೆಯ ನಡುವೆ ಬದುಕು ಕಟ್ಟಿಕೊಳ್ಳಲು ಹೋರಾಡುವ ಕುಟುಂಬದ ಕಥೆ ವ್ಯಥೆ. ಕೆಲವು ದಂದೆಕೋರ ಡಾಕ್ಟರುಗಳ ಕರಾಳ ಮುಖಗಳ ಅನಾವರಣ, 4 ಎನ್ 6 ಚಿತ್ರದ ಹೈಲೈಟ್.
ಹಿಂದೆ ನಡೆದಿದ್ದನ್ನು ತಕ್ಷಣಕ್ಕೆ ಊಹಿಸಬಲ್ಲ ಚಾಣಾಕ್ಷ ಹುಡುಗಿ ನೈಶಾ(ರಚನಾ ಇಂದರ್) ತಾಯಿಯ ಆಸೆಯಂತೆ ಫೋರೆನ್ಸಿಕ್ ಡಿಟಿಕ್ಟಿವ್ ಆಗಿ ಪೋಲಿಸ್ ಇಲಾಖೆಯ ಜೊತೆಗೆ ಸಾತ್ ನೀಡುತ್ತಾ ಕಾರ್ಯ ನಿರ್ವಹಿಸುತ್ತಾಳೆ. ಡಾಕ್ಟರ್ ಒಬ್ಬರ ಅಸ್ವಾಭಾವಿಕ ಸಾವನ್ನು ಸೂಸೈಡ್ ಅಂತ ಪೊಲೀಸರು ವರದಿ ಸಲ್ಲಿಸಲು ಮುಂದಾದರೆ, ನೈಶಾ ಮಾತ್ರ ಅದು ಸೂಸೈಡ್ ಎಂದು ಸಾಕ್ಷಾಧಾರಗಳ ಮೂಲಕ ನಿರೂಪಿಸುತ್ತಾಳೆ. ಮತ್ತೊಬ್ಬ ವೈದ್ಯರ ಡೆತ್ ಆದಾಗಲೂ ಪೊಲೀಸರ ತನಿಖೆಯಲ್ಲಿ ಅದು ಆತ್ಮಹತ್ಯೆ ಎಂದಾದರೆ, ನೈಶಾ ಅದನ್ನು ಕೊಲೆ ಎಂದು ನಿರೂಪಿಸುತ್ತಾಳೆ. ಆರಂಭದಲ್ಲಿ ನೈಶಾಳ ನಿಲುವನ್ನು ಒಪ್ಪದ ಶಿಕಾರಿದೇವಿ (ಭವಾನಿ ಪ್ರಕಾಶ್) ನಂತರ ಮೆಚ್ಚಿಕೊಳ್ಖುತ್ತಾಳೆ.
ಸಾಲು ಸಾಲು ಕೊಲೆಗಳು ಗೊಂದಲ ಮೂಡಿಸುತ್ತಾ ಸಾಗಿದರೂ, ಎಲ್ಲೋ ಒಂದುಕಡೆ ಒಂದು ಸಾಮ್ಯತೆ ಇರುವುದು ಗಮನಕ್ಕೆ ಬರುತ್ತದೆ. ಇದರ ಹಿಂದೆ ಒಂದು ಫ್ಲಾಶ್‌ಬ್ಯಾಕ್ ಕತೆ ತೆರೆಯುತ್ತದೆ. ಮಗನ ಕಾಯಿಲೆಗೆ ಚಿಕಿತ್ಸೆಗೆ ಕೊಡಿಸಲು ಪರದಾಡುವ ತಾಯಿ, ಆಕೆಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುವ ಡಾಕ್ಟರ್‌ಗಳು, ಶೀಲವನ್ನೇ ಪಣಕ್ಕಿಟ್ಟರೂ ಮಗನನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿ, ಹೀಗೆ ಸಾಗುವ ಕಥೆಯಲ್ಲಿ, ಇಂಥ ಕಾಮುಕ ಡಾಕ್ಟರ್‌ಗಳು ದಾರುಣವಾಗಿ ಹತ್ಯೆಗೀಡಾಗುವುದು, ಈ ಎಲ್ಲ ಕೊಲೆಗಳ ರೂವಾರಿ ಯಾರು... ಏತಕ್ಕಾಗಿ ಮರ್ಡರ್ ಮಾಡಿದ ಈ ಎಲ್ಲ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ಉತ್ತರಿಸುತ್ತದೆ. ಮೊದಲಬಾರಿಗೆ ಆದರೂ ಪೊಲೀಸ್ ಪಾತ್ರವನ್ನು ರಚನಾ ಇಂದರ್ ಸಮರ್ಥವಾಗೇ ನಿಭಾಯಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಭವಾನಿಪ್ರಕಾಶ್, ತಾಯಿ ಪಾತ್ರದಲ್ಲಿ ಆದ್ಯಾಶೇಖರ್, ನಾಯಕಿ ಸ್ನೇಹಿತನಾಗಿ ನವೀನ್ ಕುಮಾರ್ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸತ್ಯಕಹಿ ಅವರ ಸಂಭಾಷಣೆ, ಸಾಯಿಸೋಮೇಶ್ ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್. ಈ ಚಿತ್ರವನ್ನು ಪರ್ಪಲ್ ಪ್ಯಾಚ್ ಪಿಚ್ಚರ್ಸ್ ಅಡಿ ಸಾಯಿ ಪ್ರೀತಿ ಎನ್. ಅವರು ನಿರ್ಮಿಸಿದ್ದಾರೆ. ಕರಣ್ ಸಿಂಗ್ ಬಿ. ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.