ಕಾಂಗರೂ ಕುರುಡು ಸಮಾಜಕ್ಕೆ ಹಿಡಿದ ಕನ್ನಡಿ ...ರೇಟಿಂಗ್: 3.5/5 ****
Posted date: 04 Sat, May 2024 01:36:19 PM
ಚಿಕ್ಕಮಗಳೂರಿನ ಗೆಸ್ಟ್ ಹೌಸ್ ವೊಂದರಲ್ಲಿ  ಉಳಿದುಕೊಳ್ಳುವ ದಂಪತಿಗಳು  ಅಲ್ಲಿ ನಡೆಯುವ ಘಟನೆಗಳಿಂದ  ಭಯಭೀತರಾಗಿ  ವಾಪಸಾಗುತ್ತಾರೆ. ಅದಾದ ಮರುದಿನವೇ ಆ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ಬರಲು ಕಾರಣವೇನು, ಆ ಮನೆಯಲ್ಲಿರುವ   ರಹಸ್ಯವೇನು ಇಂಥ ಒಂದಷ್ಟು ಕುತೂಹಲಗಳಿಗೆ  ಉತ್ತರ  ನೀಡುವುದೇ  ಈವಾರ ತೆರೆಕಂಡಿರುವ ಕಾಂಗರೂ ಚಿತ್ರದ
ಕಾನ್ಸೆಪ್ಟ್. ಮದುವೆಯಾದ ಮಹಿಳೆಯರು ಎದುರಿಸುತ್ತಿರುವ ಒಂದು ಸಮಸ್ಯೆಯ  ಸುತ್ತ ನಡೆಯುವ ಕಥೆಯನ್ನು ಥ್ರಿಲ್ಲರ್ ಎಲಿಮೆಂಟ್ ಜೊತೆಗೆ ನಿರ್ದೇಶಕ ಕಿಶೋರ್ ಮೇಗಳ ಮನೆ ಅವರು ನಿರೂಪಿಸಿದ್ದಾರೆ,  ಹೆಣ್ಣು ಭ್ರೂಣಹತ್ಯೆ ಕಾನ್ಸೆಪ್ಟ್  ಈಗಾಗಲೇ ಸಾಕಷ್ಟು  ಚಲನಚಿತ್ರಗಳಲ್ಲಿ  ಬಂದುಹೋಗಿದೆಯಾದರೂ,  ಅದನ್ನಿಲ್ಲಿ ಬೇರೆಯದೇ ಆಯಾಮದಲ್ಲಿ ಹೇಳಲು ಪ್ರಯತ್ನಿಸಿರುವ  ನಿರ್ದೇಶಕರ ಶೈಲಿಯನ್ನು  ಮೆಚ್ಚಲೇಬೇಕು.  ಚಿತ್ರದ ಕಾನ್ಸೆಪ್ಟ್ ಏನೆಂದು ಕೊನೆಯ 20 ನಿಮಿಷಗಳವರೆಗೆ ಯಾರೊಬ್ಬರೂ ಸಹ  ಊಹಿಸದಂತೆ ಚಿತ್ರಕಥೆಯನ್ನು ತೆಗೆದುಕೊಂಡು  ಹೋಗಿದ್ದಾರೆ.    

ಇಡೀ ಚಿತ್ರದ ಕಥೆ ನಡೆಯುವುದು ಚಿಕ್ಕಮಗಳೂರಿನ ಆಂಟನಿ ಕಾಟೇಜ್ ಎಂಬ ಗೆಸ್ಟ್ ಹೌಸ್ ಹಾಗೂ ಅಲ್ಲಿನ ಪೊಲೀಸ್ ಸ್ಟೇಷನ್‌ನಲ್ಲಿ. ಆ ಊರಿನ ಠಾಣೆಗೆ ವರ್ಗವಾಗಿ ಬರುವ ಆದಿತ್ಯ(ಪೃಥ್ವಿ) ಅಧಿಕಾರ ವಹಿಸಿಕೊಂಡ ದಿನದಿಂದಲೇ  ಹಲವಾರು ಚಾಲೆಂಜ್‌ಗಳನ್ನು ಎದುರಿಸಬೇಕಾಗುತ್ತದೆ. 

ಗರ್ಭಿಣಿ ಪತ್ನಿ(ರಂಜನಿ ರಾಘವನ್)ಯನ್ನು ಬಿಟ್ಟು ಬಂದ ಪೃಥ್ವಿಗೆ  ಎದುರಾಗುವುದು ಆ ಊರಲ್ಲಿದ್ದು ಹೋದ  ದಂಪತಿಗಳಲ್ಲಿ ಪತಿಯ ಆತ್ಮಹತ್ಯೆ, ಕಣ್ಮರೆ ಪ್ರಕರಣಗಳು, ಆ ಊರಲ್ಲಿರುವ ಆಂಟನಿ ಕಾಟೇಜ್‌ನಲ್ಲಿ  ದೆವ್ವ ಇದೆ ಎಂದು ಅಲ್ಲಿಗೆ ಬಂದವರೆಲ್ಲ ಹೆದರಿ ಓಡಿಹೋಗುವುದು, ಅದಕ್ಕೂ ಮೊದಲು ಪೃಥ್ವಿಯ ಅಣ್ಣ ವಿಜಯಕುಮಾರ್  (ನಾಗೇಂದ್ರ ಅರಸ್) ಆ ಗೆಸ್ಟ್ ಹೌಸ್‌ಗೆ ಬಂದು  ಆತ್ಮಹತ್ಯೆ ಮಾಡಿಕೊಂಡಿದ್ದು, ಆತನೇ ದೆವ್ವವಾಗಿ ಅಲ್ಲಿಗೆ ಬರುವವರನ್ನೆಲ್ಲ  ಹೆದರಿಸಿ  ರಾತ್ರೋ ರಾತ್ರಿ ಓಡಿಹೋಗುವಂತೆ ಮಾಡುವುದು ನಡೆದಿರುತ್ತದೆ, ಅಲ್ಲಿಂದ ಹೋದ ವ್ಯಕ್ತಿಗಳೆಲ್ಲ ಹೆದರಿಕೆಯಿಂದ  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವರು ಕಣ್ಮರೆಯಾಗಿರುತ್ತಾರೆ. ಈ ಎಲ್ಲ ಘಟನೆಗಳ ಹಿಂದೆ ಏನು ರಹಸ್ಯ ಅಡಗಿದೆ,  ಅಥವಾ ತನ್ನಣ್ಣನ  ಆತ್ಮವೇ ಅಲ್ಲಿಗೆ ಬಂದವರನ್ನೆಲ್ಲ ಹೆದರಿಸಿ ಓಡಿಸುತ್ತಿದೆಯಾ ? ಎಂಬ ಕನ್ ಫ್ಯೂಷನ್ ನಲ್ಲಿದ್ದ  ಪೃಥ್ವಿಗೆ ಅಚ್ಚರಿ ಎನಿಸುವಂಥ  ಸಂಗತಿಯೊಂದು ತಿಳಿದು ಬರುತ್ತದೆ, ಅದನ್ನು ಕಂಡ ಪೃಥ್ವಿ ನಿಜಕ್ಕೂ ಅಚ್ಚರಿಗೊಳ್ಳುತ್ತಾನೆ, ನಂತರ ಅದರ ಹಿಂದಿರುವ ಆಶಯ, ಕಳಕಳಿ, ಒಬ್ಬ ತಾಯಿಯ ವೇದನೆ  ಅರ್ಥವಾಗುತ್ತದೆ. ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು  ಆಗಾಗ ಬರಬೇಕಿದೆ. ಇಂಥ ಚಿತ್ರಗಳನ್ನು  ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವುದೂ ನಮ್ಮ ಕರ್ತವ್ಯವಾಗಿದೆ. 

ಪೊಲೀಸ್ ಅಧಿಕಾರಿಯಾಗಿ ಆದಿತ್ಯ ಸೀರಿಯಸ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ, ಅಲ್ಲದೆ  ಅವರ ಪತ್ನಿ ಹಾಗೂ ಒಬ್ಬ ಸೈಕಾಲಜಿಸ್ಟ್  ಪಾತ್ರದಲ್ಲಿ ರಂಜನಿ ರಾಘವನ್  ಅವರದು ಗಮನ ಸೆಳೆಯುವ ಅಭಿನಯ.

ಉಳಿದಂತೆ  ಸೈಕಾಲಜಿ ಪ್ರೊಸರ್ ಆಗಿ  ಶಿವಮಣಿ, ಗೆಸ್ಟ್ ಹೌಸ್ ಮ್ಯಾನೇಜರ್ ಆಗಿ  ಕರಿಸುಬ್ಬು,  ನಾಯಕನ ಅಣ್ಣನಾಗಿ  ನಾಗೇಂದ್ರ ಅರಸ್  ಹೀಗೆ  ಎಲ್ಲ  ಕಲಾವಿದರೂ  ತಂತಮ್ಮ  ಪಾತ್ರಗಳಿಗೆ  ನ್ಯಾಯ ಒದಗಿಸಿದ್ದಾರೆ. ಕೊನೆಯಲ್ಲಿ ಬರುವ  ಮದರ್ ಸೆಂಟಿಮೆಂಟ್ ಸಾಂಗ್ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ,  

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ.,  ಕುಣಿಗಲ್ ನರಸಿಂಹಮೂರ್ತಿ ಚಕ್ರಭಾವಿ, ರಮೇಶ್‌ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ಸೇರಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ಸಾಧು ಕೋಕಿಲ ಅವರ ಸಂಗೀತ ಚಿತ್ರದ ಹೈಲೈಟ್‌ಗಳಲ್ಲೊಂದು.   ಉದಯ್ ಲೀಲ ಅವರ ಛಾಯಾಗ್ರಹಣವೂ ಉತ್ತಮವಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed