ಚಿತ್ರ : ಛೂಮಂತರ್
ನಿರ್ದೇಶನ: ಕರ್ವ ನವನೀತ್
ತಾರಾಗಣ: ಶರಣ್,ಮೇಘನಾ ಗಾಂವಕರ್, ಅದಿತಿ ಪ್ರಭುದೇವ, ರಂಜನಿ ಭಾರದ್ವಜ್, ಚಿಕ್ಕಣ್ಣ ಪ್ರಭು ಮಂಡಕೂರು, ಶ್ರೀನಿವಾಸ್ ಪ್ರಭು, ಧರ್ಮ,ಓಂ ಪ್ರಕಾಶ್ ರಾವ್, ಅವಿನಾಶ್ ಮತ್ತಿತರರು
ರೇಟಿಂಗ್ : - 3.5/5 ****
ಹೊಸ ವರ್ಷದ ಆರಂಭದಲ್ಲಿ ಒಂದಷ್ಟು ಚಿತ್ರರಂಗಕ್ಕೆ ಪೂರಕವಾದ ಸಂಕೇತದೊಂದಿಗೆ “ಛೂ ಮಂತರ್” ಆರಂಭವಾಗಿದೆ. ದೆವ್ವದ ಕಾಟ ಮತ್ತು ಅದರ ಹಿಂದಿನ ರಹಸ್ಯ ಮತ್ತು ಭೂತ ಬಂಗಲೆಯ ಸುತ್ತ ಸಾಗುವ ಕಥೆ ಇದು.
ಚಿತ್ರವು ಮೂರು ವಿಭಿನ್ನ ಕಥಾಹಂದರವನ್ನು ಹೊಂದಿದೆ, ಕ್ಯಾಥೋಲಿಕ್ ಕುಟುಂಬವೊಂದು ಹಿಮಾಲಯದಲ್ಲಿರುವ ಮೋರ್ಗಾನ್ ಹೌಸ್ ಎಂಬ ಭೂತದ ಭವನಕ್ಕೆ ಸ್ಥಳಾಂತರಗೊಳ್ಳುತ್ತದೆ. ನಂತರ ಅದೇ ಭವನವನ್ನು ಅನ್ವೇಷಿಸಲು ಬಯಸುವ ಘೋಸ್ಟ್‌ಬಸ್ಟರ್‌ಗಳು ಮತ್ತು ಅಧಿಸಾಮಾನ್ಯ ಸಂಶೋಧಕರ ಗುಂಪಿದೆ. ಮೂರನೆಯದು ಹೇಳಲಾದ ಭವನವನ್ನು ದೆವ್ವ ಬಿಡಲು ಏನಾಯಿತು ಎಂಬ ನಿಜವಾದ ಕಥೆ.
ಕರ್ವ ನವನೀತ್ ಅಲ್ಲಲ್ಲಿ ಮೈಝುಮ್ಮೆನಿಸುವ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ನಟ ಶರಣ್, ನಟಿ ಮೇಘನಾ ಗಾಂವಕರ್, ಅದಿತಿ ಮತು ಚಿಕ್ಕಣ್ಣ ತಮಗೆ ಸಿಕ್ಕಿರುವ ಪಾತ್ರಗಳನ್ನು ತಿಂದು ಮುಗಿಸಿದ್ದಾರೆ. ಸಾಕ್ಷತ್ ದೆವ್ವ ಬಂದವರ ರೀತಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ.
ಅದರಲ್ಲಿಯೂ ನಟಿ ಮೇಘನಾ ಗಾಂವಕರ್ ಸೈಲೆಂಟ್ ಅವತಾರದಲ್ಲಿಯೇ ವೈಲೆಂಟ್ ಆಗಿ ಪ್ರೇಕ್ಷಕರನ್ನು ಬೆಚ್ಚಿ ಭಯ ಬೀಳಿಸಿದ್ದಾರೆ. ಅವರ ಇದುವರೆಗಿನ ಪಾತ್ರಗಳಲ್ಲಿ ತೀರಾ ವಿಭಿನ್ನವಾದುದು. ಈ ಮೂಲಕ ತಾವೊಬ್ಬ ಉತ್ತಮ ನಟಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಡೈನೋಮೋ ಅಲಿಯಾಸ್ ಗೌತಮ್ (ಶರಣ್) ದೆವ್ವ ಬಿಡಿಸುವ ಛೂ ಮಂತರ್ ಅಂಡ್ ಕಂಪನಿಯ ಮುಖ್ಯಸ್ಥ , ಆಕಾಂಕ್ಷ (ಅದಿತಿ ಪ್ರಭುದೇವ) ಆರ್ ಜೆ- ಚಿಕ್ಕಣ್ಣ ಆ ಕಂಪನಿಯ ಸದಸ್ಯರು. ಎಲ್ಲೇ ದೆವ್ವ ಕಂಡುಬಂದರೂ ಆ ಸಮಸ್ಯೆ ಬಗೆಹರಿಸುವ ಕಾಯಕ ಇವರದು.
ವಿದೇಶದಲ್ಲಿದ್ದ ಉದ್ಯಮಿ ವಿಕ್ಟರ್ ಡಿ ಕೋಸ್ಟ (ಶ್ರೀನಿವಾಸಪ್ರಭು) ಅಲ್ಲಿದ್ದ ಅಸ್ತಿ ಪಾಸ್ತಿಯನ್ನು ಕಳೆದುಕೊಂಡವರು. ಹೀಗಾಗಿ ಅವರ ಕುಟುಂಬ ಸ್ವದೇಶದ ಮೋರ್ಗನ್ ಹೌಸ್ ಪುತ್ರ ಅಲೆಕ್ಸ್ (ಪ್ರಭು ಮಂಡಕೂರು) ಪತ್ನಿ ಕ್ಯಾಥರೀನ್ (ಮೇಘನಾ ಗಾವಂಕರ್) ಪುತ್ರಿ ಕ್ಲಾರಾ ಡಿ ಕೋಸ್ಟಾ ಹಾಗು ತಾಯಿಯ ಜೊತೆ ಆಗಮಿಸಿತ್ತಾರೆ. ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ಪಡೆದುಕೊಳ್ಳುತ್ತದೆ.
ಮಾರ್ಗನ್ ಹೌಸ್, ದೆವ್ವದ ಮನೆ ಎಂದೇ ಕುಖ್ಯಾತಿ. ಜೊತೆಗೆ ಅಲ್ಲಿ ನಿಧಿ ಇದೆ ಎನ್ನುವ ಊಹಾಪೋಹಕ್ಕೆ ಹಲವು ಮಂದಿ ಅದನ್ನು ಪಡೆಯಲು ಹರಸಾಹಸ ಮಾಡಿದವರು. ತಮ್ಮ ಮನೆಗೆ ಬಂದ ವಿಕ್ಟರ್ ಡಿ ಕೋಸ್ಟಾ ಕುಟುಂಬ ಒಂದೊಂದೋ ಸಮಸ್ಯೆ ಎದುರಿಸುತ್ತದೆ. ಆ ಸಮಸ್ಯೆ ನಿವಾರಣೆಗೆ ಡೈನೊಮೋ ಕಂಪನಿ ಆಗಮಿಸುತ್ತದೆ. ಯಾಕೆ. ಹೇಗೆ ಬರುತ್ತಾರೆ ಎನ್ನುವುದು ರೋಚಕ ಅದನ್ನು ಚಿತ್ರದಲ್ಲಿ ನೋಡಬೇಕು.
ಆ ಮನೆಯಲ್ಲಿ ನಿಜಕ್ಕೂ ನಿಧಿ ಇದೆಯಾ ಅಥವಾ ಅಲ್ಲಿ ದೆವ್ವ ಭೂತಗಳು ಇವೆಯೇ ಎನ್ನುವ ಒಂದೊಂದೇ ಸಂಗತಿ ಅನಾವರಣ ಆಗುತ್ತದೆ. ಕೆಲವು ಸನ್ನಿವೇಶದಲ್ಲಿ ಕಲಾವಿದರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಅದರಲ್ಲಿ ನಟ ಶರಣ್, ನಟಿ ಮೇಘನಾ ಗಾಂವಕರ್,ಅದಿತಿ ಪ್ರಭುದೇವ ಮತ್ತು ಚಿಕ್ಕಣ್ಣ ಪ್ರೇಕ್ಷಕರಿಗೆ ಭಯ ಹುಟ್ಟಿಸುವಷ್ಟು ನಟಿಸಿದ್ಧಾರೆ.
ಈ ನಡುವೆ ಬಡ ಹುಡುಗಿ ಮೋಗ್ರಾ (ರಂಜನಿ ಭಾರದ್ವಜ್) ಕಂಪನಿ ಸರ್ಕಾರದ ಉಸ್ತುವಾರಿ ವಹಿಸಿಕೊಂಡಿದ್ದ ಜಾರ್ಜ್ ಮೋರ್ಗನ್ ಅನ್ನು ಮದುವೆ ಆಗ್ತಾಳೆ, ಹಣದಾಸೆಗೆ ಆಕೆ ಏನು ಮಾಡ್ತಾಳೆ, ಜಾರ್ಜ್ ಮೋರ್ಗನ್ ಕಡೆಯಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುತ್ತಾನೆ. ಹಾಗಾದರೆ ಮುಂದೇನು…..
ಕೆಲವು ಕಡೆ ಭಯ ಹುಟ್ಟಿಸುವ ಸನ್ನಿವೇಶಗಳಿಗಳಿಗೆ ಇನ್ನಷ್ಟು ಕಡೆ ಆ ರೀತಿಯ ಸೌಂಡ್ ಎಫೆಕ್ಟ್ ಮಾಡಿದ್ದರೆ ಚೆಂದ ಇತ್ತು. ಶರಣ್ ಎರಡು ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ನಟ ಚಿಕ್ಕಣ್ಣ ಕಾಮಿಡಿಯಲ್ಲಿಯೇ ಕಚಗುಳಿ ಇಟ್ಟಿದ್ದಾರೆ. ನಟಿ ಅದಿತಿ ಪ್ರಭುದೇವ, ಪ್ರಭು ಮಂಡಕೂರು, ಧರ್ಮ, ಸೇರಿದಂತೆ ಹಲವು ಕಲಾವಿದರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.