ಟೀಸರ್ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿರುವ ಪುಷ್ಪ 2 ಸಿನಿಮಾದ ಮೊದಲ ಹಾಡು ಕಾರ್ಮಿಕರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿ 6 ಭಾಷೆಯಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.
ಪುಷ್ಪ ಪುಷ್ಪ ಅಂತಾ ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು,ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಕಂಠ ಕುಣಿಸಿದ್ದಾರೆ.
ಪುಷ್ಪನಿಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದು, ಅಲ್ಲು ಅರ್ಜುನ್ ಜಭರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ ಎಂಬ ಡೈಲಾಗ್ ಫ್ಯಾನ್ಸ್ ಗೆ ಕಿಕ್ ಕೊಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ.
ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್ , ಡಾಲಿ ಧನಂಜಯ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪುಷ್ಪ 2: ದಿ ರೂಲ್ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.