ಹಾರರ್ ಕಂಟೆಂಟ್ ಹಿನ್ನೆಲೆಯಾಗಿಟ್ಟುಕೊಂಡು ಇನ್ಟೆನ್ಸ್ ಪ್ರೇಮಕಥೆಯೊಂದನ್ನು ನಿರ್ದೇಶಕ ದತ್ತಾತ್ರೇಯ ಅವರು ಈವಾರ ತೆರೆಕಂಡಿರುವ ಪ್ರಣಯಂ ಚಿತ್ರದ ಮೂಲಕ ಹೇಳಿದ್ದಾರೆ, ಕಾಲೇಜು ದಿನಗಳಲ್ಲಿ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ, ಆಕೆಗೆ ಬೇರೊಬ್ಬನೊಂದಿಗೆ ಮದುವೆಯಾದರೂ ಬಿಡದೆ ಹಿಂಬಾಲಿಸುತ್ತಾನೆ.
ಗಂಡನೊಂದಿಗೆ ಖುಷಿಯಿಂದ ಹನಿಮೂನ್ಗೆ ಹೊರಟ ಆಕೆಯನ್ನು ಅಪಹರಿಸುತ್ತಾನೆ. ಆದರೆ ಆ ಯುವತಿಗೆ ತಾನು ಕಿಡ್ನಾಪ್ ಆಗಿರುವ ವಿಷಯವೇ ತಿಳಿದಿರುವುದಿಲ್ಲ. ಮುಂದೆ ನಡೆಯುವ ಘಟನೆಗಳನ್ನು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತ, ಥ್ರಿಲ್ಲಿಂಗ್ ಎಲಿಮೆಂಟ್ನೊಂದಿಗೆ ನಿರೂಪಿಸುತ್ತ ಹೋಗಿರುವುದೇ ಪ್ರಣಯಂ ಚಿತ್ರದ ಹೈಲೈಟ್. ವಿದೇಶದಿಂದ ಬರುವ ನಾಯಕ ಗೌತಮ್(ರಾಜವರ್ಧನ್)ಗೆ ಮನೆಯಲ್ಲಿ ಮದುವೆ ಮಾಡಬೇಕೆಂದು ನಿಶ್ಚಯಿಸುತ್ತಾರೆ, ನಾಯಕನ ಸ್ವಂತ ಅತ್ತೆಯ ಮಗಳಾದ ಅಮೃತಾ(ನೈನಾ ಗಂಗೂಲಿ) ಜೊತೆಗೇ ಗೌತಮ್ ಮದುವೆ ನಿಶ್ಚಯವಾಗುತ್ತದೆ, ಗೌತಂ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ, ಶ್ರೀಮಂತರ ಮನೆಯ ಮದುವೆ ಸಮಾರಂಭ ಎಂದರೆ ಕೇಳಬೇಕೇ, ಗೌತಂ, ಅಕ್ಷರಾ ಮದುವೆ ನಡೆಯುವ ಹೊತ್ತಿದೆ ಅರ್ಧ ಸಿನಿಮಾ ಮುಗಿದುಹೋಗುತ್ತದೆ, ನಂತರ ದ್ವಿತೀಯಾರ್ಧದಲ್ಲಿ ನಡೆಯುವುದೇ ಮತ್ತೊಂದು ರಣರೋಚಕ ಕಥೆ, ನಾಯಕ ನಾಯಕಿ ಇಬ್ಬರೂ ಹನಿಮೂನ್ಗಾಗಿ ಪಾಲಿಬೆಟ್ಟ ಪ್ರದೇಶದ ಸುಂದರ ತಾಣಕ್ಕೆ ತೆರಳುತ್ತಾರೆ, ಯಾವುದೇ ಫೋನ್, ಮೊಬೈಲ್ ನೆಟ್ ವರ್ಕ್ ಸಿಗದ ತಾಣವದು.
ಇತ್ತ ದಂಪತಿಗಳನ್ನು ಹನಿಮೂನ್ಗೆ ಕಳಿಸಿದ ಪೋಷಕರು ಮನೆಯೊಳಗೆ ಬಂದಾಗ ಅಲ್ಲಿ ರೂಮೊಂದರಲ್ಲಿ ಗೌತಂ ಲಾಕಾಗಿರುವುದನ್ನು ಕಂಡು ಷಾಕಾಗುತ್ತಾರೆ. ಹಾಗಾದರೆ ಅಮೃತಳನ್ನು ಕರೆದುಕೊಂಡು ಹೋದ ವ್ಯಕ್ತಿ ಯಾರು ? ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಗೋದಿಲ್ಲ, ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗುತ್ತದೆ, ಆಗವರು ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ ಅದು ಪಾಲಿಬೆಟ್ಟದ ಸನಿಹದಲ್ಲಿ ನೆಟ್ ವರ್ಕ್ ಕಟ್ ಆಗಿರುತ್ತದೆ, ಇತ್ತ ಗಂಡ ತನ್ನ ಜೊತೆಗಿದ್ರೂ,ರೊಮ್ಯಾಂಟಿಕ್ ಮೂಡ್ ಗೆ ಬರದೆ ತನ್ನ ಪಾಡಿಗೆ ತಾನಿರುವುದನ್ನು ಕಂಡು ಅಮೃತ ಸಿಟ್ಟಾಗುತ್ತಾಳೆ. ಕೂಗಾಡುತ್ತಾಳೆ, ಆದರೂ ತಾನು ತಟಸ್ಥವಾಗಿರುವುದಕ್ಕೆ ಗೌತಂ ಕಾರಣ ಹೇಳುವುದಿಲ್ಲ, ನಾನು ನಿನ್ನನ್ನು ಬೆಟ್ಟದಷ್ಟು ಪ್ರೀತಿಸುವುದಾಗಿ ಹೇಳುತ್ತಾನೆ, ಆಕೆ ಕಾಲೇಜು ದಿನಗಳಲ್ಲಿ ಕಂಡಿದ್ದ ಕನಸುಗಳನ್ನೆಲ್ಲ ಈಡೇರಿಸುತ್ತಾನೆ, ಒಂದು ಹಂತದಲ್ಲಿ ಅಮೃತಳಿಗೇ ಆಶ್ಚರ್ಯವಾಗುವಷ್ಟು, ಹೀಗೇ ಸಾಗುವ ಕಥೆಯಲ್ಲಿ ಕೊನೆಗೂ ಒಂದು ದೊಡ್ಡ ಟ್ವಿಸ್ಟ್ ಬಂದೇ ಬಿಡುತ್ತದೆ, ಅದು ಇಡೀ ಚಿತ್ರಕಥೆಯನ್ನು ಬೇರೆಯದೇ ಹಾದಿಗೆ ಕೊಂಡೊಯ್ಯುತ್ತದೆ, ಅದೇನೆಂದು ತೆರೆಮೇಲೆ ನೋಡಿದರೆ ಚೆನ್ನಾಗಿರುತ್ತದೆ.
ನಿರ್ಮಾಪಕ ಪರಮೇಶ್ ಅವರೇ ಕಥೆ ಹೆಣೆದಿದ್ದಾರೆ, ನಾಯಕ ರಾಜವರ್ಧನ್ ಡ್ಯುಯೆಲ್ ಶೇಡ್ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ, ನಾಯಕಿ ನೈನಾ ಗಂಗೂಲಿ ಮೈಛಳಿ ಬಿಟ್ಟು ಅಭಿನಯಿಸಿದ್ದಾರೆ, ಗ್ಲಾಮರಸ್ ಪಾತ್ರಕ್ಕೆ ಜೀವ ತುಂಬಿದ್ದಾರೆ,
ಮನೋಮೂರ್ತಿ ಅವರ ಸಂಗೀತ ಸಂಯೋಜನೆಯ ಸುಂದರ ಹಾಡುಗಳ ಜೊತೆಗೆ ವಿ.ನಾಗೇಶ್ ಆಚಾರ್ಯ ಅವರ ಕ್ಯಾಮೆರಾ ಕೈಚಳಕದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ಗಳನ್ನು ಹೀಗೂ ತೋರಿಸಬಹುದಾ ಎಂದು ಆಶ್ಚರ್ಯಪಡುವ ಹಾಗೆ ಚಿತ್ರವನ್ನು ಸೆರೆಹಿಡಿದಿದ್ದಾರೆ, ಉಳಿದಂತೆ ಕಲಾವಿದರಾದ ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಇವರೆಲ್ಲ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ,