ಆ ಊರಲ್ಲಿ ಮೇಲಿಂದ ಮೇಲೆ ಆಕಸ್ಮಿಕ ಸಾವುಗಳು ನಡೆಯುತ್ತವೆ, ಅದೂ ಹುಣ್ಣಿಮೆಯ ದಿನವೇ, ಇದನ್ನು ಯಾರಾದರೂ ಮಾಡ್ತಿದಾರಾ ಅಥವಾ ಮುನಿಸಿಕೊಂಡಿರುವ ಗ್ರಾಮದೇವತೆಯ ಆಕ್ರೋಶಕ್ಕೆ ಜನ ಬಲಿಯಾಗ್ತಿದಾರಾ ಎಂಬುದನ್ನು ಪತ್ತೆ ಹಚ್ಚುವುದೇ ಈ ವಾರ ತೆರೆಕಂಡಿರುವ ರಣಾಕ್ಷ ಚಿತ್ರದ ಕಥಾಹಂದರ.
ಇಡೀ ಚಿತ್ರದ ಕಥೆ ಬಣಾಲು ಎಂಬ ಗ್ರಾಮದಲ್ಲಿ ನಡೆಯುತ್ತದೆ, ಏನೋ ಕಾರಣ ಹೇಳಿಕೊಂಡು ಆ ಊರಿಗೆ ಬರುವ ಪ್ರತಾಪ್(ಸೀರುಂಡೆ ರಘು) ಇದರ ಹಿಂದೆ ಯಾರಿದ್ದಾರೆ, ಇದು ಮನುಷ್ಯರ ಕೆಲಸವಾ, ದೈವದ ಕೆಲಸವಾ ಎಂಬುದನ್ನು ಹೇಗೆ ಪತ್ತೆ ಹಚ್ಚುತ್ತಾನೆ ಎಂದು ನಿರ್ದೇಶಕ ರಾಘವ ಅವರು ಚಿತ್ರದಲ್ಲಿ ನಿರೂಪಿಸಿದ್ದಾರೆ, ಹುಣ್ಣಿಮೆಯ ದಿನ ಊರಲ್ಲಿ ನಡೆಯುತ್ತಿರುವ ಅಸಜಹ ಸಾವುಗಳು ಸಹಜವಾಗಿಯೇ ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತವೆ, ಈ ಸಂಬಂಧ ಗ್ರಾಮಸ್ಥರೆಲ್ಲ ಊರಗೌಡ(ಮುನಿ)ನ ಜೊತೆ ಸೇರಿ ಚರ್ಚಿಸುತ್ತಾರೆ, ಆಗ ಆ ಗೌಡ ಊರಾಚೆ ಇರೋ ಬೆಟ್ಟದಲ್ಲಿರುವ ಕಾಳಿ ಸ್ವಾಮೀಜಿ ಬಳಿ ಹೋದರೆ ಇದಕ್ಕೆಲ್ಲ ಪರಿಹಾರ ಹೇಳುತ್ತಾರೆ ಎಂದಾಗ ಊರ ಜನರೆಲ್ಲ ಸೇರಿ ಸ್ವಾಮೀಜಿ ಬಳಿ ಊರ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಾರೆ, ಆಗ ಆ ಸ್ವಾಮೀಜಿ ಊರಲ್ಲಿ ಆ ದೇವಿಗೆ ಅಪಚಾರವಾಗಿದೆ, ಅದಕ್ಕೆ ಹೀಗೆ ಆಗುತ್ತಿರುವುದು, ಒಬ್ಬ ಹೆಣ್ಣುಮಗಳು ಕಟ್ಟುನಿಟ್ಟಿನ ವೃತ ಆಚರಣೆ ಮಾಡಿ ಭಕ್ತಿ, ಶೃದ್ದೆಯಿಂದ ಪೂಜೆ ಸಲ್ಲಿಸಬೇಕು, ಆಗ ದೇವಿ ಸಂತೃಪ್ತಳಾಗಿ, ಊರ ಜನರಿಗೆ ಒಳ್ಳೇದಾಗುತ್ತದೆ, ಪೂಜೆ ಅಲ್ಲಿಸುವಾಗ ಏನಾದರೂ ಅಪಚಾರವಾದರೆ ಆ ಮಹಿಳೆಯ ಪ್ರಾಣವೇ ಹೋಗಬಹುದು ಎಂದು ಎಚ್ಚರಿಕೆ ನೀಡುತ್ತಾನೆ.
ಅದರಂತೆ ಊರಲ್ಲಿ ಒಂಟಿಯಾಗಿದ್ದ ಮಧುಮತಿ(ರೂಹಿ) ಈ ಪೂಜೆ ಮಾಡಬೇಕು, ಅವಳಿಂದ ಮಾತ್ರವೇ ಈ ಪೂಜೆ ಯಶಸ್ವಿಯಾಗುತ್ತೆ ಎಂದೂ ಸಲಹೆ ನೀಡುತ್ತಾನೆ, ಅದರಂತೆ ಮಧುಮತಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ದೇವಿಗೆ ಪೂಜೆ ಸಲ್ಲಿಸಲು ಮುಂದಾಗುತ್ತಾಳೆ. ಇತ್ತ ಊರ ಗೌಡನ ಮಗಳು ಸಿಂಚನ(ರಕ್ಷಾ)ಗೆ ಪ್ರತಾಪ್ ಪರಿಚಯ ಆಗಿ ಇಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ, ಊರಬಿಟ್ಟು ಊರಿಗೆ ಬಂದವನು, ದಿಕ್ಕು ದೆಸೆ ಇಲ್ಲದವನು ಎಂದು ಇವರಿಬ್ಬರ ಪ್ರೀತಿಯನ್ನು ಗೌಡ ತಿರಸ್ಕರಿಸಿದರೂ, ಇವರ ಪ್ರೀತಿಗೆ ಸಿಂಚನಾಳ ಅಣ್ಣನ ಬೆಂಬಲ ಸಿಗುತ್ತದೆ, ಇತ್ತ ಹುಣ್ಣಿಮೆಯ ರಾತ್ರಿ ದೇವಿಯ ಆಲಯದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿದ ಮಧುಮತಿಗೆ ದೇವಿಯ ಅನುಗ್ರಹವೂ ಸಿಗುತ್ತದೆ, ಜೊತೆಗೆ ಸ್ವಾಮೀಜಿ ಪೂಜೆಯ ನಂತರ 2 ದಿನ ಗ್ರಾಮಸ್ಥರೆಲ್ಲ ಊರನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಹೇಳಿರುತ್ತಾನೆ, ಅದರಂತೆ ಊರವರೆಲ್ಲ ಗ್ರಾಮವನ್ನು ತೊರೆದು ಹೊರಗಿರಲು ಸಿದ್ದರಾಗುತ್ತಾರೆ, ಆಗ ಊರಿಗೆ ಹೊಸ ವ್ಯಕ್ತಿಯೊಬ್ಬ ಎಂಟ್ರಿಯಾಗುತ್ತಾನೆ, ಈ ಕೊಲೆಗಳ ಹಿಂದಿರುವ ರಹಸ್ಯವನ್ನು ಬಯಲಿಗೆಳೆಯುತ್ತಾನೆ, ಆ ರಹಸ್ಯ ಏನೆಂದು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕರು ನಿರೂಪಿಸಿದ್ದಾರೆ, ಇಡೀ ಚಿತ್ರವನ್ನು ಎಲ್ಲೂ ಬೋರಾಗದಂತೆ ತೆಗೆದುಕೊಂಡು ಹೋಗುವಲ್ಲಿ ನಿರ್ದೇಶಕ ರಾಘವ ಅವರು ಗೆದ್ದಿದ್ದಾರೆ.
ಚಿತ್ರದ ಕ್ಯಾಮರಾ ವರ್ಕ್ ಚೆನ್ನಾಗಿದೆ, ಅದರಲ್ಲೂ ರೆಗ್ಯುಲರ್ ಶೈಲಿ ಬಿಟ್ಟು ಬೇರೆಯದೇ ರೀತಿಯಲ್ಲಿ ಕಂಪೋಜ್ ಮಾಡಿರುವ ಆಕ್ಷನ್ ದೃಶ್ಯಗಳು ರೋಮಾಂಚನಕಾರಿಯಾಗಿ ಮೂಡಿಬಂದಿವೆ, ಇನ್ನು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ಮೂಡಿಬಂದಿದೆ, ಆಲಾಪ್ ಅವರ ಸಂಗೀತ ಸಂಯೋಜನೆಯ ತಂದಾನೆ ತಂದಾನೆ ಎಂಬ ಮೆಲೋಡಿ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ, ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬಂದಿರುವ ರಣಾಕ್ಷ ಚಿತ್ರ ಎಂಟರ್‌ಟೈನ್ ಬಯಸುವವರಿಗೆ ಖಂಡಿತ ಇಷ್ಟವಾಗುತ್ತದೆ, ನಾಯಕನ ಪಾತ್ರದಲ್ಲಿ ಸೀರುಂಡೆ ರಘು ಉತ್ತಮವಾಗಿ ಅಭಿನಯಿಸಿದ್ದಾರೆ, ಮುನಿ ಅವರ ಪಾತ್ರವೇ ಇಡೀ ಚಿತ್ರದ ಹೈಲೈಟ್, ರಕ್ಷಾ ಸಿಂಚನಾ ಪಾತ್ರದಲ್ಲಿ ಎಲ್ಲರಿಗೂ ಇಷ್ಟವಾಗುತ್ತಾರೆ, ಹೆಚ್.ಎಸ್. ರಾಮು, ಶೋಭಾ ಶಿವಾಜಿರಾವ್ ಹಾಗೂ ಉಮಾಮಹೇಶ್ವರ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.