ಈ ವಾರ ತೆರೆಕಂಡಿರುವ ಉತ್ತಮ ಕೌಟುಂಬಿಕ ಕಥಾಹಂದರ ಒಳಗೊಂಡ ಚಿತ್ರ `ವಿಕಾಸಪರ್ವ` ರಾಜ್ಯಾದ್ಯಂತ ತೆರೆಕಂಡಿದ್ದು, ರಿಲೀಸಾದ ಎಲ್ಲಾ ಕೇಂದ್ರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇತ್ತೀಚೆಗೆ ಫ್ಯಾಮಿಲಿ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆ ಒಂಗೊಂಡ ಚಿತ್ರಗಳ ನಿರ್ಮಾಣ ಕಮ್ಮಿಯಾಗಿದ್ದು, ಅದರಲ್ಲಿ ವಿಕಾಸ ಪರ್ವ ವಿಶೇಷ ಚಿತ್ರವಾಗಿ ನಿಂತಿದೆ.
ನಾಲ್ವರು ಸ್ನೇಹಿತರ ಸಂಸಾರಗಳಲ್ಲಿ ನಡೆಯುವ ನೋವು, ನಲಿವಿನ ಕಥಾನಕವನ್ನು ವಿಕಾಸ ಪರ್ವ ಚಿತ್ರದ ಮೂಲಕ ನಿರ್ದೇಶಕ ಅನ್ಬು ಅವರು ಹೇಳುವ ಪ್ರಯತ್ನ ಮಾಡಿದ್ದಾರೆ. ವಿಶ್ರುತ್ ನಾಯಕ್ ಅವರು ಸಂತೋಷ, ನಗು, ಸ್ನೇಹ ಮತ್ತು ಸಾವು ಇಂಥ ಒಂದಷ್ಟು ಅಂಶಗಳನ್ನಿಟ್ಟುಕೊಂಡು ವಿಶ್ರುತ್ ನಾಯಕ್ ಅವರು
ಈ ಚಿತ್ರದ ಕತೆ, ಚಿತ್ರಕಥೆಯನ್ನು ಹೆಣೆದಿದ್ದಾರೆ.
ಹೆಂಡ, ಜೂಜು ಸಹವಾಸ, ಹೆಂಡತಿ ಮಕ್ಕಳು ಉಪವಾಸ ಎಂಬ ಗಾದೆಯ ಅರ್ಥವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕತೆಗಾರ ವಿಶೃತ್ ನಾಯಕ್. ಅವರು ಅದೇ ಸನ್ನಿವೇಶಗಳನ್ನು ಮಧ್ಯಂತರವರೆಗೂ ಹೇಳುತ್ತಾ ಹೋಗುತ್ತಾರೆ. ಈಗಿನ ಕಾಲಮಾನಕ್ಕೆ ಇದು ಸ್ವಲ್ಪ ನಿಧಾನ ಎನಿಸಬಹುದು. ಆ ನಂತರ ಮದ್ಯಪಾನದ ಒಳಿತು ಕೆಡುಕುಗಳ ಕುರಿತಾಗಿ ವಿವರಿಸಿದ್ದಾರೆ. ಕುಡಿತದ ಚಟ ಎನ್ನುವುದು, ಮನುಷ್ಯನ ಜೀವನದಲ್ಲಿ ಏನೆಲ್ಲ ಅನಾಹುತಗಳನ್ನು ಮಾಡಬಹುದು ಎಂಬ ಕಾಳಜಿಯನ್ನು ವಿಕಾಸ ಪರ್ವ ಚಿತ್ರ ಪ್ರದರ್ಶಿಸುತ್ತದೆ.
ಸ್ನೇಹವೇ ಮುಖ್ಯ ಎಂದುಕೊಂಡಿರುವ ಮಧ್ಯ ವಯಸ್ಸಿನ ನಾಲ್ಕು ಸ್ನೇಹಿತರು, ಇವರ ಕುಡಿತದ. ಚಟಕ್ಕೆ ರೋಸಿ ಹೋಗಿರುವ ಅವರ ಪತ್ನಿಯರು. ಈ ಪೈಕಿ ಏನಾದರೂ ಮಾಡಿ ತನ್ನ ಗಂಡನಿಗೆ ಅಂಟಿರುವ ಕುಡಿತದ ಚಟವನ್ನು ಬಿಡಿಸಲೇಬೇಕು ಎಂದು ಪ್ರಯತ್ನಿಸುವ ಗೃಹಿಣಿ, ಗಂಡನನ್ನು ಕಳೆದುಕೊಳ್ಳುತ್ತಾಳೆ. ಮತ್ತೊಬ್ಬರು ಸಾವು ಬದುಕಿನ ದರ್ಶನದಿಂದ ಆಚೆ ಬರುತ್ತಾರೆ. ಹೀಗೆ ಬಿಡಿ ಬಿಡಿಯಾಗಿ ಕುಡಿತದ ಅನಾಹುತಗಳನ್ನು ಆಯಾ ಪಾತ್ರಧಾರಿಗಳ ಮೂಲಕವೇ ಹೇಳೋ ಪ್ರಯತ್ನ ಮಾಡಲಾಗಿರುವುದು ಈ ಚಿತ್ರದ ಮತ್ತೊಂದು ಹೈಲೈಟ್.
ಹೀಗೆ ಮಧ್ಯಮ ವರ್ಗದವರ ಮದ್ಯವ್ಯಸನದ ಸುತ್ತ ನಡೆಯುವ ಕಥೆ, ವ್ಯಥೆಗಳನ್ನು ಹೇಳುತ್ತಾ ಹೋಗುವ `ವಿಕಾಸ ಪರ್ವ`, ಪರಿವರ್ತನೆಯ ಹಾದಿಯನ್ನೂ ಸಕಾರಾತ್ಮಕವಾಗಿ ತೋರುವುದು. ನಾಯಕ ರೋಹಿತ್ ನಾಗೇಶ್ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಉಳಿದಂತೆ ಕುರಿ ರಂಗ, ಆಶ್ವಿನ್ ಹಾಸನ್ ಇವರೆಲ್ಲ ಚಿತ್ರಕತೆಗೆ ಪೂರಕವಾಗಿ ಮತ್ತು ನಿರ್ದೇಶಕರ ಅಣತಿಯಂತೆ ನಟಿಸಿದ್ದಾರೆ. ಒಟ್ಟಾರೆ ಒಂದು ಕೌಟುಂಬಿಕ ಕಥಾಹಂದರವನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಮೇಲೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತವೂ ಮೂಡಿಬಂದಿದೆ. ವೀಕೆಂಡ್ ನಲ್ಲಿ ಫ್ಯಾಮಿಲಿ ಸಮೇತ ವೀಕ್ಷಿಸಲು ವಿಕಾಸ ಪರ್ವ ಉತ್ತಮ ಆಯ್ಕೆಯಾಗಿದೆ.