ಶ್ರೀಮುರಳಿ ಅಭಿನಯದ ``ಬಘೀರ``ಚಿತ್ರದ ಟ್ರೇಲರ್ ಭರ್ಜರಿಯಾಗಿದೆ ಹೊಂಬಾಳೆ ಫಿಲಂಸ್ ನಿರ್ಮಾಣದ, ಡಾ||ಸೂರಿ ನಿರ್ದೇಶನದ ಈ ಚಿತ್ರ ಅಕ್ಟೋಬರ್ 31 ರಂದು ಬಿಡುಗಡೆ
Posted date: 22 Tue, Oct 2024 � 06:10:35 PM
ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ "ಕೆ.ಜಿ.ಎಫ್", " ಕಾಂತಾರ " ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೆಸರಾಂತ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ, ಡಾ||ಸೂರಿ ನಿರ್ದೇಶನದಲ್ಲಿ ಶ್ರೀಮುರಳಿ ಅವರು‌ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಬಘೀರ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಅಕ್ಟೋಬರ್ 31 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾಧ್ಯಮದವರ ಜೊತೆ ಮಾತನಾಡಿದರು.
 
ಮೊದಲಿಗೆ "ಬಘೀರ" ಚಿತ್ರವನ್ನು ನನಗೆ ನಿರ್ದೇಶಿಸಲು ಅವಕಾಶ ನೀಡಿದ ಹೊಂಬಾಳೆ ಫಿಲಂಸ್ ಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾತನಾಡಿದ ನಿರ್ದೇಶಕ ಡಾ||ಸೂರಿ, ಈ ಚಿತ್ರದ ಕಥೆಯನ್ನು ಪ್ರಶಾಂತ್ ನೀಲ್ ಅವರು ಬಹಳ ಚೆನ್ನಾಗಿ ಬರೆದಿದ್ದಾರೆ. "ಬಘೀರ" ಎಂದರೆ ನೈಟ್ ಹಂಟರ್. ಇದು ರಾತ್ರಿವೇಳೆಯಲ್ಲೇ ಭೇಟೆಯಾಡುತ್ತದೆ. ನಮ್ಮ ಚಿತ್ರದ ಕಥೆಯ ಹೆಚ್ಚಿನ ಭಾಗ ರಾತ್ರಿಯಲ್ಲೇ ನಡೆಯುತ್ತದೆ. "ಸೂಪರ್ ಹೀರೋ" ಕಾನ್ಸೆಪ್ಟ್ ನ ಈ ತರಹದ ಕಥೆ ನನ್ನ ಪ್ರಕಾರ ಕನ್ನಡದಲ್ಲಿ ಬಂದಿಲ್ಲ.‌ ಇನ್ನು , ಈ ಚಿತ್ರ ಉತ್ತಮವಾಗಿ ಮೂಡಿಬರಲು ಮುಖ್ಯ ಕಾರಣ ನಮ್ಮ ಚಿತ್ರತಂಡದ ಎಲ್ಲರ ಶ್ರಮ.‌ ಅದರಲ್ಲೂ ಹೆಚ್ಚಿನ ಶ್ರಮ ಶ್ರೀಮುರಳಿ ಅವರದು. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಅಕ್ಟೋಬರ್ 31 ರಂದ ಚಿತ್ರ ತೆರೆಗೆ ಬರಲಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು.

ಮೂರು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಗುವ ದಿನ ಸಮೀಪಿಸಿದೆ. ನಮ್ಮ "ಬಘೀರ" ಇದೇ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರದ ಟ್ರೇಲರ್ ಎಲ್ಲರಿಗೂ ಇಷ್ಟವಾಗಿದೆ ಎಂಬ ಭರವಸೆ ನನಗಿದೆ. ಇನ್ನು, ನಿರ್ದೇಶಕ ಡಾ||ಸೂರಿ ಹಾಗೂ ಹೆಮ್ಮೆಯ ಹೊಂಬಾಳೆ ಫಿಲಂಸ್ ಜೊತೆಗೆ ಕೆಲಸ ಮಾಡಿದ್ದು ಬಹಳ ಸಂತೋಷವಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಜೊತೆಗೆ ಇದು ನನ್ನ ಮೊದಲ ಚಿತ್ರ. ಟ್ರೇಲರ್ ನಲ್ಲೇ ಅವರ ಕೆಲಸ ಕಾಣುತ್ತಿದೆ. ಈ ಚಿತ್ರದ ತಂತ್ರಜ್ಞರು, ಕೆಲಸದಲ್ಲಿ ರಾಕ್ಷಸರು. ಅವರ ಕೆಲಸ ನಿಮಗೆ ತೆರೆಯ ಮೇಲೆ ಕಾಣುತ್ತಿದೆ. ಪ್ರಶಾಂತ್ ನೀಲ್ ಅವರ ಕಥೆಯ ಬಗ್ಗೆ ಹೇಳುವ ಹಾಗೆ ಇಲ್ಲ. ಅಂತಹ ಅದ್ಭುತ ಕಥೆ ಕೊಟ್ಟಿದ್ದಾರೆ ಅವರು. ರುಕ್ಮಿಣಿ ವಸಂತ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಸುಧಾರಾಣಿ ಅವರು ನನ್ನ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಹೀರೋ ತರಹ ನಾನು ಕಾಣಿಸಿಕೊಂಡಾಗ ಹೆಚ್ಚು ಖುಷಿಯಾಯಿತು. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕ ಶ್ರೀಮುರಳಿ.

ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಈ ಚಿತ್ರದಲ್ಲಿ ನಟಿಸಿದ್ದು ತುಂಬಾ ಸಂತೋಷವಾಗಿದೆ ಎಂದು ನಾಯಕಿ ರುಕ್ಮಿಣಿ ವಸಂತ್ ತಿಳಿಸಿದರು. ಈ ಚಿತ್ರದಲ್ಲಿ ನನ್ನದು  "ಬಘೀರ"ನ  ತಾಯಿ ಪಾತ್ರ ಎಂದರು ನಟಿ ಸುಧಾರಾಣಿ.  

ಈವರೆಗೂ ನಾನು ನೀಡಿರುವ ಸಂಗೀತವೇ ಬೇರೆ. " ಬಘೀರ " ಚಿತ್ರದಿಂದ ನೀವು ಕೇಳುವ ಸಂಗೀತವೇ ಬೇರೆ ಎಂದರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. 

ಚಿತ್ರದಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ ಹಾಗೂ ಗರುಡಾ ರಾಮ್ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಎ ಜೆ, ಕಲಾ ನಿರ್ದೇಶಕ ರವಿ ಸಂತೆಹೆಕ್ಲು, ಕಾರ್ಯಕಾರಿ ನಿರ್ಮಾಪಕ ಯೋಗಿ ಜಿ ರಾಜ್ ಮುಂತಾದವರು ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed