ಸಿಂಹಾಸನ ಏರಿದ ರೆಬೆಲ್‌ಸ್ಟಾರ್‌, ಪ್ರಭಾಸ್ ಜನ್ಮದಿನದಂದು `ದಿ ರಾಜಾ ಸಾಬ್` ಮೋಷನ್ ಪೋಸ್ಟರ್ ಅನಾವರಣ
Posted date: 24 Thu, Oct 2024 11:09:26 PM
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ದಿ ರಾಜಾ ಸಾಬ್’ ಇದೀಗ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಏಕೆಂದರೆ ಈ ಸಿನಿಮಾ ಮೇಕರ್ಸ್‌ ಇದೀಗ, ಪ್ರಭಾಸ್‌ ಅವರ ಬರ್ತ್‌ಡೇ ಪ್ರಯುಕ್ತ ವಿಶೇಷ ಮೋಷನ್ ಪೋಸ್ಟರ್ ಅನ್ನು ಹೊರತಂದಿದ್ದಾರೆ. ಹಾರರ್‌ ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಅಷ್ಟೇ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಪ್ರಭಾಸ್‌.

2 ನಿಮಿಷಗಳ ಮೋಷನ್ ಪೋಸ್ಟರ್ ಕಾಡಿನ ಮಧ್ಯದಲ್ಲಿ ಪಿಯಾನೋದಲ್ಲಿ ಕಾಡುವ "ಹ್ಯಾಪಿ ಬರ್ತ್‌ಡೇ" ಟ್ಯೂನ್‌ನೊಂದಿಗೆ ಶುರುವಾಗುತ್ತದೆ. ವೀಕ್ಷಕರನ್ನು ವಿಂಟೇಜ್ ಅರಮನೆಗೆ ಸಾಗಿಸುವ ಮೊದಲು ಕಾಡಿನಲ್ಲಿ ಸಂಚರಿಸುತ್ತಿರುವ ನಿಗೂಢ ವ್ಯಕ್ತಿಯೂ ಅಲ್ಲಿ ಕಾಣಿಸುತ್ತಾನೆ. ಒಮ್ಮಿಂದೊಮ್ಮೆ ಆ ಮನೆಯ ಬಾಗಿಲು ತೆರೆಯುತ್ತದೆ. ಅದರೊಳಗಿಂದ ಸೂಪರ್‌ಸ್ಟಾರ್‌ ಪ್ರಭಾಸ್‌ ಅವರ ದಿ ರಾಜಾಸಾಬ್‌ ಲುಕ್‌ ಅನಾವರಣಗೊಳ್ಳುತ್ತದೆ. 

ವಿಂಟೇಜ್ ಅರಮನೆಯ ಭವ್ಯವಾದ ಹಿನ್ನೆಲೆಯಲ್ಲಿ ಕಪ್ಪು ಉಡುಪಿನಲ್ಲಿ ಸಿಂಹಾಸನದ ಮೇಲೆ ಪ್ರಭಾಸ್ ಕುಳಿತ ಭಂಗಿಯಲ್ಲಿ ಕಂಡಿದ್ದಾರೆ. ರಾಜನ ಲುಕ್‌ನಲ್ಲಿ ಕೈಯಲ್ಲಿ ಸಿಗಾರ್ ಹಿಡಿದು ರಗಡ್‌ ಅವತಾರದಲ್ಲಿ ಎದುರಾಗಿದ್ದಾರೆ. ಈ ಮೋಷನ್‌ ಪೋಸ್ಟರ್‌ನಲ್ಲಿ "ಹಾರರ್ ಈಸ್ ದಿ ನ್ಯೂ ಹ್ಯೂಮರ್" ಎಂಬ ಅಡಿಬರಹವಿದೆ. ನಂತರ "ಹ್ಯಾಪಿ ಬರ್ತ್‌ಡೇ, ರೆಬೆಲ್ ಸಾಬ್" ಎಂದು ಚಿತ್ರತಂಡ ಪ್ರಭಾಸ್‌ಗೆ ಶುಭಕೋರಿದೆ.

ಈ ಮೋಷನ್‌ ಪೋಸ್ಟರ್ ಅನ್ನು ಪ್ರಭಾಸ್‌ ತಮ್ಮ Instagramನಲ್ಲಿ ಹಂಚಿಕೊಂಡಿದ್ದಾರೆ. "ಇದು ಚಳಿ ಮತ್ತು ರೋಮಾಂಚನಗಳ ಸಮಯ. ಏಪ್ರಿಲ್ 10, 2025 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ" ಎಂದು ಬರೆದಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿದೆ. #RajaSaabBirthdayCelebrations ಎಂಬ ಹ್ಯಾಶ್‌ಟ್ಯಾಗ್ ಜಾಗತಿಕವಾಗಿ ಟ್ರೆಂಡಿಂಗ್ ಆಗಿದೆ. 

ಆಕ್ಷನ್- ಪ್ಯಾಕ್ಡ್ ಶೈಲಿಯ ಈ ಸಿನಿಮಾದಲ್ಲಿ ಪ್ರಭಾಸ್‌ ಹೊಸ ಆಯಾಮದೊಂದಿಗೆ ಆಗಮಿಸಲು ಸಿದ್ಧರಾಗಿದ್ದಾರೆ. ಮೊದಲ ಸಲ ಹಾರರ್-ಕಾಮಿಡಿ ಪ್ರಕಾರವನ್ನು ಅಳವಡಿಸಿಕೊಂಡಿದ್ದಾರೆ. ಅಭಿಮಾನಿಗಳು ನಟನ ಈ ಹೊಸತನದ ಮೇಲೆ ಅಷ್ಟೇ ಕೌತುಕದಲ್ಲಿದ್ದಾರೆ.  

ಮಾರುತಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ತಮನ್ ಎಸ್ ಅವರ ಸಂಗೀತ ಈ ಚಿತ್ರಕ್ಕಿದೆ. 2025ರ ಏಪ್ರಿಲ್ 10 ರಂದು ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed