ಸ್ಕಂದ ಪುರಾಣದಲ್ಲಿ`ತಾರಕೇಶ್ವರ`ನ ರೋಮಾಂಚನಕಾರಿ ಅದ್ಭುತ ನಟನೆ ...ರೇಟಿಂಗ್: 3.5/5
Posted date: 16 Sat, Nov 2024 � 07:58:58 AM
`ತಾರಕೇಶ್ವರ`  ಒಂದು ಪೌರಾಣಿಕ ಚಿತ್ರ. ಈಗಿನ ಕಾಲದಲ್ಲಿ ರೌಡಿಗಳು, ಡಾನ್ ಗಳಿದ್ದ ಹಾಗೆ ಪುರಾಣದ ಕಾಲದಲ್ಲೂ ಅಸುರರುಗಳಿದ್ದು ಋಷಿಮುನಿಗಳು, ಇಂದ್ರ, ಬ್ರಹ್ಮ ಇಂಥ ದೇವತೆಗಳಿಗೆ  ಕಾಟ, ತೊಂದರೆ ಕೊಡುತ್ತಿದ್ದರಂತೆ, ಆಗ ಶ್ರೀದೇವಿ, ಮಹಾವಿಷ್ಣು ಒಂದೊಂದು ಅವತಾರ ಎತ್ತಿ ಆ ರಕ್ಕಸರನ್ನು ಸಂಹರಿಸುತ್ತಿದ್ದರಂತೆ.
 
ಅದೇರೀತಿ ತಾರಕಾಸುರ ಎಂಬ ರಾಕ್ಷಸ ಕೂಡ ದೇವತೆಗಳನ್ನು ಕಾಡುತ್ತ ಅವರಿಗೆ ಕಂಟಕನಾಗಿದ್ದಾ‌ನೆ. ಅವನ‌  ಅಟ್ಟಹಾಸವನ್ನು ಮಟ್ಟ ಹಾಕಲು ಹುಟ್ಟು ವವನೇ ದೇವೇಂದ್ರ ಹಾಗೂ‌ ದೇವತೆಗಳೆಲ್ಲ  ಸೇರಿ  ಶಿವಕುಮಾರನ  ಆಗಮನಕ್ಕೆ ಸಂದರ್ಭ ಸೃಷ್ಟಿಸುತ್ತಾರೆ, ತಾರಕಾಸುರ (ಗಣೇಶ್‌ರಾವ್  ಕೇಸರಕರ್) ಒಬ್ಬ ರಾಕ್ಷಸ, ತನ್ನ ತಂದೆಯನ್ನು ಕೊಂದ ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬುದು ಆತನ ಗುರಿ, ಮಹಾನ್ ಪರಾಕ್ರಮಿಯಾದ ಆತ  ದೇವತೆಗಳನ್ನೆಲ್ಲ  ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಾನೆ, ಇಂದ್ರನ ಹುಡುಕಾಟದಲ್ಲಿರುತ್ತಾನೆ.  ಆದರೆ ಅತನ ತಾಯಿಗೆ ತನ್ನ ಮಗ ಯಾರ ಕೈಯಿಂದ ಹತನಾಗುತ್ತಾನೋ ಎಂಬ ಆತಂಕ, ಆ ಭಯದಲ್ಲೇ ಆಕೆ ಮಗನಲ್ಲೂ ಆ ಭಯವನ್ನು ಹೇಳಿಕೊಳ್ಳುತ್ತಾಳೆ, ತಾಯಿಯ ಸಲಹೆಯಂತೆ ತಾರಕಾಸುರ ತನಗೆ ಸಾವೇ ಬರದಂತೆ ಬ್ರಹ್ಮನಿಂದ ವರ ಪಡೆಯಲು ಕಾಡಿಗೆ ಹೋಗಿ ಘೋರ ತಪಸ್ಸನ್ನು ಕೈಗೊಳ್ಳುತ್ತಾನೆ, ದಟ್ಟಡವಿಯಲ್ಲಿ ವರ್ಷಾನುಗಟ್ಟಲೆ ತಪಸ್ಸು ಮಾಡುವ ತಾರಕಾಸುರನ ಮೇಲೆ ಹುತ್ತವೂ ಬೆಳೆಯುತ್ತದೆ, ಕೊನೆಗೊಂದು ದಿನ ತಾರಕಾಸುರನ ತಪಸ್ಸಿಗೆ  ಮೆಚ್ಚಿದ ಬ್ರಹ್ಮ  ಆತನ ಮುಂದೆ ಪ್ರತ್ಯಕ್ಷನಾಗಿ, ನಿನಗೇನೆ ವರ ಬೇಕು ಕೋಳಿಕೋ ಎಂದು ಹೇಳಿದಾಗ ತಾರಕಾಸುರ ತನಗೆ ಮರಣವೇ ಬಾರದಂತೆ ಅಮರತ್ವ ದಯಪಾಲಿಸಬೇಕೆಂದು ಕೋರುತ್ತಾನೆ. ಹುಟ್ಟಿದ ಪ್ರತಿ ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು, ಇದು ಪ್ರಕೃತಿಯ ನಿಯಮ, ಅದನ್ನು ಅಳಿಸಲಾಗದು, ಅದಕ್ಕೆ ಸಮನಾದ ಬೇರೆ ವರವನ್ನು ಕೇಳಿಕೋ ಎಂದಾಗ, ಬುದ್ದಿ ಉಪಯೋಗಿಸಿದ ತಾರಕಾಸುರ, ಶಿವನ ಪುತ್ರ ಶಿವಕುಮಾರನಿಂದಷ್ಟೇ  ತನಗೆ ಸಾವು ಬರಬೇಕೆಂದು ಕೇಳಿಕೊಳ್ಳುತ್ತಾನೆ, ಅದಕ್ಕೆ ಕಾರಣವೂ ಇರುತ್ತದೆ, ಇದಕ್ಕೆ ಬ್ರಹ್ಮ ತಥಾಸ್ತು ಎನ್ನುತ್ತಾನೆ. ಇತ್ತ ದಾಕ್ಷಾಯಿಣಿಯ ಅಗಲಿಕೆಯ ನಂತರ ಶಿವ ಘೋರವಾದ ತಪಸ್ಸು ಕೈಗೊಂಡಿರುತ್ತಾನೆ, ಆತನ ತಪೋಭಂಗ ಮಾಡಲು ದೇವತೆಗಳು ರತಿ-ಮನ್ಮಥರನ್ನು ಕಳಿಸುತ್ತಾರೆ, ತಮ್ಮ  ನೃತ್ಯದಿಂದಲೂ ಶಿವ ಎಚ್ಚರಗೊಳ್ಳದಿದ್ದಾಗ, ಆತನ  ತಪಸ್ಸನ್ನು ಭಂಗಪಡಿಸಲು ಮನ್ಮಥ ತನ್ನ ಬಾಣ ಬಿಡುತ್ತಾನೆ, ಆಗ ಕೋಪಗೊಂಡ ಶಿವ ತನ್ನ ಮೂರನೇ ಕಣ್ಣನ್ನು ತೆರೆದಾಗ ಶಿವನ ಕ್ರೋಧಾಗ್ನಿಗೆ ಸಿಕ್ಕು  ಮನ್ಮಥ ಭಸ್ಮವಾಗುತ್ತಾನೆ, ಇದರಲ್ಲಿ ತಮ್ಮದೇನೂ ತಪ್ಪಿಲ್ಲವೆಂದು ರತಿ ಬೇಡಿಕೊಂಡಾಗ, ಶಿವ ಮನ್ಮಥನಿಗೆ ಮರು ಜೀವ ನೀಡುತ್ತಾನೆ, ಆನಂತರ ಶಿವನ ಮನದಲ್ಲಿ ಪ್ರೇಮಾಂಕುರವಾಗುತ್ತದೆ, ಶಿವನನ್ನೆ ತನ್ನ ಗಂಡನಾಗಿ ಪಡೆದುಕೊಳ್ಳಬೇಕೆಂದು ತಪಸ್ಸು ಕೈಗೊಂಡಿದ್ದ ಪಾರ್ವತಿ(ರೂಪಾಲಿ)ಗೆ ಶಿವ ಒಲಿಯುತ್ತಾನೆ, ಆಕೆಯೊಂದಿಗೆ ವಿವಾಹವಾಗುತ್ತದೆ, ಇತ್ತ ಶಿವ ಪಾರ್ವತಿಯ ಮದುವೆಯನ್ನು ಹೇಗಾದರೂ ನಿಲ್ಲಿಸಬೇಕೆಂದು ತಾರಕಾಸುರ ಪಾರ್ವತಿಯನ್ನೇ ಮದುವೆಯಾಗಲೆಂದು ಪರ್ವತರಾಜನ ಅರಮನೆಗೆ ಬರುತ್ತಾನೆ, ಇಂದ್ರನ ಮಾಯಾಜಾಲದಿಂದ ಸೃಷ್ಟಿಯಾದ ಪಾರ್ವತಿಗೆ ತಾರಕಾಸುರ ತಾಳಿ ಕಟ್ಟುತ್ತಾನೆ, ಅದೇ ಸಮಯಕ್ಕೆ ಶಿವ ಪಾರ್ವತಿಯ ಕೊರಳಿಗೆ ತಾಳಿ ಕಟ್ಟುತ್ತಾನೆ, ನಂತರ ಸ್ಕಂದ(ಸುಬ್ರಮಣ್ಯ)ನ ಅವತಾರ ಹೇಗಾಯಿತು, ತಾರಕಾಸುರನ ಅಂತ್ಯ ಯಾವರೀತಿ ಆಯಿತು ಎಂಬುದನ್ನು ನಿರ್ದೇಶಕ ಪುರುಷೋತ್ತಮ್ ಅವರು ಅದ್ಭುತ ಗ್ರಾಫಿಕ್ ಸನ್ನಿವೇಶಗಳೊಂದಿಗೆ ಚೆನ್ನಾಗಿ ನಿರೂಪಿಸಿದ್ದಾರೆ.   
   
ಗಣೇಶ್‌ರಾವ್ ಕೇಸರ್‌ಕರ್ ಅವರಿಲ್ಲಿ  ಶಿವ ಹಾಗೂ ತಾರಕಾಸುರನಾಗಿ ಎರಡು ಪಾತ್ರದಲ್ಲಿ  ಅದ್ಭುತ ಅಭಿನಯ  ನೀಡಿದ್ದಾರೆ, ಅದರಲ್ಲೂ ತಾರಕಾಸುರನಾಗಿ ಘರ್ಜಿಸುತ್ತ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತಾರೆ, ಚಿತ್ರದ ಕೆಲವೊಂದು ಫ್ರೇಮ್‌ಗಳಲ್ಲಿ  ದರ್ಶನ್ ರ ದುರ್ಯೋಧನನ ಪಾತ್ರವನ್ನು ನೆನಪಿಸುತ್ತಾರೆ, ಇನ್ನು ದೇವಿ ಪಾರ್ವತಿಯ ಪಾತ್ರದಲ್ಲಿ ನಟಿ ರೂಪಾಲಿ ಅವರು ಗಮನ ಸೆಳೆಯುವ ಅಭಿನಯ ನೀಡಿದ್ದಾರೆ, ಗಣೇಶ್‌ರಾವ್  ಕೇಸರಕರ್ ಅವರ ಪುತ್ರ ಪ್ರಜ್ವಲ್ ಕೇಸರಕರ್ ಇಂದ್ರನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸ್ಕಂದನಾಗಿ ಟೆಕ್ವಾಡೋಗರ್ಲ್ ಖ್ಯಾತಿಯ ಬಾಲನಟಿ ರುತು ಸ್ಪರ್ಷ ಅವರ ಅಭಿನಯ ಇಡೀ ಚಿತ್ರದ ಹೈಲೈಟ್. ಉಳಿದ ಪಾತ್ರಗಳೆಲ್ಲವೂ ಚಿತ್ರಕಥೆಗೆ ಪೂರಕವಾಗಿ  ಮೂಡಿಬಂದಿವೆ, 
 
ಜಿಆರ್ ಫಿಲಂಸ್ ಸಂಸ್ಥೆಯು ಮೂಲಕ  ಗಣೇಶ್‌ರಾವ್  ಕೇಸರಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪುರುಷೋತ್ತಮ್ ಓಂಕಾರ್ ಅವರು ಸ್ಕಂದ ಪುರಾಣವನ್ನು ಆಧರಿಸಿ ಈ ಚಿತ್ರವನ್ನು  ನಿರ್ದೇಶಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed