ಮೆಲೋಡಿ ಡ್ರಾಮಾ ನಂಬಿಕೆಯ ತಳಹದಿಯಲ್ಲಿ ನಿಂತಿರುವ ಸಂಬಂಧಗಳು.. 3/5 ***
Posted date: 10 Sat, Jun 2023 09:38:52 PM
ಜೀವನದಲ್ಲಿ ನಂಬಿಕೆ ಎನ್ನುವುದು ಬಹಳ‌ ಮುಖ್ಯ. ನಂಬಿಕೆಯ ಮೇಲೇ ಜೀವನ ನಡೆಯುವುದು ಎಂಬ ಸಂದೇಶವನ್ನು ಮೆಲೋಡಿ ಡ್ರಾಮಾ ಚಿತ್ರದಲ್ಲಿ ನಿರ್ದೇಶಕ ಮಂಜುಕಾರ್ತೀಕ್ ಹೇಳಿದ್ದಾರೆ.

ನಮ್ಮ  ಜೀವನದಲ್ಲಿ ನಡೆಯೋ  ಘಟನೆಗಳು ಒಂದೊಂದು  ಪಾಠವನ್ನು ಕಲಿಸುತ್ತವೆ. ತಾನೇನೆಂದು ಆತನಿಗೆ ಅರಿವಾಗುವ ವೇಳೆಗೆ ಆತನ ಬದುಕೇ ಮುಗಿದುಹೋಗಿರುತ್ತದೆ.  ಗಂಡು ಹೆಣ್ಣಿನ ನಡುವೆ  ನಂಬಿಕೆ ಎನ್ನುವುದು ತುಂಬಾ ಮುಖ್ಯವಾಗುತ್ತೆ, ಆ ನಂಬಿಕೆ ಇಲ್ಲವಾದರೆ ಸಣ್ಣ ಸಣ್ಣ ತಪ್ಪುಗಳೂ ದೊಡ್ಡದಾಗಿ ಕಂಡು ಆ ಸಂಸಾರ ವಿನಾಶದ ಹಾದಿ ತುಳಿಯುತ್ತದೆ. ಅಂಥ ಪ್ರೀತಿಯ ಪಯಣದ ಕಥೆ ಹೇಳುವ ಚಿತ್ರ ಮೆಲೋಡಿ ಡ್ರಾಮಾ. ಮದುವೆ ಮಂಟಪದಿಂದ ಆತಂಕದಲ್ಲೇ ಮದುಮಗಳ ಗೆಟಪ್‌ನಲ್ಲೇ ಹೊರಬರುವ ನಾಯಕಿ ಹಿತಾ(ಸುಪ್ರೀತಾ ಸತ್ಯನಾರಾಯಣ) ಯಾರನ್ನು ಹುಡುಕಿಕೊಂಡು ಹೋಗುತ್ತಾಳೆ. ಮಾಸ್ಕ್ ಹಾಕಿದ್ದ ಅಪರಿಚಿತ ವ್ಯಕ್ತಿಯೊಬ್ಬನ ಜೊತೆ ಆಕೆ ಬೈಕ್‌ನಲ್ಲಿ ಹೊರಡುವ ಮೂಲಕ ತೆರೆದುಕೊಳ್ಳುವ ಕಥೆ ಮುಂದೆ ನಾನಾ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ. ತನ್ನ ಚೈನ್‌ ಕದ್ದ ಕಳ್ಳರ ಜೊತೆ ಹೊಡೆದಾಡುವ ಸಂದರ್ಭದಲ್ಲಿ ಆ ವ್ಯಕ್ತಿಯ ಮುಖ ನೋಡಿದ ಹಿತಾ  ಕೋಪಗೊಳ್ಳುತ್ತಾಳೆ, ಆದರೆ ವಿಧಿಯಿಲ್ಲದೆ ಆತನ ಸಹಾಯದೊಂದಿಗೆ ತನ್ನ ಗೆಳತಿಯನ್ನು ಭೇಟಿಯಾಗುತ್ತಾಳೆ. ಇದರ ನಡುವೆ ಜೀವನದ ಮೌಲ್ಯ, ಪ್ರೀತಿಯ ಸೆಳೆತ, ನಂಬಿಕೆಯ ಬದುಕಿನ ವಿಚಾರ ಇಬ್ಬರ ಮನಸ್ಸನ್ನು ಗೊಂದಲಕ್ಕೀಡುಮಾಡುತ್ತದೆ.  ಮಾರ್ಗ ಮಧ್ಯೆ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಬರುವ ಇವರು ಕತ್ತಲಾದ್ದರಿಂದ   ಹೋಟೆಲ್ ಒಂದರಲ್ಲಿ ರೂಮ್ ಪಡೆಯುತ್ತಾರೆ, ಆದರೆ ಆ ಹೋಟೆಲ್‌ ವೇಶ್ಯಾವಾಟಿಕೆಯ ತಾಣವಾಗಿರುತ್ತೆ, ಪರ ಊರಿನವರಾದ ಕಾರ್ತೀಕ್, ಹಿತಾಗೆ ಅದು ಗೊತ್ತಿರಲ್ಲ, ತಡರಾತ್ರಿ ಪೊಲೀಸ್‌ರೈಡ್ ನಡೆದು ಇವರಿಬ್ಬರೂ ಜೈಲು ಸೇರಬೇಕಾಗುತ್ತದೆ.
 
ಪೋಲೀಸ್ ವಿಚಾರಣೆಯ  ಸಂದರ್ಭದಲ್ಲಿ  ನಾವಿಬ್ಬರೂ ಗಂಡ ಹೆಂಡತಿ ಎಂದು ಹಿತಾ ಒಪ್ಪಿಕೊಳ್ಳುತ್ತಾಳೆ,  ಇಲ್ಲಿಂದ ಕಥೆಗೆ  ಹೊಸ ಟ್ವಿಸ್ಟ್  ಸಿಗುತ್ತದೆ.  ನಂತರ ನಡೆಯುವ  ಕಥೆಯಲ್ಲಿ  ಹಿತಾ, ಕಾರ್ತೀಕ್ ಇಬ್ಬರ ಹಿಂದಿನ ಕಥೆ  ಅನಾವರಣಗೊಳ್ಳುತ್ತಾ ಹೋಗುತ್ತದೆ, ಇವರಿಬ್ಬರ ಬದುಕಿನಲ್ಲಿ ನಡೆದ ಹಲವು ತಿರುವುಗಳನ್ನು ಹೇಳುತ್ತಾ  ಚಿತ್ರ ಕೊನೇ ಹಂತಕ್ಕೆ   ಬಂದು ನಿಲ್ಲುತ್ತದೆ. ಇಲ್ಲಿ ಕಾರ್ತೀಕ್ , ಹಿತಾ ಸತಿಪತಿಗಳಾಗಿದ್ದರೂ ಏಕೆ ದೂರ ದೂರ ಇರುತ್ತಾರೆ,  ಇಬ್ಬರ ನಡುವೆ ಮನಸ್ತಾಪ ಉಂಟಾಗುವಂಥ ಘಟನೆ ಯಾವಾಗ ನಡೆಯಿತು, ಇಲ್ಲಿ  ಕಾರ್ತೀಕ್ ಯಾರು ? ಎನ್ನುವ ಎಲ್ಲ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ  ಉತ್ತರವಿದೆ, ಇದನ್ನೆಲ್ಲ  ತಿಳಿಯಬೇಕಾದರೆ ಮೆಲೋಡಿ ಡ್ರಾಮ ಚಿತ್ರವನ್ನು ತೆರೆಯಮೇಲೆ  ನೋಡಲೇಬೇಕು.
 
ಒಂದು ಭಾವನಾತ್ಮಕ ಪ್ರೀತಿಯ ಪಯಣವನ್ನು  ನಿರ್ದೇಶಕ  ಮಂಜು ಕಾರ್ತಿಕ್ ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ. ಸ್ನೇಹ, ಪ್ರೀತಿ, ನಂಬಿಕೆ, ಸಂಬಂಧ, ತ್ಯಾಗ  ಈ ಎಲ್ಲದರ ಸಮ್ನಿಳಿತವಾಗಿ ಮೆಲೋಡಿ ಡ್ರಾಮಾ ನೋಡುಗರ  ಗಮನ ಸೆಳೆಯುತ್ತದೆ. ಇಡೀ ಚಿತ್ರದಲ್ಲಿ ಕಂಡುಬರುವ ಛಾಯಾಗ್ರಾಹಕ ಮನು ಹಳ್ಳಿ ಅವರ  ಸುಂದರವಾದ ಕ್ಯಾಮೆರಾ ವರ್ಕ್, ಜೊತೆಗೆ ಸದಾ ಗುನುಗುವಂತಿರುವ ಇಂಪಾದ ಹಾಡುಗಳು  ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ  ಕರೆದುಕೊಂಡು ಹೋಗುತ್ತವೆ,  ಸಂಗೀತ ನಿರ್ದೇಶಕ  ಕಿರಣ್  ರವೀಂದ್ರನಾಥ್ ಅದ್ಭಿತವಾದ ಟ್ಯೂನ್ಗಳನ್ನು ಹಾಕಿದ್ದಾರೆ.
 
ಇನ್ನು ನಾಯಕ  ಸತ್ಯ ಮೌನದಲ್ಲೇ  ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ, ಲೋನ್ ರಿಕವರಿ ಹುಡುಗನಾಗಿ  ಗಮನ ಸೆಳೆಯುತ್ತಾರೆ.  ಇನ್ನು ನಾಯಕಿಯಾಗಿ ಅಭಿನಯಿಸಿರುವ ಸುಪ್ರಿತಾ ಸತ್ಯನಾರಾಯಣ ಹಿತಾಳ  ಪಾತ್ರಕ್ಕೆ ಜೀವತುಂಬಿ ಗಮನ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ  ರಂಗಾಯಣ ರಘು ಕೂಡ ಎಂದಿನಂತೆ ತಮ್ಮ ನಟನಾ ಸಾಮರ್ಥ್ಯವನ್ನು ಹೊರಹಾಕಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ಲೇಡಿ ರೌಡಿಯಾಗಿ ಅನು ಪ್ರಭಾಕರ್ ಉತ್ತಮ ಅಭಿನಯ ನೀಡಿದ್ದಾರೆ.  ಉಳಿದಂತೆ  ಬಲ ರಾಜವಾಡಿ, ಲಕ್ಷ್ಮಿ ಸಿದ್ದಯ್ಯ, ಅಶ್ವಿನ್ ಹಾಸನ್, ವಿಶೇಷ ಪಾತ್ರದಲ್ಲಿ  ಚೇತನ್ ಚಂದ್ರ ಇವರೆಲ್ಲ  ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed