ಭವ್ಯಶ್ರೀ ಫಿಲಂಸ್ ಲಾಂಛನದಲ್ಲಿ ೧೫ ವರ್ಷದ ಬಾಲಕಿ ಕುಮಾರಿ ಅನುರಾಧ ಮಹೇಶ್ ಅವರು ನಿರ್ಮಿಸುತ್ತಿರುವ ಚಿತ್ರ ಕರುನಾಡ ಕಣ್ಮಣಿ. ಈ ಹಿಂದೆ ಲೀಲಾ, ನಮ್ಮೂರಲ್ಲಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಲ್.ಮಹೇಶ್ ಕೋಲಾರ ಅವರು ಗಂಡ, ಹೆಂಡತಿ ಹಾಗೂ ಮಕ್ಕಳ ನಡುವಿನ ಸಂಬಂಧಗಳ ಸುತ್ತ ಹೆಣೆಯಲಾದ ಕಥಾನಕ ಹೊಂದಿದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ತನ್ನ ಚಿತ್ರೀಕರಣ ಮುಗಿಸಿಕೊಂಡು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿರುವ ಈ ಚಿತ್ರವು ಮುಂದಿನ ತಿಂಗಳ ಏಪ್ರಿಲ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಹಾಡುಗಳನ್ನು ಅಗಸ್ತ್ಯ ಆಡಿಯೋ ಕಂಪನಿ ಬಿಡುಗಡೆ ಮಾಡಲಿದೆ.
ತಂದೆ, ತಾಯಿಗಳು ತಮ್ಮ ಮಕ್ಕಳ ಏಳಿಗೆಗೋಸ್ಕರ ಏನೇನೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾರೆ, ಆದರೆ ಅದೇ ತಂದೆ, ತಾಯಿಗೆ ಕಷ್ಟಗಳು ಎದುರಾದಾಗ, ಮಕ್ಕಳಾದವರು ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದೇ ಕರುನಾಡ ಕಣ್ಮಣಿ ಚಿತ್ರದ ಕಥಾಹಂದರ. ಮಂಡ್ಯ, ಕೋಲಾರ, ಮುಳಬಾಗಿಲು ಸುತ್ತಮುತ್ತ ಹಾಗೂ ದಾವಣಗೆರೆ ಸಮೀಪದ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಎಸ್. ಕಿರಣ್ ಕುಮಾರ್, ನವೀನ್‌ಕುಮಾರ್, ರವಿ ಹೊಳಲು ಈ ಚಿತ್ರದ ಸಹ ನಿರ್ಮಾಪಕರಾಗಿದ್ದು, ಹರ್ಷ ಕೋಗೋಡು ಅವರ ಸಂಗೀತ ಸಂಯೋಜನೆ, ಶಿವಕುಮಾರ್ ಅವರ ಹಿನ್ನೆಲೆ ಸಂಗೀತ, ಎಸ್.ರೂಪೇಶ್ ಮೊದಲಿಯಾರ್ ಅವರ ಛಾಯಾಗ್ರಹಣ, ಭರತ್ ಸಿ.ಕುಮಾರ್ ಅವರ ಸಂಕಲನ, ಶೇಖರ್‌ರಾಜ್ ಅವರ ಸಹನಿರ್ದೇಶನ, ಶೇಖರ್‌ರಾಜ್-ಗೌರಿಶಂಕರ್ ಅವರ ಸಂಭಾಷಣೆ, ಶ್ರೀತೇಜ್-ಗೌರಿಶಂಕರ್-ಅಭಿನವ ಶ್ರೇಯಸ್ ಅವರ ಸಾಹಿತ್ಯ, ದಶಾವರ ಚಂದ್ರು ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
ಗೌರಿಶಂಕರ್, ಕವಿತಾ, ಭವ್ಯಶ್ರೀ, ತುಳಸಿ, ಶೇಖರ್ ರಾಜ್, ವರುಣ್ ಕುಮಾರ್, ಶಿವಕುಮಾರ್ ಗೌಡ, ಶ್ರೇಯಸ್ ಕಬಾಣಿ ಹಾಗೂ ಕಬಾಬ್ ಮಂಜು ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.