ಹೊಂಬಾಳೆ ಫಿಲಂಸ್ ನಿರ್ಮಾಣದ `ಧೂಮಂ` ಚಿತ್ರದ ಟ್ರೇಲರ್ ಬಿಡುಗಡೆ
Posted date: 09 Fri, Jun 2023 04:23:40 PM
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, `ಧೂಮಂ` ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರವು ಜೂನ್ 23ಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.
 
ವಿಜಯ್ ಕಿರಗಂದೂರು ನಿರ್ಮಾಣದ, `ಲೂಸಿಯಾ` ಮತ್ತು `ಯೂ ಟರ್ನ್` ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
 
ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.
 
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, `ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ
ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ.
 
`ಧೂಮಂ`ಚಿತ್ರದ ಟ್ರೇಲರ್ ಈಗಾಗಲೇ ಬಿಡಗುಡೆಯಾಗಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed