ಮಾರ್ಚ್​ 18ರಂದು ಚಿನ್ಮಯಿ ಶ್ರೀಪಾದ ಅವರಿಂದ ಸುವರ್ಣ ಸಂಜೆ
Posted date: 19 Sun, Feb 2023 02:11:18 PM
ಸಾಫ್ಟ್​ ಲಿಂಕ್ಸ್​ ಸಂಸ್ಥೆಯ ಸುರೇಶ್​ ಬಾಬು ಕಳೆದ ಕೆಲವು ವರ್ಷಗಳಿಂದ ಹಲವು ಸಂಗೀತ ಸಂಜೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಈಗ ಅವರು ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರ ಸಂಗೀತ ಸಂಜೆಯನ್ನು ಮಾರ್ಚ್​ 18ರಂದು ನಗರದ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಆಯೋಜಿಸಿದ್ದಾರೆ.
 
ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ರೇಡಿಯೋ ಜಾಕಿಯಾಗಿ, ಡಬ್ಬಿಂಗ್​ ಕಲಾವಿದೆಯಾಗಿ, ನಿರೂಪಕಿಯಾಗಿಯೂ ಹೆಸರು ಮಾಡಿದ್ದಾರೆ. ಬ್ಲೂ ಎಲಿಫೆಂಟ್​ ಎಂಬ ಸಂಸ್ಥೆಯ ಸಂಸ್ಥಾಯ ಮತ್ತು ಸಿಇಓ ಆಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
 
ಬಾಲ್ಯದಿಂದಲೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ಚಿತ್ರರಂಗಕ್ಕೂ ಬರುವ ಮುನ್ನ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸನ್​ ಟಿವಿಯಲ್ಲಿ ಪ್ರಸಾರವಾದ `ಸಪ್ತಸ್ವರಂಗಳ್` ಎಂಬ ಕಾರ್ಯಕ್ರಮದಲ್ಲಿ ಅವರ ಗಾಯನ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರು ತಮ್ಮ ಸಂಗೀತ ನಿರ್ದೇಶನದ `ಕಣ್ಣತ್ತಿಲ್​ ಮುತ್ತಮಿಟ್ಟಾಲ್` ಚಿತ್ರದ ಒಂದು ಪ್ರಮುಖ ಹಾಡನ್ನು ಹಾಡುವುದಕ್ಕೆ ಅವಕಾಶ ನೀಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಈ ಚಿತ್ರದ `ಒರು ದೈವಂ ತಂದ ಪೂವೆ ...` ಹಾಡಿನಿಂದ ಜನಪ್ರಿಯರಾದ ಚಿನ್ಮಯಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. ತಮಿಳು, ತೆಲುಗು,
ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ನೂರಾರು ಹಾಡುಗಳನ್ನು ಹಾಡಿದ್ದಾರೆ. 
 
`ಹನಿಹನಿ` ಚಿತ್ರದ `ಬೇಡ ಬೇಡ` ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿನ್ಮಯಿ, ನಂತರದ ದಿನಗಳಲ್ಲಿ `ಮಸ್ತ್ ಮಜಾ ಮಾಡಿ`ಚಿತ್ರದ `ಚೋರಿ ಚೋರಿ`, `ಗನ್`ಚಿತ್ರದ `ತಾಜ ತಾಜ ಕನಸುಗಳು`, `ವಿಕ್ರಾಂತ್​ ರೋಣ`ಚಿತ್ರದ `ಹೇ ಫಕೀರಾ`, `ದಿಯಾ` ಚಿತ್ರದ `ಸೌಲ್​ ಆಫ್​ ದಿಯಾ` ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.
 
ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಾಫ್ಟ್​ ಲಿಂಕ್ಸ್​ ಸಂಸ್ಥೆಯಿಂದ `ಸುವರ್ಣ ಸಂಜೆ` ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಚಿನ್ಮಯಿ ಶ್ರೀಪಾದ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಅಂದು ಕನ್ನಡದ ಹಲವು ಜನಪ್ರಿಯ ಹಾಡುಗಳನ್ನು ಹಾಡಲಾಗುವುದು. ಚಿನ್ಮಯಿ ಶ್ರೀಪಾದ ಸಹ ಈ ಸಂದರ್ಭದಲ್ಲಿ ತಾವು ಹಾಡಿರುವ ಕೆಲವು ಜನಪ್ರಿಯ ಹಾಡುಗಳನ್ನು ಲೈವ್​ ಆಗಿ ಹಾಡಲಿದ್ದಾರೆ. ಅವರ ಜತೆಗೆ ಅಜಯ್​ ಕೃಷ್ಣ ಸೇರಿದಂತೆ ಹಲವು ಜನಪ್ರಿಯ ಗಾಯಕ, ಗಾಯಕಿಯರು ಧ್ವನಿಗೂಡಿಸಲಿದ್ದಾರೆ. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
 
ಈ `ಸುವರ್ಣ ಸಂಜೆ` ಕಾರ್ಯಕ್ರಮಕ್ಕೆ 500 ರೂ. ಹಾಗೂ 750 ರೂ.ಗಳ ಟಿಕೆಟ್​ ನಿಗದಿಪಡಿಸಲಾಗಿದ್ದು, ಈ ಸಂಗೀತ ಸಂಜೆಯಿಂದ ಬರುವ ಹಣದ ಒಂದು ಭಾಗವನ್ನು, ಕ್ಯಾನ್ಸರ್​ನಿಂದ ಬಳಲುತ್ತಿರುವ ಹಿರಿಯ ಕಲಾವಿದೆ ಶೈಲಶ್ರೀ ಸುದರ್ಶನ್​ ಅವರ ಚಿಕಿತ್ಸೆಗೆ ಭರಿಸಲಾಗುವುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed