ಹಾಲಿವುಡ್ ನಿರ್ದೇಶಕರಿಂದ ಕನ್ನಡ ಚಿತ್ರ ಜೂನ್ 23ಕ್ಕೆ ಬಿಡುಗಡೆಯಾಗಲಿದೆ `ರೋಡ್ ಕಿಂಗ್`
Posted date: 03 Sat, Jun 2023 12:59:20 PM
ಮತೀನ್ ಹುಸೇನ್ ಅಭಿನಯದ `ರೋಡ್ ಕಿಂಗ್` ಚಿತ್ರವು ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, Randy Kent ಎಂಬ ಹಾಲಿವುಡ್ ನಿರ್ದೇಕರು ಈ ಚಿತ್ರವನ್ನು ನಿರ್ದೇಶಸಿದ್ದಾರೆ.
 
`ರೋಡ್ ಕಿಂಗ್` ಚಿತ್ರದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಮತೀನ್ ಹುಸೇನ್, ಮೂಲತಃ ಬೆಂಗಳೂರಿನವರಾದರೂ ಬೆಳೆದಿದ್ದೆಲ್ಲಾ ಅಮೇರಿಕಾದಲ್ಲಿ. ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಒಂದು ಸಣ್ಣ ಬಜೆಟ್ನ ಚಿತ್ರ ಮಾಡುವುದಕ್ಕೆ ಹೊರಟಾಗ, ಸೂಕ್ತ ನಿರ್ದೇಶಕರು ಸಿಗಲಿಲ್ಲವಂತೆ. ಆಗ ಅವರಿಗೆ ನೆನಪಾಗಿದ್ದೇ ರಾಂಡಿ ಕೆಂಟ್. ಮತೀನ್ ಮತ್ತು ರಾಂಡಿ ಹಳೆಯ ಸ್ನೇಹಿತರು. ಸ್ನೇಹದಲ್ಲಿ ಚಿತ್ರ ಮಾಡಿಕೊಡುವುದಕ್ಕೆ ಕೇಳಿಕೊಂಡಾಗ, ಮೊದಲು ರಾಂಡಿ ಹಿಂದೇಟು ಹಾಕಿದರಂತೆ. ಕಾರಣ, ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಕೊನೆಗೆ ಒಪ್ಪಿ ಅವರು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.
 
ಅಂದಹಾಗೆ, ಈ ಚಿತ್ರದ ನಿರ್ದೇಶನವನ್ನು ದೂರದ ಅಮೇರಿಕಾದಲ್ಲಿದ್ದುಕೊಂಡು ಸ್ಕೈಪ್ ಮೂಲಕವೇ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಬಗ್ಗೆ ಮಾತನಾಡುವ ಮತೀನ್, ‘ಚಿತ್ರೀಕರಣಕ್ಕೆ ಎಲ್ಲ ತಯಾರಿಯೂ ಆಗಿತ್ತು. ಆದರೆ, ರಾಂಡಿಗೆ ವೀಸಾ ಸಿಗಲಿಲ್ಲ. ಎರಡನೆಯ ಬಾರಿಗೂ ಅದೇ ರೀತಿ ಆಯಿತು. ಕೊನೆಗೆ ಅವರು ಸ್ಕೈಪ್ ಮೂಲಕವೇ ಚಿತ್ರ ನಿರ್ದೇಶನ ಮಾಡಿದ್ದಾರೆ’ ಎನ್ನುತ್ತಾರೆ ಮತೀನ್.
 
ಮತೀನ್ ಇದಕ್ಕೂ ಮುನ್ನ ‘ಬಿಂದಾಸ್ ದಾದಾಗಿರಿ’ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದು, ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ `ರನ್ ಆಂಟೋನಿ` ಖ್ಯಾತಿಯ ರುಕ್ಸರ್ ನಟಿಸಿದ್ದು, ಲೀಲಾ ಮೋಹನ್, ಹರೀಶ್ ಸೆಜೆಕೆನ್, ನಯನಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆರಿಫ್ ಲಲಾನಿ ಛಾಯಾಗ್ರಹಣ ಮಾಡಿದ್ದು, ಹಾಲಿವುಡ್ನ ಜನಪ್ರಿಯ ಸೌಂಡ್ ಡಿಸೈನರ್ ಸ್ಕಾಟ್ ವುಲ್ಫ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. 
 
ಈಗಾಗಲೇ ಜಗತ್ತಿನಾದ್ಯಂತ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ರೋಡ್ ಕಿಂಗ್’ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed