ಜೂಲಿಯೆಟ್ 2 ಹೆಣ್ಣುಮಕ್ಕಳಿಗೆ ಸ್ಪೂರ್ತಿದಾಯಕ -3.5/5 ****
Posted date: 26 Sun, Feb 2023 09:12:29 AM
ತಂದೆ ಮಗಳ ನಡುವಿನ ಬಾಂಧವ್ಯದ ಕಥೆ  ಹೊಂದಿರುವ  ಜೂಲಿಯೆಟ್ 2 ಈವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿಕ್ಕವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ  ಜೂಲಿಯೆಟ್‌ (ಬೃಂದಾ ಆಚಾರ್ಯ)ಗೆ ತಂದೆಯೇ ಎಲ್ಲಾ. ನೋಡಿದವರು ಹೊಟ್ಟೆಕಿಚ್ಚು ಪಡುವಂತಿದ್ದ ಅವರಿಬ್ಬರ ಜೀವನದಲ್ಲಿ  ಅನಿರೀಕ್ಷಿತವಾಗಿ  ನಡೆಯುವ ಘಟನೆಯೊಂದು ಆಕೆಯ ಜೀವನದ ಹಾದಿಯನ್ನೇ ಬದಲಾಯಿಸಿಬಿಡುತ್ತದೆ. ಜೂಲಿಯಟ್ ತಂದೆ ರಸ್ತೆ  ಅಪಘಾತವೊಂದರಲ್ಲಿ ಮರಣ ಹೊಂದುತ್ತಾರೆ. ನಿಧನಕ್ಕೂ ಮುನ್ನ  ಮಗಳಿಗೆ  ದೊಡ್ಡ ಜವಾಬ್ದಾರಿಯೊಂದನ್ನು  ಹೊರಿಸಿ ಹೋಗುತ್ತಾರೆ, ಅದೇನೆಂದರೆ ತಮ್ಮ ಪತ್ನಿಯ ಅನಾರೋಗ್ಯದ ಸಂದರ್ಭದಲ್ಲಿ  ಆಕೆಯ ಚಿಕಿತ್ಸೆಗಾಗಿ  ಹಳ್ಳಿಯ ಸ್ವಂತ ಮನೆಯನ್ನು ಸ್ನೇಹಿತರ ಬಳಿ  ಅಡವಿಟ್ಟು  ಹಣ ಪಡೆದಿರುತ್ತಾರೆ. ಆ ಮನೆಯನ್ನು ಹೇಗಾದರೂ ಮಾಡಿ ಬಿಡಿಸಿಕೋ ಎಂದು ಮಗಳಿಗೆ ಹೇಳಿರುತ್ತಾರೆ, ಅದರಂತೆ   ಮನೆ  ಬಿಡಿಸಿಕೊಳ್ಳಲು ಹಣ ಹೊಂದಿಸಿಕೊಂಡು ಜೂಲಿಯೆಟ್ ನಗರದಿಂದ  ಹಳ್ಳಿಯ ಕಡೆಗೆ ಪ್ರಯಾಣ  ಬೆಳೆಸುತ್ತಾಳೆ.  ಹಾದಿಯುದ್ದಕ್ಕೂ  ತಂದೆಯ ಜೊತೆ ಆಡಿ, ಬೆಳೆದ ದಿನಗಳನ್ನು ಮೆಲುಕು ಹಾಕುತ್ತಲೇ ಜೂಲಿಯೆಟ್ ತನ್ನೂರಿಗೆ  ಬಂದಿಳಿಯುತ್ತಾಳೆ, ಆದರೆ ಅದೇದಿನ ನಗರಕ್ಕೆ ತೆರಳಿದ್ದ ತಂದೆಯ ಸ್ನೇಹಿತರು ನಾನು ವಾಪಸ್ ಬರಲು ನಾಳೆಯಾಗುತ್ತದೆ.  ಅಷ್ಟರವರೆಗೆ ನಿಮ್ಮ ಮನೆಯಲ್ಲಿ ಉಳಿದುಕೊಂಡಿರು ಎಂದು ತಮ್ಮ ಮ್ಯಾನೇಜರ್ ಮೂಲಕ  ಆಕೆ ಉಳಿದುಕೊಳ್ಳಲು ಎಲ್ಲಾ  ವ್ಯವಸ್ಥೆ ಮಾಡಿಸುತ್ತಾರೆ. ಅಂದು ರಾತ್ರಿ ಜೂಲಿಯೆಟ್ ಒಬ್ಬಳೇ ಆ ಮನೆಯಲ್ಲಿರಬೇಕಾದ  ಅನಿವಾರ್ಯ ಪರಿಸ್ಥಿತಿ  ಎದುರಾಗುತ್ತದೆ,  ಆದರೆ ಅಂದು ರಾತ್ರಿ ಹಲವಾರು  ಆಗಂತುಕರು ಆ ಮನೆಗೆ  ಬಂದು ಜೂಲಿಯೆಟ್‌ಗೆ  ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಅಲ್ಲಿಗೆ  ಬಂದ ಆ ವ್ಯಕ್ತಿಗಳು ಯಾರು, ಅವರು ಯಾವ ಉದ್ದೇಶದಿಂದ ಆಕೆಯ ಹಿಂದೆ ಬಿದ್ದಿರುತ್ತಾರೆ,  ಅವರನ್ನೆಲ್ಲ  ಜೂಲಿಯೆಟ್ ಒಬ್ಬಳೇ ಇಡೀ ರಾತ್ರಿ ಹೇಗೆ ಎದುರಿಸುತ್ತಾಳೆ, ಕೊನೆಗೂ ಆ ದುಷ್ಟರಿಂದ  ಜೂಲಿಯೆಟ್ ಪಾರಾಗಿ  ಬಂದಳೇ, ತನ್ನ ತಂದೆಯ ಆಸೆಯಂತೆ  ಮನೆಯನ್ನು ತನ್ನಂತೆ ಮಾಡಿಕೊಂಡಳೇ ಎಂಬುದನ್ನು ನಿರ್ದೇಶಕ ವಿರಾಟ್ ಬಿ.ಗೌಡ ಅವರು ಇಂಟರೆಸ್ಟಿಂಗ್ ಆಗಿ   ನಿರೂಪಿಸಿದ್ದಾರೆ.  ಹೆಣ್ಣು ಅಬಲೆಯಲ್ಲ, ಸಿಡಿದು ನಿಂತರೆ, ದುಷ್ಟರಿಗೆ ಚಾಮುಂಡಿಯಾಗುತ್ತಾಳೆ ಎಂದು ನಿರ್ದೇಶಕರು  ಈ ಚಿತ್ರದ ಮೂಲಕ ಹೇಳಿದ್ದಾರೆ.
 
ನಾಡಿನ  ಪ್ರತಿ ಹೆಣ್ಣು ಮಗಳಿಗೂ  ಈ ಚಿತ್ರ ಸ್ಪೂರ್ತಿದಾಯಕವಾಗಿದೆ.  ಪುರುಷಪ್ರದಾನ ಸಮಾಜದಲ್ಲಿ  ತಾನು ಅಬಲೆಯಲ್ಲ  ಎಂಬ  ಆತ್ಮಸ್ಥೈರ್ಯ ತುಂಬುತ್ತದೆ,   ನೆನಪಲ್ಲಿ ಈಗ ಅವಳಿರದ ಜಾಗ ಎಂಬ ಸಾಹಿತ್ಯವಿರುವ   ತಂದೆ ಮಗಳ ನಡುವಿನ  ಬಾಂಧವ್ಯವನ್ನು ಹೇಳುವ  ಹಾಡು ನೋಡುಗರೆಲ್ಲರಿಗೂ  ಆಪ್ತವಾಗುತ್ತದೆ.  ತಾಯಿ ಪ್ರೀತಿ ಕಳೆದುಕೊಂಡು ತಂದೆಯ ಆಸರೆಯಲ್ಲಿ  ಬೆಳೆದಿರೋ ಪ್ರತಿಯೊಬ್ಬ ಹೆಣ್ಣಿಗೂ ಈ ಹಾಡು  ಮನದಾಳವನ್ನು ತಟ್ಟುತ್ತದೆ.  ಚಿತ್ರದಲ್ಲಿ  ಬೃಂದಾ ಆಚಾರ್ಯ ಅವರು  ನಾಯಕಿ ಜ್ಯೂಲಿಯೆಟ್‌ಳ  ಪಾತ್ರವೇ  ತಾನಾಗಿ  ಇಡೀ ಚಿತ್ರವನ್ನು  ಆವರಿಸಿಕೊಂಡಿದ್ದಾರೆ. ಹೆಣ್ಣೊಬ್ಬಳಿಗೆ ತನ್ನೆದುರಿನ ದಾರಿಗಳೆಲ್ಲವೂ ಮುಚ್ಚಿ ಹೋದಾಗ, ಆಕೆ ತನ್ನತನವನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂದು ನಿರ್ದೇಶಕ ವಿರಾಟ್ ಬಿ.ಗೌಡ ಅವರು  ಸಸ್ಪೆನ್ಸ್, ಥ್ರಿಲ್ಲರ್  ಕಥೆಯೊಂದಿಗೆ  ನಿರೂಪಿಸಿದ್ದಾರೆ. 
 
ಪಿಎಲ್ ಪ್ರೊಡಕ್ಷನ್ಸ್ ಅಡಿ ಲಿಖಿತ್ ಆರ್. ಕೋಟ್ಯಾನ್ ಅವರ  ನಿರ್ಮಾಣದ ಈ ಚಿತ್ರದಲ್ಲಿ   ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲಿನ ದಟ್ಟ  ಅರಣ್ಯಪ್ರದೇಶವನ್ನು  ಛಾಯಾಗ್ರಾಹಕ ಶೆಂಟೋ ವಿ. ಅಂಟೋ ಅವರು ತಮ್ಮ ಕ್ಯಾಮೆರಾದಲ್ಲಿ  ರಮಣೀಯವಾಗಿ  ಸೆರೆಹಿಡಿದಿದ್ದಾರೆ. ರವಿ ಬಸ್ರೂರು ಸಹೋದರ ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ  ಹೊಸ ರೂಪವನ್ನೇ ನೀಡಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed