ಚಿತ್ರರಂಗದ ಹಿರಿಯ ಎಸ್‌.ಕೆ ಭಗವಾನ್‌ ವಿಧಿವಶ
Posted date: 20 Mon, Feb 2023 01:54:34 PM

ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್  ಸದಭಿರುಚಿಯ ಚಿತ್ರಗಳ ನಿರ್ದೇಶಕರಾಗಿದ್ದ ದೊರೆ - ಭಗವಾನ್‌ ಜೋಡಿಯ ಭಗವಾನ್‌ ಅವರು ನಮ್ಮನ್ನಗಲಿದ್ದಾರೆ. ಕನ್ನಡ  ಚಿತ್ರರಂಗದಲ್ಲಿ ಬಾಂಡ್‌ ಶೈಲಿಯ ಚಿತ್ರಗಳು, ಕಾದಂಬರಿ ಆಧರಿಸಿದ ಚಿತ್ರಗಳು ಸೇರಿದಂತೆ ಜೋಡಿಯಾಗಿ ನಿರ್ದೇಶಿಸಿದ 27 ಚಿತ್ರಗಳು, ಎ.ಸಿ.ನರಸಿಂಹ ಮೂರ್ತಿ ಅವರೊಂದಿಗೆ ಸೇರಿ ನಿರ್ದೇಶಿಸಿದ ಎರಡು ಚಿತ್ರಗಳು, ತಾವು ಏಕಾಂಗಿಯಾಗಿ ನಿರ್ದೇಶಿಸಿದ ಎರಡು ಚಿತ್ರಗಳಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ತಲಾ ಎರಡು ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಇವಲ್ಲದೆ, ಅವರು ಸಹನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳೂ ಸೇರಿದಂತೆ ಅವರು ಪಾಲ್ಗೊಂಡ ಚಿತ್ರಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು.  ಓದಿನ ದಿನಗಳಿಂದಲೇ ಬಣ್ಣದ ಬದುಕಿಗೆ ಆಕರ್ಷಿತರಾಗಿದ್ದ ಭಗವಾನ್‌ ಅವರು ವೃತ್ತಿ ರಂಗಭೂಮಿಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದರು. ಚಿತ್ರಗಳಲ್ಲಿ ನಟಿಸುವ ಹಂಬಲದಿಂದ ಬಂದು  ನಿರ್ದೇಶಕರಾಗಿ ಯಶಸ್ವಿಯಾದ ಭಗವಾನ್‌ ಅವರು ಕೆಲವು ಚಿತ್ರಗಳ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡದ್ದುಂಟು. ದೊರೆ ಅವರ ನಿಧನದ ನಂತರವೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಭಗವಾನ್‌ ಅವರು ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕೂಡಾ ಕೆಲಸ ಮಾಡಿದ್ದಾರೆ. ತಮ್ಮ 87ನೇ ವಯಸ್ಸಿನಲ್ಲಿ ಚಿತ್ರ ನಿರ್ದೇಶಿಸಿದ್ದ ಭಗವಾನ್‌ ಅವರ ಉತ್ಸಾಹ ಅದಮ್ಯ.   ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಭಗವಾನ್‌ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಶೋಕವ್ಯಕ್ತಪಡಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬವರ್ಗಕ್ಕೆ ಸಂತಾಪ ಸೂಚಿಸುತ್ತದೆ.

 

 
ಹಿರಿಯ ನಿರ್ದೇಶಕ ಭಗವಾನ್ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ತೀವ್ರ ಸಂತಾಪ .
 
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಭಗವಾನ್ ನಿಧನರಾಗಿದ್ದಾರೆ. ಭಗವಾನ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ನಮ್ಮ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯೊಂದಿಗೆ ಭಗವಾನ್ ಅವರ ಒಡನಾಟ ಹೆಚ್ಚಿತ್ತು. ನಮ್ಮ ಸಂಸ್ಥೆಯ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರು ದೊರೆ-ಭಗವಾನ್ ನಿರ್ದೇಶನದ ಹಲವು ಚಿತ್ರಗಳಿಗೆ ಪತ್ರಿಕಾ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಗವಾನ್ ಅವರು ಸಹ ನಮ್ಮ ಸಂಸ್ಥೆಯ ಪ್ರಶಸ್ತಿ ಸಮಾರಂಭಕ್ಕೆ ಹಾಗೂ ಕುಟುಂಬದ ಸಮಾರಂಭಗಳಿಗೆ ಬಂದು ಆಶೀರ್ವದಿಸುತ್ತಿದ್ದರು. ಇಂತಹ ಹಿರಿಯ ಚೇತನ ಭಗವಾನ್ ಅವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತೀವ್ರ ಸಾಂತಾಪ ಸೂಚಿಸುತ್ತದೆ . 
 
ಇಂತಿ
ಸುಧೀಂದ್ರ ವೆಂಕಟೇಶ್
(ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ)


ಖ್ಯಾತ ನಿರ್ದೇಶಕ ಭಗವಾನ್ ನಿಧನಕ್ಕೆ ನಿರ್ಮಾಪಕ ಎಸ್ ಎ ಚಿನ್ನೇಗೌಡ ಸಂತಾಪ 

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಅವರ ನಿಧನ ತುಂಬಾ ನೋವುಂಟು ಮಾಡಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ.    ಭಗವಾನ್ ಅವರಿಗೆ ದೇವರು ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ .

ಇಂತಿ
ಎಸ್ ಎ ಚಿನ್ನೇಗೌಡ 
ನಿರ್ಮಾಪಕರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರು 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed