ಸೆಪ್ಟೆಂಬರ್ 23ರಂದು ``ರಾಜ ರಾಣಿ ರೋರರ್ ರಾಕೆಟ್`` ಚಿತ್ರ ತೆರೆಗೆ
Posted date: 09 Fri, Sep 2022 01:42:08 PM
ಈ ಚಿತ್ರದ ಮೂಲಕ ನೃತ್ಯ ನಿರ್ದೇಶಕ ಭೂಷಣ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. 

 "ಚುಟು ಚುಟು ಅಂತೈತಿ" ಎಂಬ ಜನಪ್ರಿಯ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ನೃತ್ಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಭೂಷಣ್,  ಈಗ "ರಾಜ ರಾಣಿ ರೋರರ್ ರಾಕೆಟ್" ಚಿತ್ರದ ಮುಖಾಂತರ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರ ಸೆಪ್ಟೆಂಬರ್ 23 ರಂದು ತೆರೆಗೆ ಬರುತ್ತಿದೆ.  ಇತ್ತೀಚೆಗೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು.

ನೃತ್ಯ ನಿರ್ದೇಶಕನಾಗಿ "ರಾಂಬೋ 2" ಚಿತ್ರದ ಮೂಲಕ ನನ್ನ ಜರ್ನಿ ಆರಂಭವಾಯಿತು. ನಂತರ "ನಟಸಾರ್ವಭೌಮ", " ರಾಬರ್ಟ್ ", "ಬೆಲ್ ಬಾಟಮ್" ನಂತಹ ಸೂಪರ್ ಹಿಟ್ ಚಿತ್ರಗಳಿಗೆ ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾಯಕನಾಗಬೇಕೆಂಬ ಆಸೆಯಿತ್ತು. ಈ ಚಿತ್ರದ ನಿರ್ದೇಶಕ ಕೆಂಪೇಗೌಡ ಮಾಗಡಿ ಒಳ್ಳೆಯ ಕಥೆ ಹೇಳಿದರು. ನಾಗರಾಜ್ ವಿ ಅಜ್ಜಂಪುರ ನಿರ್ಮಾಣಕ್ಕೆ ಮುಂದಾದರು.
"ರಾಜ ರಾಣಿ ರೋರರ್ ರಾಕೆಟ್" ಎಂದರೆ ನಾಲ್ಕು ಪಾತ್ರಗಳ ಹೆಸರು. ಹಳ್ಳಿಯಲ್ಲಿ ಕೆಲಸ ಮಾಡದೆ ತಿರುಗುತ್ತಿದ್ದ ಹುಡುಗರ ಜೀವನದಲ್ಲಿ ಮುಂದೆ ಏನಾಗುತ್ತದೆ? ಎಂಬುದೇ ಕಥಾಹಂದರ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನೃತ್ಯ ನಿರ್ದೇಶಕ ನಾಯಕನಾಗಿರುವ ಕಾರಣ, ಎಲ್ಲಾ ನೃತ್ಯ ನಿರ್ದೇಶಕರು ನನಗೆ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 23ರಂದು ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಭೂಷಣ್. 

ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಕೆಂಪೇಗೌಡ ಮಾಗಡಿ ಸಹ ಚಿತ್ರದ ಬಗ್ಗೆ ವಿವರಣೆ ನೀಡಿದರು.

ನೃತ್ಯ ನಿರ್ದೇಶಕರಾದ ನಾಗೇಂದ್ರ ಪ್ರಸಾದ್ ಮಾಸ್ಟರ್(ಪ್ರಭುದೇವ ಸಹೋದರ), ಜಗ್ಗು ಮಾಸ್ಟರ್ ಹಾಗೂ ಕಲೈ ಮಾಸ್ಟರ್ ಪತ್ರಿಕಾಗೋಷ್ಠಿಗೆ ಆಗಮಿಸಿ ಭೂಷಣ್ ಹಾಗೂ ತಂಡಕ್ಕೆ ಶುಭ ಕೋರಿದರು. ಭೂಷಣ್ ತಂದೆ - ತಾಯಿ ಸಹ ಆಗಮಿಸಿ, ಮಗನಿಗೆ ಮನಸಾರೆ ಹರಸಿದರು. ಚಿತ್ರದಲ್ಲಿ ಅಭಿನಯಿಸಿರುವ ಮನೋಜ್ ಹಾಗೂ ಸುಷ್ಮಾ ಪಾತ್ರದ ಬಗ್ಗೆ ಮಾತನಾಡಿದರು.

ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಹಾಗೂ ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed