ವಿಹಾನ್​-ಅಂಕಿತಾ ಚಿತ್ರಕ್ಕೆ ನಾಮಕರಣ
Posted date: 21 Sun, Aug 2022 05:41:52 PM
ಪರಂವಃ ಸ್ಟುಡಿಯೋಸ್​ನಡಿ ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿರುವ ಹೊಸ ಚಿತ್ರವು ಕಳೆದ ತಿಂಗಳಷ್ಟೇ ಘೋಷಣೆಯಾಗಿತ್ತು. 

ವಿಹಾನ್​ ಗೌಡ ಮತ್ತು ಅಂಕಿತಾ ಅಮರ್​ ಅಭಿನಯದ ಈ ಚಿತ್ರದ ಹೆಸರನ್ನು ಚಿತ್ರತಂಡ ಹೇಳಿರಲಿಲ್ಲ. ಶನಿವಾರ ಸಂಜೆ ಚಿತ್ರದ ಹೆಸರು ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರಕ್ಕೆ `ಇಬ್ಬನಿ ತಬ್ಬಿದ ಇಳೆಯಲಿ` ಎಂಬ ಹೆಸರನ್ನು ಇಡಲಾಗಿದೆ.

ಪ್ರೀತಿ ಎಂದರೆ ಏನು? ಹಳೆಯ ನೆನಪುಗಳಾ? ನಾಳೆ ಜತೆಯಾಗಿರಬೇಕು ಎಂಬ ಕನಸುಗಳಾ? ದೂರವಾದ ನಂತರದ ಚಡಪಡಿಕೆಯಾ? ಇದೆಲ್ಲದರ ಸಂಗಮವೇ `ಇಬ್ಬನಿ ತಬ್ಬಿದ ಇಳೆಯಲಿ`. 

ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಬೇಷರತ್ತಾಗಿ ಪ್ರೀತಿಸುವುದನ್ನು ಸಂಭ್ರಮಿಸುವ ಚಿತ್ರ. ನಿನ್ನೆ, ಇಂದು ಮತ್ತು ನಾಳೆಯ ಪ್ರೀತಿಯನ್ನು ತೋರಿಸುವ ಚಿತ್ರ. ಪ್ರೇಕ್ಷಕರು ಚಿತ್ರವನ್ನು ನೋಡುತ್ತಾ, ಹಾಡುತ್ತಾ, ನಲಿಯುತ್ತಾ, ತಮ್ಮನ್ನೇ ತಾವು ಮರೆಯುವಂತಹ ಚಿತ್ರ.
 
ಕಾಲೇಜಿನಿಂದ ಪ್ರಾರಂಭವಾಗುವ ಈ ಕಥೆಯು ಪ್ರೌಡಾವಸ್ಥೆಯವಸ್ಥೆಯಲ್ಲಿ ಅಂತ್ಯವಾಗುತ್ತದೆ. ಹೀಗೆ ಒಂದು ದಶಕದ ವಿವಿಧ ಕಾಲಘಟ್ಟವನ್ನು ಈ ಚಿತ್ರವು ಸೂಕ್ಷ್ಮವಾಗಿ ತೋರಿಸಲಿದ್ದು, ಇಲ್ಲಿ ಹಸಿರು ಎಷ್ಟು ಮುಖ್ಯವೋ, ಆಧುನಿಕ ನಗರದೃಶ್ಯಗಳು ಸಹ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ, ಬೇಸಿಗೆಯ ಘಮ, ಚಳಿಗಾಲದ ಹಿತ ಮತ್ತು ಮಳೆಗಾಲದ ಮಾಧುರ್ಯವೂ ಈ ಚಿತ್ರದಲ್ಲಿರಲಿದೆ.

ಈ ಹಿಂದೆ ರಕ್ಷಿತ್​ ಶೆಟ್ಟಿ ಅವರ ಸೆವೆನ್​ ಆಡ್ಸ್​ ಚಿತ್ರಕಥಾ ವಿಭಾಗದಲ್ಲಿ ಸಕ್ರಿಯವಾಗಿ `ಕಿರಿಕ್​ ಪಾರ್ಟಿ` ಮತ್ತು `ಅವನೇ ಶ್ರೀಮನ್ನಾರಾಯಣ` ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಮತ್ತು `ಕಥಾಸಂಗಮ` ಚಿತ್ರದ `ರೇನ್​ಬೋ ಲ್ಯಾಂಡ್` ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್​ ಬೆಳ್ಳಿಯಪ್ಪ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರದ ಕಥೆ ಹೊಸತನ ಕೇಳುವುದರಿಂದ, ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ನಾಯಕ-ನಾಯಕಿಯಾಗಿ ವಿಹಾನ್​ ಮತ್ತು ಅಂಕಿತಾ ಅಮರ್​ ಆಯ್ಕೆಯಾಗಿದ್ದು, ಸದ್ಯದಲ್ಲೇ ಎರಡನೆಯ ನಾಯಕಿಯ ಅಧಿಕೃತ  ಘೋಷಣೆಯಾಗಲಿದೆ. 

ಇದೊಂದು ಸಂಗೀತಮಯ ಪ್ರೇಮಕಥೆಯಾಗಿದ್ದು, ಗಗನ್​ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ನ್ಯೂಯಾರ್ಕ್​ ಫಿಲಂ ಅಕಾಡೆಮಿಯಲ್ಲಿ ಕಲಿತು ಬಂದಿರುವ ಶ್ರೀವತ್ಸನ್​ ಸೆಲ್ವರಾಜನ್​, ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ `ಕಥಾಸಂಗಮ` ಚಿತ್ರದ `ಗಿರ್​ಗಿಟ್ಲೆ`  ಕಥೆಯನ್ನು ನಿರ್ದೇಶಿಸದ್ದ ಶಶಿಕುಮಾರ್​, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

`ಇಬ್ಬನಿ ತಬ್ಬಿದ ಇಳೆಯಲಿ` ಚಿತ್ರದ ಚಿತ್ರೀಕರಣ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed