ಸೈರನ್: ಕೊಲೆಯೊಂದು, ಹತ್ತಾರು ತಿರುವುಗಳು.. 4/5 ****
Posted date: 27 Sat, May 2023 10:38:14 AM
ಒಂದು ಕೊಲೆ ಪ್ರಕರಣವನ್ನು ಕೆದಕುತ್ತಾ ಹೋದಂತೆ ಅದರ ಹಿಂದೆ ಹುದುಗಿರುವ ಹಲವಾರು  ಸತ್ಯಗಳು ಬಯಲಾಗ್ತಾ ಹೋಗುತ್ತವೆ. ಮಣ್ಣಲ್ಲಿ ಹುದುಗಿದ್ದ ಒಂದು ಸ್ಕೂಟಿ ಹಾಗೂ ಬೈಕ್, 2 ಕೊಲೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಇದು ಸೈರನ್ ಚಿತ್ರದ ಎಳೆ. ಬ್ಯಾಂಕ್ ಉದ್ಯೋಗಿಯಾದ  ಶ್ವೇತಾಳನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ನಂತರ ಸುಟ್ಟು ಹಾಕಲಾಗಿರುತ್ತದೆ‌. ಈ ಕೊಲೆಯ ರಹಸ್ಯ ಪತ್ತೆಹಚ್ಚಲು ಹೊರಟ ಪೊಲೀಸ್ ಅಧಿಕಾರಿ (ಶರತ್ ಲೋಹಿತಾಶ್ವ)ಯೂ ಸಹ  ಆಕ್ಸಿಡೆಂಟ್ ನಲ್ಲಿ ಮರಣ ಹೊಂದುತ್ತಾರೆ. ಈ ಕೇಸನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ  ಪ್ರಕರಣದ ಪತ್ತೆಗೆ ವಿಶೇಷ ಪೊಲೀಸ್ ಅಧಿಕಾರಿಯಾಗಿ ಸಮರ್ಥ್(ಪ್ರವೀರ್)ರನ್ನು  ನೇಮಿಸುತ್ತದೆ. ಪೊಲೀಸ್ ತರಬೇತಿ ಪಡೆದು ಆಗಿನ್ನೂ ಕೆಲಸಕ್ಕೆ ಹಾಜರಾಗಿದ್ದ ಉತ್ಸಾಹಿ ಯುವಕ  ಸಮರ್ಥ್ ಈ  ಮರ್ಡರ್ ಕೇಸನ್ನು  ಇನ್‌ವೆಸ್ಟಿಗೇಶನ್ ಮಾಡುವ ಜವಾಬ್ದಾರಿ  ಹೊತ್ತುಕೊಳ್ಳುತ್ತಾರೆ. ಆರಂಭದಲ್ಲಿ   ಕಗ್ಗಂಟಾಗಿ  ಕಂಡ ಈ ಪ್ರಕರಣವನ್ನು  ಕೆದಕುತ್ತಾ ಹೋದಂತೆ ಮತ್ತೊಂದು ಕೊಲೆ ಪ್ರಕರಣಕ್ಕೆ  ಲಿಂಕ್ ಇರುವುದು ಕಂಡುಬರುತ್ತದೆ. ಅದು  ಎನ್‌ಆರ್‌ಐ ಕೇಶವ.  ವಿದೇಶದಲ್ಲಿದ್ದ ಆಸ್ತಿಯನ್ನು ಮಾರಿ   ಭಾರತಕ್ಕೆ ಬಂದ ಕೇಶವ, ಕಂಪನಿ ಆರಂಭಿಸಿ 
ಮದುವೆಯಾಗಿ ಸೆಟಲ್ ಆಗಲು ನಿರ್ಧರಿಸುತ್ತಾನೆ. ಬ್ರೋಕರ್ ತೋರಿಸಿದ ಯುವತಿಯೊಬ್ಬಳನ್ನು ಮದುವೆಯಾಗಿ ಮನೆ ಅಳಿಯನಾಗಿದ್ದ ಕೇಶವ  ಒಮ್ಮೆ  ಪತ್ನಿ ಜೊತೆ ಬೈಕ್ ನಲ್ಲಿ  ಹೋದಾಗ ದುಷ್ಕರ್ಮಿಗಳಿಂದ ಪತ್ನಿಯ ಎದುರೇ ಬರ್ಬರವಾಗಿ ಹತ್ಯೆಯಾಗಿರುತ್ತಾನೆ,  ಕೇಶವ್ ಕೊಲೆಗೂ ಶ್ವೇತಾಳ ಕೊಲೆಗೂ ಇರುವ ಸಂಬಂಧವನ್ನು  ಕೆದಕುತ್ತಾ ಹೋದಂತೆ, ಕೇಶವ್ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದೇ ಶ್ವೇತಾಳನ್ನು ಕೊಲೆಮಾಡಲು ಕಾರಣ ಎನ್ನುವುದು  ತಿಳಿದುಬರುತ್ತದೆ. ಇಲ್ಲಿ ಕೇಶವ್ ಯಾಕೆ ಕೊಲೆಯಾದ, ಆ ಕೊಲೆ ಮಾಡಿಸಿದವರು ಯಾರು, ಕೇಶವ್‌ಗೂ ಶ್ವೇತಾಳಿಗೂ ಏನು ಸಂಬಂಧ, ಶ್ವೇತಾಳನ್ನು ಕೊಲೆ ಮಾಡಿದರ‍್ಯಾರು, ಈ ಎಲ್ಲ  ಪ್ರಶ್ನೆಗಳಿಗೆ  ಉತ್ತರವೇ ಸೈರನ್ ಚಿತ್ರದ ಕ್ಲೈಮ್ಯಾಕ್ಸ್. ಎರಡು ಕೊಲೆಗಳ ಸುತ್ತ ನಡೆಯುವ ಕುತೂಹಲಕರ ಜರ್ನಿಯನ್ನು  ಆರಂಭದಿಂದ ಅಂತ್ಯದವರೆಗೆ ನಿರ್ದೇಶಕ ರಾಜು ವೆಂಕಯ್ಯ ಅವರು ಕುತೂಹಲಕಾರಿ ಯಾಗಿ ತೆಗೆದುಕೊಂಡು ಹೋಗಿದ್ದಾರೆ. ಅದೇ ಚಿತ್ರಕ್ಕಿರುವ ದೊಡ್ಡ ಪವರ್.  ಯುವ ನಾಯಕ  ಪ್ರವೀರ್ ಶೆಟ್ಟಿ  ಒಬ್ಬ  ಯಂಗ್ ಆ್ಯಂಡ್ ಎನರ್ಜಿಟಿಕ್  ಪೋಲೀಸ್ ಪಾತ್ರದಲ್ಲಿ  ಮೊದಲ ಅವಕಾಶದಲ್ಲೇ  ಭರವಸೆ ಮೂಡಿಸಿದ್ದಾರೆ.  ಮೂಲತ: ತೆಲುಗಿನವರಾದ ರಾಜಾ ವೆಂಕಯ್ಯ ಕನ್ನಡ ಭಾಷೆ ಕಲಿತು  ಚಿತ್ರನಿರ್ದೇಶನ ಮಾಡಿರುವುದು ವಿಶೇಷ.  ಐದು ನಿಮಿಷ ಕೂಡ ಆಚೀಚೆ ಕದಲದಂತೆ ನೋಡಿಸಿಕೊಂಡು ಹೋಗುವಂತೆ ಚಿತ್ರನಿರೂಪಣೆ ಮಾಡಿದ್ದಾರೆ.  ಅಪರಾಧಿಗಳು ಪ್ರೇಕ್ಷಕರ ಕಣ್ಣಮುಂದೇ ಇದ್ದರೂ  ಇವರೇ ಎಂದು  ಗೆಸ್ ಮಾಡಲು ಆಗದಂತೆ ಟೈಟಾದ ಕಥೆಯನ್ನು ಹೆಣೆದುಕೊಂಡಿದ್ದಾರೆ. ಪ್ರೇಕ್ಷಕರ ಗಮನ  ಬೇರೆಡೆ ಸೆಳೆಯಲು  ಒಂದಷ್ಟು ಪಾತ್ರಗಳನ್ನು ಆರೋಪಿಗಳಾಗಿ ಬಿಂಬಿಸಲಾಗಿದೆ. ಸಣ್ಣಪುಟ್ಟ ಮಿಸ್ಟೇಕ್ಸ್  ಬಿಟ್ಟರೆ ನಿಜಕ್ಕೂ  ಸೈರನ್ ಉತ್ತಮ ಮನರಂಜನಾತ್ಮಕ ಥ್ರಿಲ್ಲರ್ ಚಿತ್ರ ಎನ್ನಬಹುದು. ಆದರೆ ಚಿತ್ರ ಜನರಿಗೆ ತಲುಪಬೇಕಷ್ಟೇ. ಹೊಸಬರನ್ನು ಇಟ್ಟುಕೊಂಡೂ ಉತ್ತಮ ಚಿತ್ರವೊಂದನ್ನು ಕೊಡಬಹುದು ಎಂದು ನಿರ್ಮಾಪಕ ಬಿಜು ಶಿವಾನಂದ್ ಅವರು  ನಿರೂಪಿಸಿದ್ದಾರೆ. ಈಗಾಗಲೇ ಪ್ರವೀರ್ ಜೊತೆ ಮತ್ತೊಂದು ಪ್ರಾಜೆಕ್ಟ್ ಮಾಡಲು ಸಹ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.
ಚಿತ್ರದಲ್ಲಿ  ನಾಗೇಶ್ ಆಚಾರ್ಯ ಅವರ ಕ್ಯಾಮೆರಾವರ್ಕ್ ಉತ್ತಮವಾಗಿದೆ, ಭಾರದ್ವಾಜ್  ಅವರ ಮ್ಯೂಸಿಕ್  ಚಿತ್ರದ ಮತ್ತೊಂದು ಹೈಲೇಟ್ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed