ಅಘೋರ ಟ್ರೈಲರ್ ಬಿಡುಗಡೆ
Posted date: 05 Sun, Dec 2021 05:28:33 PM
ಪ್ರಕೃತಿಗೂ ಸಾವಿಗೂ ಇರುವ ಸಂಬಂಧ, ಮನುಷ್ಯನ ಸಾವಿನ ನಂತರ ಮತ್ತೊಂದು ಜನ್ಮ ಪಡೆಯುವ ಅಂತರದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಪಂಚಭೂತಗಳ ಮೂಲಕ  ಹೇಳುವ ಪ್ರಯತ್ನವೇ ಅಘೋರ. ಎನ್.ಎಸ್.ಪ್ರಮೋದ್‌ರಾಜ್ ಅವರ  ನಿರ್ದೇಶನದಲ್ಲಿ ಮೂಡಿಬಂದಿರುವ  ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರಿನಲ್ಲಿ  ನೆರವೇರಿತು. ಈ ಹಿಂದೆ ಕವಿ ಎಂಬ ಚಿತ್ರ ನಿರ್ಮಿಸಿದ್ದ ಪುನೀತ್ ಎಂ.ಎನ್. ಅವರು ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. 
 
ಪ್ರತಿಯೊಂದು ಜೀವರಾಶಿಯೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಹುಟ್ಟು ಎನ್ನುವುದು ಪ್ರಕೃತಿನಿಯಮ, ಆದರೆ ಸಾವು, ಯಾರಿಂದ ಯಾವಾಗ ಹೇಗೆ ಆಗಬೇಕು ಎಂದು ಕಾಲ ನಿರ್ಣಯಿಸುತ್ತದೆ. ಈ ಕರ್ಮ ಹೇಗೆ ವರ್ಕ್ ಆಗುತ್ತದೆ ಎಂಬುದನ್ನು ವಿಭಿನ್ನ ಹಾರರ್ ಕಾನ್ಸೆಪ್ಟ್ ಮೂಲಕ  ಚಿತ್ರತಂಡ ಹೇಳಹೊರಟಿದೆ. ಈ ಚಿತ್ರದಲ್ಲಿ ಒಂದೇ ಹಾಡಿದ್ದು, ಡಾ.ವಿ.ನಾಗೇಂದ್ರಪ್ರಸಾದ್ ಇದಕ್ಕೆ ಸಾಹಿತ್ಯ ಸಂಗೀತ ಒದಗಿಸಿದ್ದಾರೆ. ಮುರಳೀಧರನ್ ಅಘೋರ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.  ಚಿತ್ರದ ನಿರ್ಮಾಪಕ ಕಮ್ ನಾಯಕ ಪುನೀತ್ ಗೌಡ ಮಾತನಾಡುತ್ತ ನಿರ್ದೇಶಕರು ಈ ಕಥೆ ಹೇಳಿದಾಗ ತುಂಬಾ ಇಂಪ್ರೆಸ್ ಆದೆ. ಪ್ರಕೃತಿಯನ್ನು ಇಟ್ಟುಕೊಂಡು ಮಾಡಿರುವ ಈ ಕಥೆ ನನಗೆ ಇಷ್ಟವಾಯಿತು. ಈಗಿನ ಟ್ರೆಂಡ್‌ಗೆ ತಕ್ಕಂತೆ ಒಂದು ಸ್ಪೆಷಲ್ ಹಾಡನ್ನು ನಾಗೇಂದ್ರಪ್ರಸಾದ್ ಅವರು ಮಾಡಿಕೊಟ್ಟಿದ್ದಾರೆ. ಹಾರರ್ ಚಿತ್ರ ಎಂದಾಗ ಅಲ್ಲಿ ರೀರೆಕಾರ್ಡಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಮುರಳೀಧರ್ ಅವರು ಪರಿಣಾಮಕಾರಿಯಾಗಿ  ಮಾಡಿಕೊಟ್ಟಿದ್ದಾರೆ. ನನ್ನ ಹಿಂದಿನ ಚಿತ್ರದಲ್ಲಿ ಆದ ಅನುಭವದಿಂದ ಈ ಚಿತ್ರ ಮಾಡಿದ್ದೇನೆ ಎಂದರು. 
 
ನಂತರ ಮಾತನಾಡಿದ ನಿರ್ದೇಶಕ ಪ್ರಮೋದ್‌ರಾಜ್ ನಿರ್ಮಾಪಕರ ಹಿಂದಿನ ಚಿತ್ರದಲ್ಲಿ ನಾನು ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿದ್ದೆ. ಆಗಲೇ ಹುಟ್ಟಿದ ಕಥೆಯಿದು. ಕಾಸ್ಮಿಕ್ ಎನರ್ಜಿ ಮೇಲೆ ಮಾಡಿದ ಈ ಚಿತ್ರದಲ್ಲಿ ನೇಚರ್‌ಗೂ ಸಾವಿಗೂ ಇರುವ ಸಂಬಂಧವೇನು ಅಂತ ಹೇಳಿದ್ದೇನೆ. ಅ-ಘೋರ ಇದು ಅಘೋರಿಗಳ ಕಥೆಯಲ್ಲ, ಸಾವು ಹೇಗೆ ಬರುತ್ತೆ, ಏನು ಮುನ್ಸೂಚನೆ ಕೊಡುತ್ತೆ, ಹುಟ್ಟು-ಸಾವುಗಳ ಗ್ಯಾಪ್‌ನಲ್ಲಿ ಏನು ನಡೆಯುತ್ತೆ ಅನ್ನೋದೇ ಈ ಸಿನಿಮಾ. ಉಪೇಂದ್ರ ಮತ್ತೆ ಹುಟ್ಟಿಬಾ ಚಿತ್ರದ  ಶೂಟಿಂಗ್ ಸಮಯದಲ್ಲಿ ಅಘೋರಿಯೊಬ್ಬರು ಪರಿಚಯವಾಗಿ ನನಗೆ ಕೊಟ್ಟ ಒಂದಷ್ಟು ಮಾಹಿತಿಗಳನ್ನು ಈ ಸಿನಿಮಾ ಮಾಡಿದ್ದೇನೆ.  ಈಗಾಗಲೆ ೩೦ರಿಂದ ೩೨ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಮನುಷ್ಯನಿಗೂ ಪ್ರಕೃತಿಗೂ ಇರುವ ಸಂಬಂಧವನ್ನು ಆಕಾಶ, ಭೂಮಿ, ಬೆಂಕಿ ಗಾಳಿಯಂಥ ಪಂಚಭೂತಗಳ ಮೂಲಕ  ಹೇಳಲಾಗಿದ್ದು, ಇದರಲ್ಲಿ ನಾನು ಆಕಾಶ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕರಲ್ಲೊಬ್ಬರಾದ  ಪುನೀತ್‌ಗೌಡ ಹೇಳಿಕೊಂಡರು. ಮತ್ತೊಬ್ಬ  ನಟ ಅಶೋಕ್ ಮಾತನಾಡಿ ಪಂಚಭೂತಗಳನ್ನು ಪ್ರತಿನಿಧಿಸುವ ಪಾತ್ರಗಳಲ್ಲಿ ನಾನು  ಅಗ್ನಿಯ ಪಾತ್ರ ಮಾಡಿದ್ದೇನೆ. ಅಚಾನಕ್ ಆಗಿ  ನಾನು ಇವರನ್ನು ಮೀಟ್ ಮಾಡಿದಾಗ ಇವರ ಜೊತೆ ಸೇರಿಕೊಳ್ಳುತ್ತೇನೆ ಎಂದರು. 
 
ಚಿತ್ರದಲ್ಲಿ ರಚನಾ ದಶರಥ್ ಹಾಗೂ ದ್ರವ್ಯಶೆಟ್ಟಿ ಎಂಬ ಇಬ್ಬರು ನಾಯಕಿಯರಿದ್ದು, ಮೊದಲಿಗೆ ಮಾತನಾಡಿದ ರಚನಾ ನಾನು ಭೂಮಿಯ ಪಾತ್ರ ಮಾಡಿದ್ದೇನೆ ಎಂದರು. ದ್ರವ್ಯಶೆಟ್ಟಿ ಮಾತನಾಡಿ ಚಿತ್ರದಲ್ಲಿ ನನ್ನ ಹೆಸರು ಪ್ರಕೃತಿ, ಮನುಷ್ಯ ಪ್ರಕೃತಿಗೆ ಹಾನಿ ಉಂಟು ಮಾಡಿದಾಗ ಅದು ಹೇಗೆ ಭಯಾನಕವಾಗುತ್ತದೆ ಎಂದು ಹೇಳಲಾಗಿದೆ. ಇದೊಂದು ವೈಜ್ಞಾನಿಕ ಹಿನ್ನೆಲೆ ಇರುವ ಚಿತ್ರ ಎಂದು ಹೇಳಿದರು. ಸಾಹಿತಿ, ಸಂಗೀತ ನಿರ್ದೇಶಕ ನಾಗೇಂದ್ರಪ್ರಸಾದ್ ಮಾತನಾಡಿ ಚಿತ್ರದಲ್ಲಿ ಒಂದೇ ಹಾಡಿದ್ದು, ಅದು ಪಾರ್ಟಿಸಾಂಗ್ ಆಗಿರುವುದರಿಂದ  ಸಂಚಿತ್ ಹೆಗ್ಡೆ, ಹನುಮಂತು, ಸಚಿನ್ ಹೀಗೆ ಮರ‍್ನಾಲ್ಕು ಗಾಯಕರು ದನಿಯಾಗಿದ್ದಾರೆ ಎಂದು ಹೇಳಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed