ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ಕಂಡಿರುವೆ - ದ್ವಾರಕೀಶ್
Posted date: 29 Mon, Aug 2022 09:45:05 AM
ಕನ್ನಡ ಚಿತ್ರರಂಗದ ಕುಳ್ಳರೆಂದು ಖ್ಯಾತರಾಗಿರುವ ಹೆಸರಾಂತ ನಟ,ನಿರ್ದೇಶಕ ಮತ್ತು ನಿರ್ಮಾಪಕ ದ್ವಾರಕೀಶ್‌ಗೆ ಇದೇ ೧೯ರಂದು ೮೦ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸನ್ಮಾನ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಗೌರವ ಸ್ವೀಕರಿಸಿ ಮಾತನಾಡಿದ ದ್ವಾರಕೀಶ್ ಐದೂವರೆ ದಶಕದ ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ನೋಡಿದ್ದೇನೆ. ಮಾವ ಹುಣಸೂರುಕೃಷ್ಣಮೂರ್ತಿಗಳು ೧೯೬೦ರಲ್ಲಿ ವೀರಸಂಕಲ್ಪ ಚಿತ್ರದಲ್ಲಿ ಪರಿಚಯಿಸಿದರು. ೧೯೬೫ರಲ್ಲಿ ಮಮತೆಯಬಂದನ ಚಿತ್ರ ನಿರ್ಮಾಣ ಮಾಡುವುದರ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡೆ. ಅಂದು ಅದಕ್ಕೆ ಖರ್ಚಾಗಿದ್ದು ೪೦,೦೦೦. ಬೆಂಗಳೂರಿನಿಂದ ಮದ್ರಾಸ್‌ಗೆ ವಿಮಾನದಲ್ಲಿ ಪ್ರಯಾಣ ಮಾಡಿದ ಟಿಕೆಟ್ ಶುಲ್ಕ ರೂ.೪೩. ಫಿಯೆಟ್ ಕಾರಿಗೆ ಪೂರ್ತಿ ಟ್ಯಾಂಕ್ ಪೆಟ್ರೋಲ್ ಹಾಕಿಸಿದರ ಮೊತ್ತ ರೂ.೨೯. ಸತ್ಯಹರಿಶ್ಚಂದ್ರ ಚಿತ್ರಕ್ಕೆ ಸಂಭಾವನೆ ರೂ.೭೫೦, ಬಂಗಾರದ ಮನುಷ್ಯ ಚಿತ್ರಕ್ಕೆ ೪೦೦೦. ಡಾ.ರಾಜ್‌ಕುಮಾರ್ ನಂತರ ನಾನೇ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದು ಅಂತ ಹೇಳಬಹುದು.

ವರದಪ್ಪನ ಸಹಕಾರದಿಂದ ಮೇಯರ್ ಮುತ್ತಣ್ಣ ನಿರ್ಮಾಣ ಮಾಡಿದ್ದು, ಡಾ.ರಾಜ್‌ಕುಮಾರ್ ನಟಿಸಿದ್ದರು. ಒಂದು ಕಾಲದಲ್ಲಿ ಡಾ.ರಾಜ್‌ಕುಮಾರ್-ನರಸಿಂಹರಾಜು, ತರುವಾಯ ಡಾ.ರಾಜ್‌ಕುಮಾರ್-ದ್ವಾರಕೀಶ್ ಎನ್ನುವಂತೆ ಆಯಿತು. ೫೪ ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಇದರಲ್ಲಿ ೧೯ ಚಿತ್ರಗಳು ವಿಷ್ಣುವರ್ಧನ್ ಆಗಿರುತ್ತದೆ. ಶಂಕರ್‌ನಾಗ್‌ರೊಂದಿಗೆ ೩ ಚಿತ್ರಗಳು. ರಜನಿಕಾಂತ್ ಕರೆದು ಚಿತ್ರ ಮಾಡು ಎಂದು ಕಾಲ್‌ಶೀಟ್ ಕೊಟ್ಟರು. ಇವರೆಲ್ಲರನ್ನು ಇಂದು ನೆನಪಿಸಿಕೊಳ್ಳಲೇ ಬೇಕಾಗಿದೆ, ನೋವು-ನಲಿವು ಎರಡನ್ನು ಎದುರಿಸಿದ್ದೇನೆ. ಸುಮಾರಾಗಿ ತೆಗೆದ ನೀ ಬರೆದ ಕಾದಂಬರಿ ಸೂಪರ್ ಹಿಟ್ ಆಯಿತು. ಮುತುವರ್ಜಿ ವಹಿಸಿ ತೆಗೆದ ನೀ ತಂದ ಕಾಣಿಕೆ ಡಬ್ಬ ಆಯಿತು. ಎಲ್ಲವು ನಮ್ಮ ಕೈಯಲ್ಲಿ ಇರುವುದಿಲ್ಲ. ದೇವರ ಮುಂದೆ ಏನು ನಡೆಯದು. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡು, ಅದರ ಮಜಾನೇ ಬೇರೆ ಇರುತ್ತದೆಂದು ಪುಟ್ಟಣ್ಣಕಣಗಾಲ್ ಹೇಳಿದಂತೆ ಹೊಸಬರಿಗೆ ಅವಕಾಶಗಳನ್ನು ಕೊಡುತ್ತಾ ಬಂದೆ.

ಎಲ್ಲಾ ಮನೆಗಳನ್ನು ಮಾರಿದ್ದೇನೆ. ಆದರೆ ಮಂತ್ರಾಲಯದಲ್ಲಿ ಕಟ್ಟಿಸಿರುವ ಮನೆ ಮಾರಲಿಕ್ಕೆ ಆಗುವುದಿಲ್ಲ. ೧೯೮೧ರಲ್ಲಿ ವಿದೇಶಿ ಕಾರನ್ನು ಖರೀದಿಸಿದವನು ನಾನೇ ಅಂತ ಹೆಮ್ಮೆಯಿಂದ ಹೇಳಬಹುದು. ಮದ್ರಾಸ್‌ನಲ್ಲಿ ೧೨೦-೧೨೫ ಅಡಿ ಚದರ ಮನೆಯನ್ನು ಮಾರಾಟ ಮಾಡಿದಾಗ ಬೇಸರ ಆಗಲಿಲ್ಲ. ಮುನ್ನೂರು ಚಿತ್ರಗಳಲ್ಲಿ ನಟಿಸಿರುವೆ. ಆಸ್ತಿ ಏನು ಮಾಡಲಿಲ್ಲ ಎನ್ನುವ ಚಿಂತೆ ಇಲ್ಲ. ನಾಳೆ ನಾನು ಸತ್ತಾಗ ನನ್ನ ನೋಡಲಿಕ್ಕೆ ಕಲಾವಿದರು ಬರುತ್ತಾರೆ. ಅದೇ ನಾನು ಸಂಪಾದಿಸಿರುವ ದೊಡ್ಡ ಆಸ್ತಿ. ಎಲ್ಲವನ್ನು ಚೆನ್ನಾಗಿ ಅನುಭವಿಸಿರುವೆ. ನಿಮ್ಮಗಳ ಪ್ರೀತಿ ಸದಾ ಹೀಗೆ ಇರಲಿ ಎಂದು ದೀರ್ಘ ಕಾಲದ ಮಾತಿಗೆ ವಿರಾಮ ಹಾಕಿದರು.

ಸಮಾರಂಭದಲ್ಲಿ ಹಿರಿಯ ನಟ ಶ್ರೀನಾಥ್, ಹಿರಿಯ ನಟಿಯರಾದ ಭವ್ಯಾ, ಪ್ರಮೀಳಾಜೋಷಾಯ್,  ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್, ಎಸ್.ಎ.ಚಿನ್ನೆಗೌಡ, ನೆ.ಲ.ನರೇಂದ್ರಬಾಬು ಮುಂತಾದವರು ದ್ವಾರಕೀಶ್ ಸಾಧನೆ, ನೆನಪುಗಳನ್ನು ಹಂಚಿಕೊಂಡರು. ಮಂಡಳಿಯ ಪದಾಧಿಕಾರಿಗಳು ಉಪಸ್ತಿತರಿದ್ದರು.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed