``ಸೂತ್ರಧಾರಿ`` ಯಾದ ಚಂದನ್ ಶೆಟ್ಟಿ.
Posted date: 08 Sat, Oct 2022 05:18:46 PM
ಗಾಯಕನಾಗಿ, ಗೀತರಚನೆಕಾರನಾಗಿ,‌ ಸಂಗೀತ ನಿರ್ದೇಶಕನಾಗಿ ಜನಪ್ರಿಯತೆ ಪಡೆದಿರುವ ಚಂದನ್ ಶೆಟ್ಟಿ,  ಈಗ ನಾಯಕನಾಗೂ‌ ಚಿರಪರಿಚಿತ. ಪ್ರಸ್ತುತ ಚಂದನ್ ಶೆಟ್ಟಿ "ಸೂತ್ರಧಾರಿ" ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಅವರು ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ. 
"ಸೂತ್ರಧಾರಿ" ಚಿತ್ರದ ಚಿತ್ರೀಕರಣ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.‌ ಮೈ ಮೂವೀ ಬಜಾರ್ ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗೂ ಕಾರ್ಯ ನಿರ್ವಹಿಸಲಿದ್ದಾರೆ.
ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಗೋವಿಂದರಾಜು, ಸಂಜಯ್ ಗೌಡ,  ಗಿರೀಶ್(iflix) ಹಾಗೂ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮುಂತಾದವರು ಸಮಾರಂಭಕ್ಕೆ ಆಗಮಿಸಿ "ಸೂತ್ರಧಾರಿ"ಗೆ ಶುಭ ಕೋರಿದರು.

ಇದು ನನ್ನ ನಿರ್ಮಾಣದ ಐದನೇ ಚಿತ್ರ. ಈವರೆಗೂ ನಮ್ಮ ಸಂಸ್ಥೆಯ ಮೂಲಕ 180ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನದೊಂದಿಗೆ ವಿತರಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ
 "ಸೂತ್ರಧಾರಿ" ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ‌ ತಂಡದವರೇ ಆದ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ನಾಯಕನಾಗಿ, ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ‌ಇದೇ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ನವರಸನ್.

ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ
"ಎಲ್ರ ಕಾಲೆಳಿಯುತ್ತೆ ಕಾಲ". ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ. 
"ಸೂತ್ರಧಾರಿ" ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು.

"ಸೂತ್ರಧಾರಿ" ಎಲ್ಲರಿಗೂ ಮೆಚ್ಚುಗೆಯಾಗುವಂತಹ ಕಥಾಹಂದರ ಹೊಂದಿದೆ. ನಾನು ನವರಸನ್ ಅವರ ಬಳಿ ಸಹ ನಿರ್ದೇಶಕನಾಗಿ  ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡಿದ್ದೇನೆ.‌ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದ್ದ ನಿರ್ದೇಶಕ ಕಿರಣ್ ಕುಮಾರ್, ಅವಕಾಶ ಕೊಟ್ಟ ನವರಸನ್ ಅವರಿಗೆ ಧನ್ಯವಾದ ತಿಳಿಸಿದರು.

ತಮ್ಮ ಪಾತ್ರದ ಬಗ್ಗೆ ‌ನಾಯಕಿ ಅಪೂರ್ವ, ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್ ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಗೀತರಚನೆ ಮಾಡಿ, ಸಂಭಾಷಣೆ ಬರೆದಿರುವ ಕಿನಾಲ್ ರಾಜ್ ಹಾಗೂ ಸಂಕಲನಕಾರ ಸತೀಶ್ ಚಂದ್ರಯ್ಯ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed