`ಬೈರಾಗಿ` ಮೊದಲ ಹಾಡು ಬಿಡುಗಡೆ ಮಾಡಿದ `ಭೀಮ`
Posted date: 03 Tue, May 2022 08:34:31 PM
ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ `ಬೈರಾಗಿ` ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಹಾಡನ್ನು ಸ್ಯಾಂಡಲ್`ವುಡ್ `ಭೀಮ` ನಿಂದ ಅನಾವರಣಗೊಳಿಸಿದೆ ಚಿತ್ರತಂಡ. ಸಿನಿಮಾದಲ್ಲಿ ಈ ಹಾಡು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳಿನ್ ಬ್ಯಾಂಡು ಬಜಾಯಿಸಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿದ್ದಾರೆ.

`ನಕ್ಕರನಖ ನಕ್ಕರನಖ ನುಗ್ಗಿಬಂತೋ ನಾಡಹುಲಿ...`
`ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ...`ಎಂಬ ಹಾಡು ಅಕ್ಷಯ ತೃತೀಯ ವಿಶೇಷ ದಿನದಂದು ವಿಜಯ್ ಕುಮಾರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. `ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ` ಅನ್ನೋದು ವಿಜಿ ಮಾತು.

`ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್`ಫುಲ್ ಕಾಸ್ಟ್ಯೂಮ್`ನಲ್ಲಿ ಶಿವಣ್ಣಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ` ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್. 

ವಿಜಯ್ ಮಿಲ್ಟನ್‌ ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ `ಬೈರಾಗಿ`ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಗೌಡ ಈ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed